ನಾಯಕತ್ವ ಸಿಗದೆ ಕುಮಾರಸ್ವಾಮಿ ಹತಾಶರಾಗಿದ್ದಾರೆ: ಹೆಚ್​ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್​ ಖರ್ಗೆ! Priyank Kharge

ರಾಜ್ಯದಲ್ಲಿ ನಾಯಕತ್ವ ಸಿಗದೆ ಹೆಚ್.ಡಿ. ಕುಮಾರಸ್ವಾಮಿ ಹತಾಶೆಯಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದು, ಗಾಳಿಯಲ್ಲಿ ಗುಂಡು ಹಾರಿಸದೆ ದಾಖಲೆ ನೀಡುವಂತೆ ಸವಾಲು ಹಾಕಿದ್ದಾರೆ.
Home Minister Priyank Kharge and Union Minister H.D. Kumaraswamy
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
Published on: 

ಮೈಸೂರು: ದಿನಕಳೆದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ಮೈಸೂರಿನಲ್ಲಿಂದು ಹೆಚ್‌ಡಿಕೆ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದು, ಕಟು ಮಾತುಗಳ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸೋದು ಬಿಟ್ಟು ದಾಖಲೆ ಕೊಡಿ!

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, "ಕುಮಾರಸ್ವಾಮಿ ಅವರು ತಮ್ಮ ಘನತೆ ಮತ್ತು ಗೌರವಕ್ಕೆ ತಾವೇ ಧಕ್ಕೆ ತಂದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅವರಿಗೆ ನಾಯಕತ್ವ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಹೆಚ್‌ಡಿಕೆ ಮೊದಲು ನಿಲ್ಲಿಸಲಿ. ಅವರ ಬಳಿ ನಿಜವಾಗಿಯೂ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಲಿ. ಬಲಗೈ, ಎಡಗೈ ಭಂಟರ ಹೆಸರು ಬಂದರೆ ಪೊಲೀಸರು ತನಿಖೆಗೆ ಕರೆಯಬಾರದಾ? ಕುಮಾರಸ್ವಾಮಿ ಅವರ ಅಸಲಿ ಸಮಸ್ಯೆ ಏನೆಂಬುದೇ ಅರ್ಥವಾಗುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.

ಡಿಕೆಶಿ ಮೇಲಿನ ಅಸೂಯೆಗೆ ಮದ್ದಿಲ್ಲ!

ಡಿ.ಕೆ. ಶಿವಕುಮಾರ್ ಅಧಿಕಾರದಲ್ಲಿರುವುದನ್ನು ನೋಡಿ ಕುಮಾರಸ್ವಾಮಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದ ಪ್ರಿಯಾಂಕ್ ಖರ್ಗೆ, "ಡಿಕೆಶಿ ಅವರ ಬಗ್ಗೆ ಹೆಚ್‌ಡಿಕೆಗೆ ವಿಪರೀತ ಅಸೂಯೆ ಕಾಡುತ್ತಿದೆ. ಆದರೆ, ಅಸೂಯೆಗೆ ಜಗತ್ತಿನಲ್ಲಿ ಯಾವುದೇ ಮದ್ದಿಲ್ಲ. ಯಾರ್ಯಾರು ಕುಮಾರಸ್ವಾಮಿ ಅವರ ಹೆಸರು ಹೇಳಿದ್ದಾರೋ ಅವರೆಲ್ಲರನ್ನೂ ವಿಚಾರಣೆಗೆ ಕರೆಸುತ್ತೇವೆ. ಯಾರೇ ತಪ್ಪು ಮಾಡಿದರೂ ತನಿಖೆ ಎದುರಿಸಲೇಬೇಕು" ಎಂದು ಗುಡುಗಿದ್ದಾರೆ.

ಪ್ರಜ್ವಲ್ ವಿಡಿಯೋ ಮಾಡಿಸಿದ್ದು ನಾವಾ?

ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣ ಪ್ರಸ್ತಾಪಿಸಿದ ಪ್ರಿಯಾಂಕ್​ ಖರ್ಗೆ, "ಹಾಸನದ ನೂರಾರು ಹೆಣ್ಣುಮಕ್ಕಳಿಗೆ ಕುಮಾರಸ್ವಾಮಿ ಕುಟುಂಬದಿಂದ ಅನ್ಯಾಯವಾಯಿತಲ್ಲ, ಅದಕ್ಕೆ ಇವರು ಯಾವತ್ತಾದರೂ ಕ್ಷಮೆ ಕೇಳಿದ್ದಾರಾ? ಹಾಸನದ ಎಸ್ಪಿ ಕಚೇರಿಗೆ ಹೋಗಿ ತಲೆತಗ್ಗಿಸಿ ಕ್ಷಮೆ ಯಾಚಿಸಬೇಕು ಅನ್ನಿಸಲಿಲ್ವಾ?

ಪ್ರಜ್ವಲ್ ರೇವಣ್ಣ ವಿಡಿಯೋವನ್ನು ನಾನಾಗಲಿ, ಡಿ.ಕೆ. ಶಿವಕುಮಾರ್ ಆಗಲಿ ಅಥವಾ ಸಿದ್ದರಾಮಯ್ಯನವರಾಗಲಿ ಮಾಡಿಸಿದ್ರಾ? ತಮ್ಮದೇ ಕುಟುಂಬದಿಂದ ಇಷ್ಟೊಂದು ದೊಡ್ಡ ತಪ್ಪಾಗಿದೆ ಎಂದು ಈಗಲಾದರೂ ಒಪ್ಪಿಕೊಂಡು ಮೊದಲು ಜನರಲ್ಲಿ ಕ್ಷಮೆ ಕೇಳಲಿ. ಅದನ್ನು ಬಿಟ್ಟು ನಮಗೆ ನೈತಿಕತೆಯ ಪಾಠ ಮಾಡಲು ಕುಮಾರಸ್ವಾಮಿಯವರಿಗೆ ಯಾವ ನೈತಿಕತೆ ಇದೆ?" ಎಂದು ಪ್ರಶ್ನಿಸಿದ್ದಾರೆ.

Also Read
ಬೆಂಗಳೂರಿನಲ್ಲಿ ನಡೆಯಬೇಕಿದ್ದ ‘ತಿರಂಗಾ ಮಾರ್ಚ್’ ಫ್ಲಾಪ್: ಸಿಜೆಪಿ ರ‍್ಯಾಲಿಗೆ ಅನುಮತಿ ನಿರಾಕರಿಸಿದ ಪೊಲೀಸ್​ ಇಲಾಖೆ! Tiranga March
Home Minister Priyank Kharge and Union Minister H.D. Kumaraswamy

ಉಪ್ಪು ತಿಂದವರು ನೀರು ಕುಡಿಯಲೇಬೇಕು!

ಮಾತು ಮುಂದುವರಿಸಿದ ಗೃಹ ಸಚಿವರು, "ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಬಗ್ಗೆ ನಾವೇನಾದರೂ ಬಹಿರಂಗವಾಗಿ ಮಾತನಾಡಿದರೆ ಮತ್ತೆ ಎಲ್ಲಿ ಆಸ್ಪತ್ರೆ ಸೇರುತ್ತಾರೋ ಎಂಬ ಚಿಂತೆ ನಮಗಿದೆ. ನಾವು ಕೊಡುವ ಸುದ್ದಿಯಿಂದ ಅವರು ಆಸ್ಪತ್ರೆಗೆ ಹೋಗುವುದು ಬೇಡ. ಕುಮಾರಸ್ವಾಮಿ ಇನ್ನೂ ಬಹಳ ವರ್ಷಗಳ ಕಾಲ ಆಯುಷ್ಯ-ಆರೋಗ್ಯದಿಂದ ಬದುಕಲಿ.

ಆದರೆ ಪ್ರಕೃತಿ ನಿಯಮದ ಪ್ರಕಾರ, ನಮ್ಮ ತಪ್ಪನ್ನು ನಾವೇ ಉಣ್ಣಲೇಬೇಕು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಮ್ಮ ಬಗ್ಗೆ, ಶಿವಕುಮಾರ್ ಅವರ ಬಗ್ಗೆ ಇವರು ಇಷ್ಟಬಂದಂತೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಾವೇನು ಕೈಕಟ್ಟಿ ಕೂರಬೇಕಾ? ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net