ಪ್ರೀತಿಸಿದ್ದ ಯುವತಿಗೆ ಲಾಡ್ಜ್ ಮೇಲಿಂದ ತಳ್ಳಿ ಕೊಲೆ

Murder
Murder
Published on: 

ಬೆಂಗಳೂರು: ಮೂರು ವರ್ಷದಿಂದ ಪ್ರೀತಿಸಿದ್ದ ಯುವತಿಯನ್ನು ಲಾಡ್ಜ್‌ನ 3ನೇ ಮಹಡಿಯಿಂದ ತಳ್ಳಿ ಕೊಲೆಗೈದಿರುವುದು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಐಶ್ವರ್ಯಾ(23) ಕೊಲೆಯಾದವಳು. ಕೃತ್ಯ ಎಸಗಿದ ಆಕೆಯ ಪ್ರಿಯಕರ ಸಂತೋಷ್(26) ಬಂಧಿತ. ನ.19ರಂದು ಅಬ್ಬಿಗೆರೆ ವೃತ್ತದ ಬಳಿಯ ಲಾಡ್ಜ್‌ವೊಂದರಲ್ಲಿ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಐಶ್ವರ್ಯಾ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ಐಶ್ವರ್ಯಾ, ದೂರದ ಸಂಬಂಧಿ ಸಚಿನ್ ಜತೆ ಆತ್ಮೀಯವಾಗಿದ್ದಳು. ಈ ಕುರಿತು ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ ಪ್ರಿಯಕರ ಸಂತೋಷ್ ನಂಬುತ್ತಿರಲಿಲ್ಲ.

ಐಶ್ವರ್ಯಾ, ಪ್ರಿಯಕರ ಸಂತೋಷ್ ಒತ್ತಾಯದ ಮೇರೆಗೆ ಗಂಗಮ್ಮನಗುಡಿಯಲ್ಲಿನ ಖಾಸಗಿ ಲಾಡ್ಜ್‌ಗೆ ಬಂದಿದ್ದಳು. ಈ ವೇಳೆ ಸಂತೋಷ್, ಸಚಿನ್ ಜತೆಗಿನ ವಿಚಾರ ಪ್ರಸ್ತಾಪಿಸಿ ಜಗಳ ಮಾಡಿದ್ದಾನೆ. ಅದು ತಾರಕ್ಕೇರಿದೆ. ಆಗ ಐಶ್ವರ್ಯ, ತನ್ನನ್ನು ಯಾರು ನಂಬುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು, ಲಾಡ್ಜ್‌ನ ಮೂರನೇ ಮಹಡಿಗೆ ಹೋಗಿದ್ದಾಳೆ. ಆಗ ಸಂತೋಷ್, ಏನು ಬೇಕಾದರೂ ಮಾಡಿಕೊ ಎಂದು ತಳ್ಳಿದ್ದಾನೆ. ಲಾಡ್ಜ್ ಮೇಲಿಂದ ವಿದ್ಯುತ್ ಕಂಬದ ಮೇಲೆ ಬಿದ್ದು ಮೃತಪಟ್ಟಿದ್ದಾಳೆ. ಆರಂಭದಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಆದರೆ, ಐಶ್ವರ್ಯ ಪೋಷಕರು, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಇದೊಂದು ಕೊಲೆ ಎಂಬುದು ಗೊತ್ತಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮದುವೆಗೆ ನಿರಾಕರಿಸಿದ್ದ ಪ್ರಿಯತಮ

ಐಶ್ವರ್ಯಾ ಮತ್ತು ಸಂತೋಷ್ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ಆಕೆಯ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಐಶ್ವರ್ಯ ಅವರು ಸಂತೋಷ್‌ನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರಿಂದ, ಅಂತಿಮವಾಗಿ ಅವರ ಕುಟುಂಬದವರು ಈ ಸಂಬಂಧಕ್ಕೆ ಒಪ್ಪಿ ಕೊಂಡಿದ್ದರು. ಆದರೆ, ಸಂತೋಷ್ ಮದುವೆಯಾಗಲು ಮೂರು ವರ್ಷಗಳ ಕಾಲಾವಕಾಶ ಕೇಳಿದ್ದನು. ಆ ಅವಧಿ ಮುಗಿದರೂ, ಅವನು ಮದುವೆಯನ್ನು ಮುಂದೂಡುತ್ತಲೇ ಬಂದಿದ್ದ. ನಂತರ, ತನ್ನ ಕುಟುಂಬದವರು ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಆ ಬಳಿಕ ಎರಡೂ ಕುಟುಂಬಗಳ ಮಧ್ಯಸ್ಥಿಕೆಯಿಂದಾಗಿ ಈ ಸಮಸ್ಯೆ ಬಗೆಹರಿದು, ಮದುವೆಯ ಬಗ್ಗೆ ಮತ್ತೆ ಮಾತುಕತೆಯೂ ನಡೆದಿತ್ತು ಎಂಬುದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.