

ಬೆಂಗಳೂರು: ಮನೆ ಖರೀದಿದಾರರಿಗೆ ಫ್ಲ್ಯಾಟ್ಗಳನ್ನು ಹಸ್ತಾಂತರಿಸದೆ, ಅವರು ಪಾವತಿಸಿದ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಓಝೋನ್ ಗ್ರೂಪ್ಗೆ ಸೇರಿದ ₹ 702.70 ಕೋಟಿ ಮೌಲ್ಯದ ಸ್ಥಿರಾಸ್ತಿ ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
ಓಝೋನ ಗ್ರೂಪ್ನ ಎಂ.ಡಿ ಹಾಗೂ ಸಿಎಂಡಿ ಎಸ್.ವಾಸುದೇವನ್ ಅವರ ನಿಯಂತ್ರಣದಲ್ಲಿರುವ ವಿವಿಧ ಕಂಪನಿಗಳಿಗೆ ಸೇರಿದ ಫ್ಲ್ಯಾಟ್ಗಳು ಮತ್ತು ಜಮೀನುಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರು ವಲಯ ಕಚೇರಿ ನ. 25ರಂದು ಹೊರಡಿಸಿರುವ ಪ್ರಾವಿಷನಲ್ ಅಟ್ಯಾಚ್ಮೆಂಟ್ ಆರ್ಡರ್ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಓಝೋನ್ ಗ್ರೂಪ್ನ ವಿವಿಧ ಕಂಪನಿಗಳು ವಸತಿ ಯೋಜನೆಗಳ ಹೆಸರಿನಲ್ಲಿ ಮನೆ ಖರೀದಿದಾರರಿಂದ ಸುಮಾರು ಅಂದಾಜು 1,305.11 ಕೋಟಿ ಸಂಗ್ರಹಿಸಿ, ನಿಗದಿತ ಫ್ಲ್ಯಾಟ್ಗಳನ್ನು ಹಸ್ತಾಂತರಿಸದೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಂಪನಿಗಳ ಮೂಲಕ ಮನೆ ಖರೀದಿದಾರರನ್ನು ಆಕರ್ಷಿಸಿ ಹಣ ಸಂಗ್ರಹಿಸಲಾಗಿದೆ. ಆದರೆ, ಹಣ ಪಾವತಿಸಿದ ಗ್ರಾಹಕರಿಗೆ ಅಪಾರ್ಟ್ಮೆಂಟ್ಗಳ ಸ್ವಾಧೀನ ನೀಡದೆ, ಸಂಗ್ರಹಿಸಿದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ. ತಿಳಿಸಿದೆ.
ಓಝೋನ್ ಗ್ರೂಪ್ ವಿರುದ್ಧದ ಪ್ರಕರಣದಲ್ಲಿ ಇ.ಡಿ ಈ ಹಿಂದೆಯೇ 423.37 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಮುಂದುವರಿದ ತನಿಖೆಯಲ್ಲಿ ಅಕ್ರಮ ಹಣದಿಂದ ಬೇರೆ ಬೇರೆ ಕಡೆ ಆಸ್ತಿಯನ್ನು ಖರೀದಿಸಲಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿಯಾಗಿ 702.70 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಮನೆ ಖರೀದಿದಾರರಿಗೆ ವಂಚನೆ, ವಸತಿ ಯೋಜನೆಗಳನ್ನು ಪೂರ್ಣಗೊಳಿಸದಿರುವುದು, ಬುಕ್ ಮಾಡಿದ ಅಪಾರ್ಟ್ಮೆಂಟ್ಗಳನ್ನು ಹಸ್ತಾಂತರಿಸದಿರುವುದು ಹಾಗೂ ಸಂಗ್ರಹಿಸಿದ ಹಣವನ್ನು ಹಿಂದಿರುಗಿಸದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಮತ್ತು ಸಿಬಿಐ ಹಲವು ಎಫ್ಐಆರ್ಗಳನ್ನು ದಾಖಲಿಸಿದ್ದರು.
ಈ ಪೈಕಿ ಸಿಬಿಐನ ನವದೆಹಲಿಯ ಆರ್ಥಿಕ ಅಪರಾಧ ವಿಭಾಗ-1 ದಾಖಲಿಸಿದ್ದ ಪ್ರಕರಣಗಳೂ ಸೇರಿವೆ. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆ, ಈಗಾಗಲೇ ಜಪ್ತಿಯಾಗಿದ್ದ 423.37 ಕೋಟಿಗೆ ಹೆಚ್ಚುವರಿಯಾಗಿ 702.70 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎರಡೂ ಕ್ರಮಗಳನ್ನು ಸೇರಿಸಿದರೆ ಒಟ್ಟು 1,126.07 ಕೋಟಿ ಮೌಲ್ಯದ ಆಸ್ತಿಗಳ ಮೇಲೆ ಇ.ಡಿ. ಕ್ರಮ ಕೈಗೊಂಡಂತಾಗಿದೆ.