

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಲಂಚದ ಬೇಡಿಕೆ, ಕಡತ ವಿಲೇವಾರಿಯಲ್ಲಿ ವಿಳಂಬ, ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 46 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು, 29 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಡಾ. ಬಿ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ಇಬ್ಬರು ಉಪಲೋಕಾಯುಕ್ತರು ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿಗೆ ವೇಗ ನೀಡಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಪ್ರತಿವರ್ಷ ಸರಾಸರಿ 12 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಸಾಮಾನ್ಯ ಜನರ ಅರ್ಜಿಗಳನ್ನು ಅನಗತ್ಯವಾಗಿ ವಿಳಂಬ ಮಾಡುವುದು, ವಿವಿಧ ಸೇವೆಗಳಿಗೆ ಲಂಚಕ್ಕಾಗಿ ಬೇಡಿಕೆ ಇಡುವುದು, ರೈತರ ಕೃಷಿ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಆಸ್ತಿ ವಿವಾದಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಆಡಳಿತಾತ್ಮಕ ಲೋಪಗಳ ಕುರಿತು ಸಾರ್ವಜನಿಕರು ಲೋಕಾಯುಕ್ತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೂರು ಸಲ್ಲಿಸುತ್ತಿದ್ದಾರೆ.
ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ವಿರುದ್ಧದ ಕ್ರಮಗಳಲ್ಲಿ ಶಿಕ್ಷೆ ಪ್ರಮಾಣವೂ ಗಮನಾರ್ಹವಾಗಿದೆ. 2022ರಿಂದ ಇಲ್ಲಿಯವರೆಗೆ( 15.11.2026) ನಡೆದ ವಿಚಾರಣೆಗಳಲ್ಲಿ 153 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದು ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾನೂನು ಕ್ರಮಗಳಿಗೆ ಸಂಸ್ಥೆ ನೀಡುತ್ತಿರುವ ಆದ್ಯತೆಯನ್ನು ತೋರಿಸಿದೆ.
ಆದರೆ, ಇನ್ನೂ 20 ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿರುವುದು ಸಂಸ್ಥೆಯ ಮುಂದಿರುವ ಸವಾಲಾಗಿದೆ. ಸಾರ್ವಜನಿಕರ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ 2,052 ಪ್ರಕರಣಗಳನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ.
ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ಕಚೇರಿಗಳಿಗೆ ಸಲ್ಲಿಕೆಯಾಗುತ್ತಿರುವ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಲೋಕಾಯುಕ್ತರ ಕಚೇರಿಗೆ 13,990 ಅರ್ಜಿಗಳು ಸ್ವೀಕೃತವಾಗಿವೆ. ಉಪ ಲೋಕಾಯುಕ್ತ-1ರ ಕಚೇರಿಗೆ 14,657 ಹಾಗೂ ಉಪಲೋಕಾಯುಕ್ತ-2ರ ಕಚೇರಿಗೆ 17,651 ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಪೈಕಿ ಲೋಕಾಯುಕ್ತರ ಕಚೇರಿಯಲ್ಲಿ 7,122 ಅರ್ಜಿಗಳು ವಿಲೇವಾರಿಯಾಗಿದ್ದರೆ, ಉಪ ಲೋಕಾಯುಕ್ತ-1ರ ಕಚೇರಿಯಲ್ಲಿ 10,679 ಮತ್ತು ಉಪಲೋಕಾಯುಕ್ತ-2ರ ಕಚೇರಿಯಲ್ಲಿ 11,441 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೆ, ಇತರೆ ವಿಭಾಗಗಳಲ್ಲಿ 22,097 ಅರ್ಜಿಗಳು ದಾಖಲಾಗಿರುವುದಾಗಿ ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಲೇಬೇಕು ಎಂಬ ಪರಿಸ್ಥಿತಿಯಿಂದ ಬೇಸತ್ತಿರುವ ಜನಸಾಮಾನ್ಯರಿಗೆ ಲೋಕಾಯುಕ್ತ ಸಂಸ್ಥೆ ಪ್ರಮುಖ ಆಶಾಕಿರಣವಾಗಿದೆ. ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿರುವುದರಿಂದ ದೂರುಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.
ವಿಶೇಷವಾಗಿ ಸರ್ಕಾರಿ ಅಧಿಕಾರಿಗಳ ವಿರುದ್ಧದ ದೂರುಗಳ ವಿಚಾರಣೆ, ದಾಖಲೆಗಳ ಪರಿಶೀಲನೆ, ಸಂಬಂಧಪಟ್ಟ ಇಲಾಖೆಗಳ ಹೊಣೆಗಾರಿಕೆ ನಿಗದಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವ ಮೂಲಕ ಲೋಕಾಯುಕ್ತ ಸಂಸ್ಥೆ ಆಡಳಿತ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ.
ಲೋಕಾಯುಕ್ತ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ವಿಶ್ವಾಸ ದೂರುಗಳ ಸಂಖ್ಯೆಯಲ್ಲಿನ ಏರಿಕೆಯಿಂದ ಸ್ಪಷ್ಟವಾಗುತ್ತದೆ. ಆದರೆ, 20 ಸಾವಿರಕ್ಕೂ ಅಧಿಕ ಅರ್ಜಿಗಳು ಇನ್ನೂ ಬಾಕಿ ಇರುವುದರಿಂದ ಅವುಗಳ ತ್ವರಿತ ವಿಲೇವಾರಿ, ಶಿಕ್ಷೆ ಪ್ರಮಾಣ ಹೆಚ್ಚಳ ಮತ್ತು ಇಲಾಖೆಗಳ ಮಟ್ಟದಲ್ಲಿ ಶಿಫಾರಸುಗಳ ಅನುಷ್ಠಾನಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತದ ಆಶಯ ಸಾಕಾರಗೊಳ್ಳಬೇಕಾದರೆ ಕೇವಲ ದೂರು ಸ್ವೀಕಾರ ಮತ್ತು ವಿಚಾರಣೆಗೆ ಸೀಮಿತವಾಗದೆ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗುವ ಜತೆಗೆ ಸಂತ್ರಸ್ತ ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ದೊರೆಯುವಂತಾಗಬೇಕು.
2022ರಿಂದ 15-11-2026ರವರೆಗಿನ ವಿವರಗಳು:
ಪ್ರಕರಣ ಲೋಕಾಯುಕ್ತ ಉಪಲೋಕಾ-1 ಉಪಲೋಕಾ-2 ಒಟ್ಟು
ದೂರು 13990 14657 17651 46298
ಇತ್ಯರ್ಥ 7122 10679 11441 29242
ವಿಚಾರಣೆ 88 524 503 1115
ಶಿಾರಸ್ಸು 66 1060 926 2052
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಲೋಕಾಯುಕ್ತ ಸಂಸ್ಥೆ 322 ದಾಳಿ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರೆ, 976 ಟ್ರ್ಯಾಪ್ ಪ್ರಕರಣ ಹಾಗೂ 138 ಇತರೆ ಪ್ರಕರಣ ದಾಖಲಿಸಿಕೊಂಡಿದೆ. ಭ್ರಷ್ಟಾಚಾರ ನಿಗ್ರಹ ದಳದಿಂದ 2,159 ಪ್ರಕರಗಳು ಸಂಸ್ಥೆಗೆ ವರ್ಗಾವಣೆಯಾಗಿವೆ. ಈ ಅವಧಿಯಲ್ಲಿ ಒಟ್ಟು 952 ಪ್ರಕರಣಗಳನ್ನು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಮುಕ್ತಾಯಗೊಂಡ 697 ಪ್ರಕರಣಗಳ ಪೈಕಿ 153 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ.