ಬೆಳೆ ಹಾನಿಗಿಲ್ಲ ವಿಮೆ ಪರಿಹಾರ ಭಾಗ್ಯ

ಬೆಳೆ ವಿಮೆ ಪರಿಹಾರ ಬಾರದಿರುವುದನ್ನು ಖಂಡಿಸಿ ಅಫಜಲಪುರ ತಾಲೂಕಿನ ವಿವಿಧ ಗ್ರಾಮದ ರೈತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಯಲ್ಲನಗೌಡ ದಣ್ಣೂರ, ಶರಣಬಸಪ್ಪ ಪಡಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್​, ಉಗ್ರಮೂರ್ತಿ ಗರೂರ, ಹಣಮಂತರಾವ ಪಾಟೀಲ್​, ಜೆ.ಡಿ.ಪಾಟೀಲ್​ ಇತರರಿದ್ದರು.
ಬೆಳೆ ವಿಮೆ ಪರಿಹಾರ ಬಾರದಿರುವುದನ್ನು ಖಂಡಿಸಿ ಅಫಜಲಪುರ ತಾಲೂಕಿನ ವಿವಿಧ ಗ್ರಾಮದ ರೈತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಯಲ್ಲನಗೌಡ ದಣ್ಣೂರ, ಶರಣಬಸಪ್ಪ ಪಡಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್​, ಉಗ್ರಮೂರ್ತಿ ಗರೂರ, ಹಣಮಂತರಾವ ಪಾಟೀಲ್​, ಜೆ.ಡಿ.ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರ ತಾಲೂಕಿನ ರೈತರ ಆಕ್ರೋಶ
  • ಡಿಸಿ ಕಚೇರಿ ಎದುರು ಪ್ರತಿಭಟನೆ
ಕಲಬುರಗಿ: ಕಳೆದ ವರ್ಷ ಹಿಂದೆಂದೂ ಕಂಡರಿಯದ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾನಿಯಾಗಿದ್ದರೂ ಎರಡನೇ ಕಂತಿನ ಬೆಳೆವಿಮೆ ಪರಿಹಾರ ಬಾರದಿರುವುದನ್ನು ಖಂಡಿಸಿ ಮತ್ತು ಹಾನಿಗೆ ಸಂಬಂಧಿಸಿದಂತೆ ತಪ್ಪು ಸಿಸಿಎ ವರದಿ ದಾಖಲಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಫಜಲಪುರ ತಾಲೂಕಿನ ವಿವಿಧ ಗ್ರಾಮದ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ದಾರ್​ ವಲ್ಲಭಭಾಯಿ ಪಟೇಲ್​ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕೃಷಿಕರು, ಬೆಳೆ ನಷ್ಟವಾದರೆ ವಿಮೆ ಪರಿಹಾರ ಕೈ ಹಿಡಿಯುತ್ತದೆ ಎಂದು ನಂಬಿ ಪ್ರೀಮಿಯಂ ತುಂಬಿದ್ದು, ಕಳೆದ ವರ್ಷ ಬೆಳೆ ಸಂಪೂರ್ಣ ಹಾನಿಯಾಗಿದ್ದರೂ ಪರಿಹಾರ ಬಂದಿಲ್ಲ. ವಿಮೆ ಪರಿಹಾರಕ್ಕೆ ಬೆಳೆ ಕಟಾವು ಪ್ರಯೋಗ ವರದಿಯೇ ಮಾನದಂಡ. ಆದರೆ ಅಧಿಕಾರಿಗಳು ಹಾನಿ ಕುರಿತು ದಾಖಲಿಸದ್ದರಿಂದ ಸೂಕ್ತ ಪರಿಹಾರ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಮೆಯಿಂದ ವಂಚಿತ ರೈತರಿಗೆ ಈಗ ಬೆಳೆವಿಮೆ ಪರಿಹಾರ ನೀಡುವುದು ಹಾಗೂ ವಿಮೆ ನಿಯಮಗಳಲ್ಲಿ ಬದಲಾವಣೆ ತರುವಂತೆ ಭೈರಾಮಡಗಿ, ಗುಡೂರ, ಕೋಗನೂರ ಹಾಗೂ ಮದರಾ(ಬಿ) ಕೃಷಿಕರು ಆಗ್ರಹಿಸಿದರು.
ಕಳೆದ ವರ್ಷ ಅತಿವೃಷ್ಟಿ ಹಾಗೂ ಅದರಲ್ಲೂ ಪ್ರವಾಹದಿಂದ ಬೆಳೆಗಳು ನಾಶವಾಗಿವೆ ಎಂಬುದನ್ನು ದಾಖಲೆಗಳೇ ನಿರೂಪಿಸುತ್ತವೆ. ಹೀಗಾಗಿ ಶೇ.90 ಬೆಳೆವಿಮೆ ಪರಿಹಾರ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಎರಡನೇ ಕಂತಿನಲ್ಲಿ ಶೂನ್ಯ ಪರಿಹಾರ ಬಂದಿದೆ. ಪ್ರಸಕ್ತ ಮಳೆ ಬಾರದೆ ಕಂಗಾಲಾಗಿದ್ದೇವೆ. ಇಂತಹ ಸ್ಥಿತಿಯಲ್ಲಿ ಶೋಷಣೆ ತಪ್ಪಿಸಲು ಕೂಡಲೇ ಸೂಕ್ತ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳೆ ಇಳುವರಿ ಪ್ರಮಾಣ ನಿಗದಿ (ಸಿಸಿಎ) ಸರಿಯಾಗಿ ಮಾಡಿಲ್ಲ. ತಪ್ಪು ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಾದರೂ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕಲು ಸಾಧ್ಯ ಎಂದರು.
ರೈತ ಮುಖಂಡರಾದ ಯಲ್ಲನಗೌಡ ದಣ್ಣೂರ, ಶರಣಬಸಪ್ಪ ಪಡಶೆಟ್ಟಿ, ಉಗ್ರಮೂರ್ತಿ ಗರೂರ ಗುಡೂರ, ಹಣಮಂತರಾವ ಪಾಟೀಲ್​ ನೀಲೂರ, ಜೆ.ಡಿ. ಪಾಟೀಲ್​ ಭೈರಾಮಡಗಿ, ಸಾತಲಿಂಗಪ್ಪ ಲೋಣಿ ನೀಲೂರ, ಆನಂದರಾವ ನರಬೋಳಿ, ಚಂದ್ರಕಾಂತ ಪಾಟೀಲ್​, ಬಸವಣ್ಣೆಪ್ಪ ಅಂಕಲಗಿ, ವಿಶ್ವನಾಥ ಪಾಟೀಲ್​, ನಿಜಗುಣಿ ಚಕ್ರವರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net