ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾಹಿತಿ ಆಯೋಗದ ಚಾಟಿ

ಎರಡು ಮಹತ್ವದ ತೀರ್ಪು ಪ್ರಕಟಿಸಿದ ಅಯಕ್ತ ರುದ್ರಣ್ಣ ಹರ್ತಿಕೋಟೆ
The Information Commission has delivered a stern verdict against officials who were causing delays by failing to provide information.
ಮಾಹಿತಿ ನೀಡದೆ ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಮಾಹಿತಿ ಆಯೋಗ ಕಠಿಣ ತೀರ್ಪು ನೀಡಿದೆ.
Published on: 

ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ಮಾಹಿತಿ ನೀಡದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಆಸ್ತಿಯ ಬಾಡಿಗೆ ವಸೂಲಿಗೆ ವಿಳಂಬ ಮಾಡಿದ ಆಡಳಿತದ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಮಹತ್ವದ ತೀರ್ಪುಗಳನ್ನು ನೀಡಿದೆ. ಪೀಠ ಸಂಖ್ಯೆ4ರ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಈ ಎರಡು ತೀರ್ಪುಗಳನ್ನು ನೀಡಿದ್ದಾರೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಸಿಂಗಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉರುಳಿಸುವಿಕೆ ಹಾಗೂ ನವೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರಿ ವಕೀಲ ನೀರಜ್ ಶಾಂತಕುಮಾರ್ ಎಂಬುವವರು 2024ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಮಾಹಿತಿ ನೀಡದೆ, ಆಯೋಗದ ವಿಚಾರಣೆಗಳಿಗೂ ಗೈರಾಗಿದ್ದರು.

ಅರ್ಜಿಯನ್ನು ಸಂಬಂಧಿಸಿದ ಉಪ ವಿಭಾಗಕ್ಕೆ ವರ್ಗಾಯಿಸದೆ, ಪರಸ್ಪರ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಅಧಿಕಾರಿಗಳು ಸಬೂಬು ಹೇಳಿದ್ದರು. ಹಲವು ವಿಚಾರಣೆಗಳ ಬಳಿಕವೂ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಆಯೋಗ, ಆಯುಕ್ತ ಕೆ.ಎನ್. ರಮೇಶ್ ಅವರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ಘೋಷಿಸಿ ಡಿ.29ಕ್ಕೆ ವಿಚಾರಣೆಗೆ ಹಾಜರಾಗಿ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ಬಗ್ಗೆಯೂ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ಪ್ರಕರಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ನಾಗಭೂಷಣ್ ಅವರಿಗೆ 25 ಸಾವಿರ ರೂ. ದಂಡ ಹಾಗೂ ಅರ್ಜಿದಾರರಿಗೆ 5 ಸಾವಿರ ರೂ. ಪರಿಹಾರ ನೀಡುವಂತೆ ಈ ಹಿಂದೆ ಆದೇಶಿಸಲಾಗಿತ್ತು.

1.52 ಕೋಟಿ ರೂ. ಬಾಡಿಗೆ ಬಾಕಿ ಪ್ರಕರಣ

ಹುಣಸೂರು ನಗರಸಭೆ ಮಾಲೀಕತ್ವದ ಚಿತ್ರಮಂದಿರದ ಗುತ್ತಿಗೆದಾರ ಬಾಣಸಂದ್ರ ಹನೀಫ್ ಭಾಷ ಎಂಬುವವರು 2015ರಿಂದ ಉಳಿಸಿಕೊಂಡಿರುವ 1,52 ಕೋಟಿ ರೂ. ಬಾಕಿ ವಸೂಲಿಗೆ ಕೈಗೊಂಡ ಕ್ರಮಗಳ ಕುರಿತು ಇಂಟಕ್‌ರಾಜು ಎನ್. ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದರು.

ನಗರಸಭೆಯ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಯೋಗ ಕಾನೂನು ಕ್ರಮಕ್ಕೆ ಸೂಚಿಸಿತ್ತು. ಈ ಸಂಬಂಧ ಬೆಂಗಳೂರಿನಲ್ಲಿರುವ ಗುತ್ತಿಗೆದಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದೊಂದಿಗೆ ಸಂಪರ್ಕ ಸಾಧಿಸಲು ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಬಾಕಿ ಮೊತ್ತವನ್ನು ಭೂ ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲಿ ಮಾಡಲು ಅನುಮತಿ ಕೋರಿ ಪತ್ರವೂ ಬರೆಯಲಾಗಿದೆ.