ಪೂರ್ವ ಮಾಹಿತಿ ಇಲ್ಲದೆ ಬಸವ ಮಂಟಪ ಪುಸ್ತಕ ಬಿಡುಗಡೆಯಲ್ಲಿ ಭಾಗಿ

ಬಸವ ಮಂಟಪ ಕೃತಿ ವಿವಾದಕ್ಕೆ ವಿಭೂತಿಪುರ ಶ್ರೀಗಳ ಸ್ಪಷ್ಟನೆ
Dr. Mahantalinga Shivacharya Swamiji of Vibhutipura Matha
ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು
Published on: 

ಲೇಖಕ ರವಿ ಹಂಜ್ ಅವರ ಬಸವ ಮಂಟಪ ಕೃತಿಯ ಕುರಿತು ಹಾಗೂ ಸಂದರ್ಶನದಲ್ಲಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿರುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗಿ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಲೇಖಕರು ಬಸವ ಮಂಟಪ ಕೃತಿಯ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ, ಬಸವಣ್ಣನವರ ಕುರಿತು ಉತ್ತಮವಾದ ವಿಚಾರಗಳು ಹಾಗೂ ಮಾಹಿತಿ ಇರಬಹುದು ಹಾಗೂ ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಬಹುದೆಂದು ಭಾವಿಸಿ, ಸಮಾರಂಭದಲ್ಲಿ ಭಾಗವಹಿಸಿದ್ದು, ಕೃತಿಯಲ್ಲಿರುವ ವಿಚಾರಗಳೂ ಹಾಗೂ ಅವರ ಅಭಿಪ್ರಾಯಗಳು ನಮಗೆ ಸಂಬಂಧವಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ವೀರಶೈವ ಮತ್ತು ಲಿಂಗಾಯತ ಸಮಾಜ ಒಂದೇ ಎಂಬುದು ನಮ್ಮ ಭಾವನೆ ಹಾಗೂ ನಂಬಿಕೆ. ಈ ಅಭಿಪ್ರಾಯವನ್ನೇ ಪ್ರಾರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇವೆ. ಸಮಾಜದ ಸಂಘಟನೆ, ಐಕ್ಯತೆ ಮತ್ತು ಬಸವಾದಿ ಶರಣರ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಸಮಾರಂಭದಲ್ಲಿ ಮಾತನಾಡಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಕೃತಿಯಲ್ಲಿರುವ ವಿವಾದಾತ್ಮಕ ವಿಚಾರಗಳನ್ನು ಸಮರ್ಥಿಸಿಲ್ಲ. ನಮ್ಮ ಎಲ್ಲಾ ಕಾರ್ಯಕ್ರಮದಲ್ಲಿ ಆಚಾರ್ಯರ ಸಂದೇಶಗಳನ್ನು ಮತ್ತು ಬಸವಾದಿ ಶರಣರ ವಚನಗಳನ್ನು ಉಲ್ಲೇಖಿಸುತ್ತಾ ಅವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿಕೊಂಡು ಬಂದಿರುವುದಾಗಿ ಶ್ರೀಗಳು ವಿವರಿಸಿದ್ದಾರೆ.