ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಷರತ್ತುಗಳಿಗೆ ಸದಸ್ಯರ ಆಕ್ಷೇಪ, ಸದಸ್ಯರು ಹೇಳಿದ್ದೇನು?

ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ವು ಹೊಸದಾಗಿ ಪರೀಕ್ಷೆಗಳನ್ನು ನಡೆಸಬೇಕಾದರೆ, ಪರೀಕ್ಷಾ ನಿಯಂತ್ರಕರು ವಿಧಿಸಿರುವ ಷರತ್ತುಗಳಿಗೆ ಆಯೋಗದ ಇಬ್ಬರು ಸದಸ್ಯರು ವಿರೋಧ
kpsc
ಕರ್ನಾಟಕ ಲೋಕಸೇವಾ ಆಯೋಗGoogle
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ವು ಹೊಸದಾಗಿ ಪರೀಕ್ಷೆಗಳನ್ನು ನಡೆಸಬೇಕಾದರೆ, ಪರೀಕ್ಷಾ ನಿಯಂತ್ರಕರು ವಿಧಿಸಿರುವ ಷರತ್ತುಗಳಿಗೆ ಆಯೋಗದ ಇಬ್ಬರು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪರೀಕ್ಷಾ ನಿಯಂತ್ರಕರಾಗಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ಎಚ್. ಪ್ರಸನ್ನ ಅವರು, ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಒಎಂಆರ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು, ಒಂದೆರಡು ದಿನಗಳಲ್ಲಿ ಕೀ ಉತ್ತರ ಪ್ರಕಟಿಸುವುದು, ಲಿತಾಂಶ ಮತ್ತು ನಿಗದಿತ ಕಾಲಮಿತಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲು ಒಪ್ಪಿದರೆ ಕೆಪಿಎಸ್‌ಸಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದು ಎಂಬ ಷರತ್ತುಗಳನ್ನು ವಿಧಿಸಿದ್ದರು.

ಆದರೆ, ಇತ್ತೀಚೆಗೆ ಆಯೋಗದಲ್ಲಿ ನಡೆದ ಸಭೆಯಲ್ಲಿ ಇಬ್ಬರು ಸದಸ್ಯರು, ಈ ಷರತ್ತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಎಂಆರ್ ವಿಷಯದಲ್ಲಿ ಕೆಇಎ ಮತ್ತು ಕೆಪಿಎಸ್‌ಸಿ ನಿಯಮಗಳು ಹಾಗೂ ಭದ್ರತೆ ವಿಷಯದಲ್ಲಿ ವಿಭಿನ್ನವಾಗಿವೆ. ಮತ್ತೊಮ್ಮೆ ಚರ್ಚಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಹಿಂದಿನ ಪದ್ಧತಿಗೆ ಹೋಗಬೇಕಾ ಸದಸ್ಯರ ಪ್ರಶ್ನೆ?

ಕೆಪಿಎಸ್‌ಸಿಯಲ್ಲಿ ಪಿಡಿಒ ಪರೀಕ್ಷೆಯಿಂದ ಹೊಸ ಒಎಂಆರ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಹೊಸ ಒಎಂಆರ್‌ಗಳನ್ನು ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಾಗುವುದಿಲ್ಲ. ಒಎಂಆರ್ ಹಾಳೆಗಳನ್ನು ತಿರುಚಲು ಸಾಧ್ಯವಾಗದ ಕಾರಣಕ್ಕೆ ಅಭ್ಯರ್ಥಿಗಳೊಂದಿಗೆ ಪ್ರಶ್ನೆಗಳನ್ನು ಹಂಚಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಒಂದು ವೇಳೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿಯೂ ಒಎಂಆರ್ ಶೀಟ್ ಅನ್ನು ಪರೀಕ್ಷೆ ನಡೆದ ದಿನವೇ ವೆಬ್‌ಸೈಟ್‌ಗೆ ಹಾಕಬೇಕಾದಲ್ಲಿ ಮತ್ತೆ ಒಎಂಆರ್ ನಿಯಮಗಳನ್ನು ಬದಲಾಯಿಸಿ ಹಳೆಯ ಒಎಂಆರ್ ಅನ್ನು ಜಾರಿಗೊಳಿಸಬೇಕಾಗುತ್ತದೆ. ಆದ್ದರಿಂದ ಮುಂದಿನ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸೋಣವೆಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಕೆಪಿಎಸ್‌ಸಿ ಒಎಂಆರ್ ಹೇಗಿದೆ?

ಪ್ರಸ್ತುತ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನಡೆಸುವ ಒಎಂಆರ್ ಹಾಳೆಗಳನ್ನು ಪರೀಕ್ಷೆ ಮುಗಿದ ಬಳಿಕ ಮೌಲ್ಯಮಾಪನಕ್ಕೂ ಕಳುಹಿಸುವ ಮುನ್ನ, ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ ಇರುವ ಒಂದು ಭಾಗವನ್ನು ಕತ್ತರಿಸಿ ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತದೆ. ಮೌಲ್ಯಮಾಪನದ ವೇಳೆ ಯಾವ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಮೌಲ್ಯಮಾಪಕರಿಗೆ ತಿಳಿಯುವುದಿಲ್ಲ. ಮೌಲ್ಯಮಾಪನ ಕಾರ್ಯ ಮುಗಿದ ನಂತರ ಉತ್ತರ ಪತ್ರಿಕೆಗಳ ಹರಿದ ಮತ್ತು ಮೌಲ್ಯಮಾಪನವಾಗಿರುವ ಪ್ರತಿಯನ್ನು ಜೋಡಿಸಿದರೆ ಬಾರ್‌ಕೋಡ್ ಮ್ಯಾಚ್ ಆಗುತ್ತದೆ. ಬಳಿಕವಷ್ಟೇ ಅಂಕಗಳ ಪ್ರಕಟಿಸುವ ಕೆಲಸ ನಡೆಯಲಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದರು.

ಪ್ರಸ್ತುತ ಕೆಪಿಎಸ್‌ಸಿಯಲ್ಲಿರುವ ಒಎಂಆರ್ ನಿಯಮಗಳಲ್ಲಿ ಅಕ್ರಮ ನಡೆಸಲು ಸಾಧ್ಯವಿಲ್ಲ. ಒಎಂಆರ್ ಪ್ರತಿಯಲ್ಲಿ ಅಭ್ಯರ್ಥಿಯ ಹೆಸರು ಮತ್ತು ನೋಂದಣಿ ಸಂಖ್ಯೆ ಇಲ್ಲದಿರುವ ಕಾರಣ ಪರೀಕ್ಷೆ ನಡೆದ ಕೂಡಲೇ ಒಎಂಆರ್ ಹಾಳೆಗಳ ಪ್ರತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಪ್‌ಲೊಡ್ ಮಾಡುವ ನಿರ್ಣಯ ಕೈಗೊಂಡದಲ್ಲಿ ಮತ್ತೊಮ್ಮೆ ಒಎಂಆರ್ ಬದಲಾಯಿಸಬೇಕಾಗುತ್ತದೆ. - ಕೆ. ಜ್ಯೋತಿ, ಕೆಪಿಎಸ್‌ಸಿ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net