

ಆನೆ ಕಾರಿಡಾರ್ ಎಲ್ಲಿ ಹಾದುಹೋಗಿತ್ತು ಎನ್ನುವುದನ್ನು ಗುರುತಿಸಿ ಆ ಭಾಗದ ಸ್ಥಳೀಯ ನಿವಾಸಿಗಳ ಮನವೊಲಿಸಿ ಅವರ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಆನೆ ಕಾರಿಡಾರ್ ಮರುನಿರ್ವಿುಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಭೂಸ್ವಾಧೀನ ಮಾಡಿಕೊಳ್ಳುವ ರೈತರ ಜಮೀನಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರವನ್ನೂ ನೀಡಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಒಂದು ವೇಳೆ ರೈತರು ಒಪ್ಪಿ ತಮ್ಮ ಜಮೀನನ್ನು ನೀಡಿದರೆ ಕೆಲವೆಡೆ ಆನೆ ಕಾರಿಡಾರ್ ಜೋಡಿಸಲು ಸಾಧ್ಯವಿದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಸಂಪರ್ಕ ಮಾಡಿದಂತೆ ಆಗುವುದಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿ ಮಧ್ಯೆ ಆನೆ ಕಾರಿಡಾರ್ ಸಂಪರ್ಕ ಕಲ್ಪಿಸುವುದು ಹೇಗೆ? ಹಿನ್ನೀರಿನಲ್ಲಿ ಹಾಗೂ ಎತ್ತಿನಹೊಳೆ ನಾಲೆಯಲ್ಲಿ ಆನೆ ಓಡಾಟಕ್ಕೆ ಎಲ್ಲಿ ಜಾಗ ಮಾಡಲು ಸಾಧ್ಯ ಎನ್ನುವ ಬಗ್ಗೆಯೂ ಅರಣ್ಯ ಇಲಾಖೆ ಚಿಂತನೆ ನಡೆಸಬೇಕಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಖಾಸಗಿ ಹಿಡುವಳಿ ಜಮೀನು ಸ್ವಾಧೀನಪಡಿಸಿಕೊಂಡು ಆನೆ ಕಾರಿಡಾರ್ ಮರು ನಿರ್ವಿುಸಲು ಹೊರಟರೆ ಪಶ್ಚಿಮಘಟ್ಟ ವ್ಯಾಪ್ತಿಯ 10 ಜಿಲ್ಲೆಗಳಲ್ಲಿ ಮತ್ತೊಮ್ಮೆ ರೈತರು ಅರಣ್ಯ ಇಲಾಖೆ ವಿರುದ್ಧ ಹೋರಾಟ ಆರಂಭಿಸುವುದು ಶತಃಸಿದ್ಧ. ಈಗಾಗಲೇ ಅರಣ್ಯ ಕಾಯ್ದೆಗಳು, ಪರಿಸರ ಸೂಕ್ಷ್ಮ ಪ್ರದೇಶ ಘೊಷಣೆಯ ಕರಡು ಅಧಿಸೂಚನೆ, ಮಾನವ ವನ್ಯಜೀವಿ ಸಂಘರ್ಷದಿಂದಾಗಿ ಪಶ್ಚಿಮಘಟ್ಟ ಪ್ರದೇಶದ ಜನ ರೋಸಿಹೋಗಿದ್ದಾರೆ. ಇದರ ಮಧ್ಯೆ ಆನೆ ಕಾರಿಡಾರ್ ಮಾಡಲು ರೈತರ ಭೂಮಿ ವಶಪಡಿಸಿಕೊಳ್ಳುತ್ತೇವೆ ಎಂದರೆ ಸರ್ಕಾರ ಪ್ರತಿರೋಧ ಎದುರಿಸಬೇಕಾಗುತ್ತದೆ.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಬೇಲೂರು, ಮೂಡಿಗೆರೆ ಹಾಗೂ ಎನ್ಆರ್ ಪುರ ಭಾಗಗಳಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆಯು ‘ಆಪರೇಷನ್ ಗಜ’ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇದೇ ವೇಳೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಲು ನ. 30ರಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಜನಪ್ರತಿನಿಧಿಗಳು, ಪ್ಲಾಂಟೇಶನ್ ಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಮಹತ್ವದ ಸಭೆ ಕರೆದಿದ್ದಾರೆ.
ಅಂದಹಾಗೆ, ಸಣ್ಣಪುಟ್ಟ ಅರಣ್ಯ ತುಣುಕುಗಳ ನಡುವಿನ ಸಂಪರ್ಕ ಕೊರತೆ, ಕಾಫಿ ತೋಟ-ಕೃಷಿ ಭೂಮಿಗಳ ನಡುವಿನ ಆನೆಗಳ ಸಂಚಾರ ಹಾಗೂ ರಸ್ತೆ- ರೈಲ್ವೆ- ಬೇಲಿಗಳಂತಹ ಅಡೆತಡೆಗಳಿಂದ ಆನೆ ಕಾರಿಡಾರ್ ಬದಲಾಗುತ್ತಿರುವುದೇ ಸಂಘರ್ಷ ತೀವ್ರವಾಗಲು ಪ್ರಮುಖ ಕಾರಣ ಎಂದು ಪ್ರಾಥಮಿಕ ಹಂತದಲ್ಲಿ ತೀರ್ವನಕ್ಕೆ ಬಂದಿದೆ. ಹಾಸನ ಜಿಲ್ಲೆಯಲ್ಲಿ 1980ರ ದಶಕದಿಂದಲೂ ಮಾನವ-ಆನೆ ಸಂಘರ್ಷ ದಾಖಲಾಗಿದ್ದು, ಕಳೆದ 4 ವರ್ಷಗಳಲ್ಲಿ (2020-21ರಿಂದ 2024-25ರವರೆಗೆ) ಜಿಲ್ಲೆಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 10,941 ಬೆಳೆಹಾನಿ ಪ್ರಕರಣಗಳು ವರದಿಯಾಗಿವೆ. ಹಾಸನ ಜಿಲ್ಲೆಯ ಒಟ್ಟು 46,017 ಹೆಕ್ಟೇರ್ ಮೀಸಲು ಅರಣ್ಯವು 97 ಪ್ರತ್ಯೇಕ ಬ್ಲಾಕ್ಗಳಲ್ಲಿ (ಬೇಲೂರಿನಲ್ಲಿ 9 ಮತ್ತು ಸಕಲೇಶಪುರದಲ್ಲಿ 22 ಬ್ಲಾಕ್ಗಳು) ಹಂಚಿಕೆಯಾಗಿರುವುದರಿಂದ, ತಂಪಾದ ನೆರಳು, ನೀರು ಮತ್ತು ಆಹಾರಕ್ಕಾಗಿ ಕಾಫಿ ತೋಟಗಳು ಹಾಗೂ ಕೃಷಿ ಭೂಮಿಗಳ ನಡುವೆ ಆನೆಗಳು ಸಂಚರಿಸುವಂತಾಗಿ ಸಂಘರ್ಷ ಹೆಚ್ಚಾಗಿದೆ ಎಂಬುದು ಅರಣ್ಯ ಇಲಾಖೆ ಕಂಡುಕೊಂಡಿರುವ ಅಂಶ.
ಕಾರ್ಯಾಚರಣೆ: ಪ್ರಸ್ತುತ ಗಂಭೀರ ಸಂಘರ್ಷಕ್ಕೆ ಕಾರಣವಾಗಿರುವ 10 ಆನೆಗಳನ್ನು ಸೆರೆಹಿಡಿಯಲು ಮುಖ್ಯ ವನ್ಯಜೀವಿ ಪರಿಪಾಲಕರು ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಸೆಕ್ಷನ್ 11ರಡಿ ಅನುಮತಿ ನೀಡಿದ್ದು, ಈಗಾಗಲೇ 2 ಸಲಗಗಳನ್ನು ಸೆರೆಹಿಡಿಯಲಾಗಿದೆ. ಉಳಿದ ಆನೆಗಳ ಸೆರೆಹಿಡಿಯುವಿಕೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಪಶುವೈದ್ಯಕೀಯ ಮೌಲ್ಯಮಾಪನದ ನಂತರ ಸ್ಥಳಾಂತರಿಸಲಾಗುವುದು. ಉಳಿದಂತೆ ಮರಿಗಳಿರುವ ಆನೆ ಹಿಂಡುಗಳನ್ನು ಒಟ್ಟಿಗೇ ಇರಿಸಿ, ಅವುಗಳ ಸಹಜ ಮತ್ತು ಸುರಕ್ಷಿತ ಚಲನೆಗೆ ಮಾತ್ರ ಅವಕಾಶ ನೀಡಲು ಇಲಾಖೆ ನಿರ್ಧರಿಸಿದೆ. ಆನೆ ಕಾರ್ಯಪಡೆ ಮತ್ತು ಕ್ಷಿಪ್ರ ಸ್ಪಂದನಾ ತಂಡಗಳು ಆರು ಆನೆ ಹಿಂಡುಗಳ ಚಲನೆಯ ಮೇಲೆ ನಿರಂತರ ನಿಗಾ ಇರಿಸಿದ್ದು, ಇತ್ತೀಚೆಗೆ ಕೊಗೋಡು, ಹೊಸಕುರು ಭಾಗದಲ್ಲಿದ್ದ ಹಿಂಡುಗಳು ಮೂಡಿಗೆರೆ ತಾಲೂಕಿನ ಕರಬೈಲು ಮತ್ತು ಮಾಕೊನಹಳ್ಳಿ-ನಂದಿಪುರ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. ಸುರಕ್ಷಿತ ಮಾರ್ಗ ಖಚಿತವಾದ ಅರಣ್ಯದ ಕಡೆಗೆ ಮಾತ್ರ ಆನೆಗಳನ್ನು ಕಳಿಸಲಾಗುತ್ತಿದ್ದು, ವಸತಿ ಪ್ರದೇಶಗಳತ್ತ ಆನೆಗಳು ಸುಳಿದರೆ ತಕ್ಷಣ ಚಲನೆಯನ್ನು ತಡೆದು ಗ್ರಾಮ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ಈ ಬೃಹತ್ ಕಾರ್ಯಾಚರಣೆಗೆ 350ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ಐದು ಶಿಬಿರಗಳಿಂದ ಕರೆಸಲಾದ 12 ತರಬೇತಿ ಪಡೆದ ಕುಮ್ಕಿ ಆನೆಗಳು ಹಾಗೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರೇಡಿಯೋ-ಕಾಲರ್ ದತ್ತಾಂಶ ಮತ್ತು ಕ್ಷೇತ್ರ ವೀಕ್ಷಣೆಗಳ ಆಧಾರದ ಮೇಲೆ ಧ್ವನಿವರ್ಧಕ, ಎಸ್ಎಂಎಸ್, ವಾಟ್ಸ್ಆಪ್ ಮತ್ತು ಡಿಜಿಟಲ್ ಫಲಕಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಜತೆಗೆ ಮೂಡಿಗೆರೆ ಮತ್ತು ಎನ್.ಆರ್. ಪುರದ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಹೊಲಗಳು ಮತ್ತು ವಸತಿ ಪ್ರದೇಶಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಆನೆಗಳ ಸುರಕ್ಷಿತ ಸಂಚಾರಕ್ಕಾಗಿ 874 ಹೆಕ್ಟೇರ್ ವಿಸ್ತೀರ್ಣದ ತತ್ಕೊಳ ಮೀಸಲು ಅರಣ್ಯದ ಸಂಪರ್ಕವನ್ನು ಇಲಾಖೆ ಪರಿಶೀಲಿಸುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ (1,06,429 ಹೆಕ್ಟೇರ್) ಕಡೆಗೆ ಆನೆ ಹಿಂಡುಗಳ ಮುಂದಿನ ಚಲನೆಯು ಪರಿಶೀಲಿತ ಅರಣ್ಯ ಸಂಪರ್ಕ, ಹಿಂಡುಗಳ ವರ್ತನೆ, ಗ್ರಾಮ ಸುರಕ್ಷತೆ ಮತ್ತು ಪರಿಸರ ಮೌಲ್ಯಮಾಪನವನ್ನು ಆಧರಿಸಿರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆನೆ ಕಾರಿಡಾರ್ ತುಂಡಾಗಿರುವುದರಿಂದಲೇ ಆನೆಗಳು ಎಲ್ಲೆಂದರಲ್ಲಿ ನುಗ್ಗುತ್ತಿವೆ. ಸಾಧ್ಯವಾದಷ್ಟು ಮಟ್ಟಿಗೆ ಆನೆ ಕಾರಿಡಾರ್ ಸಂಪರ್ಕ ಮಾಡಿದರೆ ಆನೆಗಳ ಹಾವಳಿ ಕಡಿಮೆಯಾಗಲಿದೆ. ಖಾಸಗಿ ಹಿಡುವಳಿ ಭೂಮಿ ಸ್ವಾಧೀನಕ್ಕೆ ಪಡೆದು ಆನೆ ಕಾರಿಡಾರ್ ಮರುಸಂಪರ್ಕ ಮಾಡಲು ಸಾಧ್ಯವಿದೆಯೇ ಎಂಬ ಬಗ್ಗೆ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
| ರಾಮಲಿಂಗಾರೆಡ್ಡಿ ಅರಣ್ಯ ಸಚಿವ
ಮೊದಲಿದ್ದ ಆನೆ ಕಾರಿಡಾರ್ ಈಗ ಗುರುತಿಸುವುದು ಕಷ್ಟ. ಕಾಡುಗಳಿಂದ ಕಾಡಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾಡು ಬೆಳೆಸಬೇಕು. ಆಗ ಆನೆಗಳು ಸಂಪರ್ಕ ಕಲ್ಪಿಸುವ ಕಾಡಿನ ಮೂಲಕ ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಚಾರ ನಡೆಸಿದಾಗ ಆನೆ ಹಾವಳಿ ನಿಯಂತ್ರಣಕ್ಕೆ ಬರುತ್ತದೆ. ಈಗಿನ ಸ್ಥಿತಿಯಲ್ಲಂತೂ ಆನೆ ಕಾರಿಡಾರ್ ನಿರ್ಮಾಣ ಅಸಾಧ್ಯ.
| ಜಿ. ವೀರೇಶ್ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ