ಅನಾಥ ಮಕ್ಕಳ ಬಾಳಲ್ಲಿ ಹೊಸ ಬೆಳಕು; ಉಡುಪಿಯಲ್ಲಿ ದಶಕದಲ್ಲಿ 72 ಪುಟಾಣಿಗಳ ದತ್ತು ಸ್ವೀಕಾರ; ದತ್ತು ಮಕ್ಕಳಿಗಾಗಿ 373 ಅರ್ಜಿ | Child Adoption

ಅನಾಥ ಮಕ್ಕಳ ಬಾಳಲ್ಲಿ ಹೊಸ ಬೆಳಕು; ಉಡುಪಿಯಲ್ಲಿ ದಶಕದಲ್ಲಿ 72 ಪುಟಾಣಿಗಳ ದತ್ತು ಸ್ವೀಕಾರ; ದತ್ತು ಮಕ್ಕಳಿಗಾಗಿ 373 ಅರ್ಜಿ
ಅನಾಥ ಮಕ್ಕಳ ಬಾಳಲ್ಲಿ ಹೊಸ ಬೆಳಕು; ಉಡುಪಿಯಲ್ಲಿ ದಶಕದಲ್ಲಿ 72 ಪುಟಾಣಿಗಳ ದತ್ತು ಸ್ವೀಕಾರ; ದತ್ತು ಮಕ್ಕಳಿಗಾಗಿ 373 ಅರ್ಜಿ
Published on
ಉಡುಪಿ: ಸಮಾಜದ ಮುಖ್ಯವಾಹಿನಿಯಿಂದ ದೂರವಾದ ಮಕ್ಕಳಿಗೆ ಕಾನೂನುಬದ್ಧವಾಗಿ ಸುಭದ್ರ ಭವಿಷ್ಯ ಕಲ್ಪಿಸುವಲ್ಲಿ ದತ್ತು ಪ್ರಕ್ರಿಯೆ ಮಹತ್ತರ ಪಾತ್ರ ವಹಿಸುತ್ತಿದೆ. ಮಕ್ಕಳಿಲ್ಲದ ದಂಪತಿ ಪಾಲಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ(Child Adoption) ಅಧೀನದಲ್ಲಿರುವ ಸಂತೆಕಟ್ಟೆಯ ಶ್ರೀಕೃಷ್ಣಾನುಗ್ರಹ ಪಾಲನಾ ಕೇಂದ್ರ ಆಶಾಕಿರಣವಾಗಿ ಮೂಡಿಬಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಕೇಂದ್ರದ ಮೂಲಕ ಒಟ್ಟು 72 ಮಕ್ಕಳು ಹೊಸ ಕುಟುಂಬಗಳನ್ನು ಸೇರಿಕೊಂಡಿದ್ದಾರೆ.

ದಶಕದ ಸಾಧನೆ: ಅಂಕಿ-ಅಂಶಗಳ ನೋಟ

ಶ್ರೀಕೃಷ್ಣಾನುಗ್ರಹ ಸಂಸ್ಥೆಯು ಜಿಲ್ಲೆಯ ಏಕೈಕ ಅನುದಾನಿತ ದತ್ತು ಕೇಂದ್ರವಾಗಿದ್ದು, 2015-16ರಿಂದ ಈವರೆಗೆ ಒಟ್ಟು 82 ಮಕ್ಕಳು ಇಲ್ಲಿ ದಾಖಲಾಗಿದ್ದರು. ಈ ಪೈಕಿ 72 ಮಕ್ಕಳು ಯಶಸ್ವಿಯಾಗಿ ದತ್ತು ಹೋಗಿದ್ದು, 10 ಮಕ್ಕಳು ಪ್ರಸ್ತುತ ಕೇಂದ್ರದಲ್ಲಿ ಆಸರೆ ಪಡೆಯುತ್ತಿದ್ದಾರೆ.
ದೇಶೀಯ ದತ್ತು: 66 ಮಕ್ಕಳು ಭಾರತದ ವಿವಿಧ ರಾಜ್ಯಗಳ ದಂಪತಿಗಳ ಮಡಿಲು ಸೇರಿದ್ದಾರೆ.
ವಿದೇಶಿ ದತ್ತು: 6 ಮಕ್ಕಳು ಸಪ್ತಸಾಗರದಾಚೆಗಿನ ದೇಶಗಳ ದಂಪತಿಗಳ ಕೈಸೇರಿ ಹೊಸ ಬದುಕು ಕಂಡುಕೊಂಡಿದ್ದಾರೆ.
ಹೆಚ್ಚಿನ ದತ್ತು: 2022-23ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 14 ಮಕ್ಕಳು ದತ್ತು ಹೋಗಿದ್ದಾರೆ.
ಪ್ರಸಕ್ತ ಸಾಲು: 2025-26ರಲ್ಲಿ 7 ಮಕ್ಕಳು ಹಾಗೂ ಪ್ರಸಕ್ತ ವರ್ಷದ ಮೊದಲ ತಿಂಗಳಲ್ಲೇ 3 ಮಕ್ಕಳು ಹೊಸ ಮನೆ ಸೇರಿದ್ದಾರೆ.

ಗಡಿ ಮೀರಿದ ಮಮತೆ: ರಾಜ್ಯವಾರು ವಿವರ

ದತ್ತು ಪಡೆದವರಲ್ಲಿ ಕರ್ನಾಟಕದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ (47 ಮಕ್ಕಳು). ಉಳಿದಂತೆ ದಕ್ಷಿಣ ಭಾರತದ ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ದಂಪತಿಗಳು ಇಲ್ಲಿನ ಮಕ್ಕಳನ್ನು ದತ್ತು ಪಡೆಯಲು ಆಸಕ್ತಿ ತೋರಿಸಿದ್ದಾರೆ.
ಮಹಾರಾಷ್ಟ್ರ: 4 | ಕೇರಳ: 3 | ತೆಲಂಗಾಣ: 3 | ತಮಿಳುನಾಡು: 6
ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ: ತಲಾ 1 ಮಗು.

ದತ್ತು ಪ್ರಕ್ರಿಯೆ ಹೇಗೆ? (CARA ಮಾರ್ಗಸೂಚಿ)

ದತ್ತು ಪಡೆಯಲು ಇಚ್ಛಿಸುವ ಪೋಷಕರು ಕೇಂದ್ರ ಸರ್ಕಾರದ 'ಕಾರಾ' (CARA) ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ನೋಂದಣಿ: https://cara.wcd.gov.in/ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು.
ಪರಿಶೀಲನೆ: ಅಧಿಕೃತ ಸಂಸ್ಥೆಯು ಪೋಷಕರ ಮನೆಗೆ ಭೇಟಿ ನೀಡಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ವರದಿ ಸಿದ್ಧಪಡಿಸುತ್ತದೆ.
ಆಯ್ಕೆ: ಲಭ್ಯವಿರುವ ಮಕ್ಕಳ ಪಟ್ಟಿಯಿಂದ ಮಗುವನ್ನು ಆಯ್ಕೆ ಮಾಡಿದ ನಂತರ ಹೊಂದಾಣಿಕೆ ಪರೀಕ್ಷೆ ನಡೆಯುತ್ತದೆ.
ಪಾಲನೆ: ಮೊದಲು ತಾತ್ಕಾಲಿಕವಾಗಿ ಮಗುವನ್ನು ನೀಡಲಾಗುತ್ತದೆ, ನಂತರ ಪ್ರಾಧಿಕಾರವು ಅಧಿಕೃತ ಆದೇಶ ಹೊರಡಿಸುತ್ತದೆ.
ಮೇಲ್ವಿಚಾರಣೆ: ದತ್ತು ಪ್ರಕ್ರಿಯೆ ಮುಗಿದ ನಂತರವೂ ಕನಿಷ್ಠ 2 ವರ್ಷಗಳ ಕಾಲ ಅಧಿಕಾರಿಗಳು ಮಗುವಿನ ಯೋಗಕ್ಷೇಮವನ್ನು ಪರಿಶೀಲಿಸುತ್ತಾರೆ.
ಶಿಶುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಬಾರದು. ಪೋಷಕರಿಗೆ ಮಗು ಬೇಡವಾದರೆ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಬಹುದು. 1098ಕ್ಕೆ ಕರೆ ಮಾಡಿದರೆ ಅಧಿಕಾರಿಗಳೇ ಬಂದು ಮಗುವನ್ನು ಸ್ವೀಕರಿಸುತ್ತಾರೆ ಮತ್ತು ಈ ವಿಷಯದಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡಲಾಗುತ್ತದೆ.
— ನಾಗರತ್ನ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಉಡುಪಿ.
ಸಂಕ್ಷಿಪ್ತ ಮಾಹಿತಿ ಫಲಕ:
ವಿವರ ಸಂಖ್ಯೆ
ಒಟ್ಟು ದಾಖಲಾದ ಮಕ್ಕಳು - 82
ಒಟ್ಟು ದತ್ತು ಹೋದವರು - 72
ದೇಶೀಯ ದತ್ತು - 66
ವಿದೇಶಿ ದತ್ತು - 06
ದತ್ತು ಕೋರಿ ಬಂದಿರುವ ಬಾಕಿ ಅರ್ಜಿಗಳು -373
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net