ಸಮಸ್ಯೆ ಸುಳಿಗೆ ನೂರಾರು ಹಳ್ಳಿ

,
,
Published on

ಪ್ರಮುಖ ಮುಖ್ಯಾಂಶಗಳು

  • ಕುಡ್ಯಾಕ ನೀರಾದ್ರೂ ಕೊಡ್ರಿ ಹಳ್ಳಿ ಮಂದಿ ಅಳಲು
  • ಕಲಬುರಗಿ ಜಿಲ್ಲೆಯಲ್ಲಿ 465 ಕೊಳವೆಬಾವಿ ಸ್ಥಗಿತ
ಕಲಬುರಗಿ: ಭರ್ಜರಿ ಮಳೆಗೆ ಮುಂಗಾರು ಬೆಳೆ ನೆಲಕಚ್ಚಿ ಲಕ್ಷಾಂತರ ರೈತರು ತೊಂದರೆಗೆ ಸಿಲುಕಿ ಸುಧಾರಿಸಿಕೊಳ್ಳುತ್ತಲೇ ಇದೀಗ ಬೇಸಿಗೆಯ ನೀರಿನ ಸಮಸ್ಯೆ ಭೂತ ಎದುರಾಗಿದೆ. ಹೀಗಾಗಿ ಜಿಲ್ಲೆಯಲ್ಲಿ 283 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆಗೆ ಮುಂದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಚಿಕ್ಕಪುಟ್ಟ ನದಿ, ಹಳ್ಳಗಳು, ಬಾವಿ, ಕೊಳವೆಬಾವಿ ನೀರಿನ ಮೂಲ ಅವಲಂಬಿಸಿವೆ. ಅದರಲ್ಲಿ ಭೀಮಾ, ಸನ್ನತಿ, ತ್ತರಗಾ, ಸೊನ್ನ ಬ್ಯಾರೇಜ್​, ಅಮರ್ಜಾ, ಗಂಡೋರಿ, ಬೆಣ್ಣೆತೊರಾ ಜಲಾಶಯ, ತೆರೆದ ಬಾವಿ, ಕೊಳವೆಬಾವಿ ಪ್ರಮುಖ ನೀರಿನ ಮೂಲ ಹೊಂದಿವೆ. ಕೆಲ ಹಳ್ಳಿಗಳು ಬಹುಗ್ರಾಮ ಯೋಜನೆ ವ್ಯಾಪ್ತಿಗೆ ಸೇರಿವೆ.

283 ಹಳ್ಳಿ ಸಮಸ್ಯಾತ್ಮಕ

ಮಾರ್ಚ್​, ಏಪ್ರಿಲ್​ ಮತ್ತು ಮೇ ನಲ್ಲಿ ಅಫಜಲಪುರ ತಾಲೂಕಿನ 60, ಆಳಂದ 72, ಚಿಂಚೋಳಿ 9, ಚಿತ್ತಾಪುರ 9, ಕಲಬುರಗಿ 53, ಕಮಲಾಪುರ 20, ಕಾಳಗಿ 7, ಶಹಾಬಾದ್​ 4, ಸೇಡಂ 13, ಜೇವರ್ಗಿ 25, ಯಡ್ರಾಮಿ ತಾಲೂಕು 14 ಸೇರಿ ಜಿಲ್ಲೆಯಲ್ಲಿ ಒಟ್ಟು 283 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಗೆ ಸಿಲುಕಲಿವೆ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 1227 ಕೊಳವೆಬಾವಿಗಳಿದ್ದರೆ ಇದರಲ್ಲಿ 754 ಕಾರ್ಯನಿರ್ವಹಿಸುತ್ತಿದ್ದು, 465 ಒಂದಿಲ್ಲೊಂದು ಕಾರಣಕ್ಕೆ ಸ್ಥಗಿತಗೊಂಡಿವೆ. ಸುಮಾರು 308 ಕೊಳವೆಬಾವಿ ಫ್ಲಶ್​ ಮಾಡುವುದು, ಮರು ಕೊರೆಸುವ ಕೆಲಸ ಆಗಬೇಕಿದೆ. ಇದರ ಜತೆಗೆ 303 ಖಾಸಗಿ ಕೊಳವೆಬಾವಿ ಗುರುತಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಪ್ರಸಕ್ತ 5 ಟ್ಯಾಂಕರ್​ಗಳು ಲಭ್ಯವಿದೆ.

465 ಕೊಳವೆಬಾವಿ ಸ್ಥಗಿತ

ಅಫಜಲಪುರ ತಾಲೂಕಿನಲ್ಲಿ 152 ಕೊಳವೆಬಾವಿ ಕಾರ್ಯನಿರ್ವಹಿಸುತ್ತಿದ್ದರೆ, 92 ಸ್ಥಗಿತ, ಆಳಂದನಲ್ಲಿ 195 ಕಾರ್ಯನಿರ್ವಹಿಸುತ್ತಿದ್ದರೆ 128 ಸ್ಥಗಿತ, ಚಿಂಚೋಳಿ 11 ವರ್ಕಿಂಗ್​, 15 ಸ್ಥಗಿತ, ಚಿತ್ತಾಪೂರ್​ 22 ವರ್ಕಿಂಗ್​, 2 ಸ್ಥಗಿತ, ಕಲಬುರಗಿ 194 ವರ್ಕಿಂಗ್​, 126 ಸ್ಥಗಿತ, ಕಮಲಾಪುರ 42 ವರ್ಕಿಂಗ್​, 30 ಸ್ಥಗಿತ, ಕಾಳಗಿ 18 ವರ್ಕಿಂಗ್​, ಶಹಾಬಾದ್​ 10 ವರ್ಕಿಂಗ್​, ಒಂದು ಸ್ಥಗಿತ, ಸೇಡಂ 6 ವರ್ಕಿಂಗ್​, 4 ಸ್ಥಗಿತ, ಜೇವರ್ಗಿ 74 ವರ್ಕಿಂಗ್​, 41 ಸ್ಥಗಿತ, ಯಡ್ರಾಮಿ 30 ವರ್ಕಿಂಗ್​, 26 ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 465 ಕೊಳವೆಬಾವಿ ಸ್ಥಗಿತಗೊಂಡಿವೆ.
ಖಾಸಗಿ ಕೊಳವೆಬಾವಿಗೆ ಸಂಬಂಧಿಸಿದಂತೆ ಅಫಜಲಪುರ ತಾಲೂಕಿನಲ್ಲಿ 44, ಆಳಂದ 157, ಕಲಬುರಗಿ 26, ಕಮಲಾಪುರ 8, ಜೇವರ್ಗಿ 56, ಯಡ್ರಾಮಿ 12 ಕೊಳವೆಬಾವಿಗಳಿವೆ ಎಂದು ಗುರುತಿಸಲಾಗಿದೆ.

ನಗರಕ್ಕೆ ನೀರಿನ ಮೂಲ

ಭೀಮಾ ನದಿ, ಗಂಡೋರಿ ನಾಲಾ, ಭೋಸಗಾ ಕೆರೆ ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಮೂಲಗಳು. ನಗರದ ಎಲ್ಲಾ ವಾರ್ಡ್​ಗಳಿಗೆ ದಿನದ 24 ಗಂಟೆ ನೀರು ಪೂರೈಸುವ ಯೋಜನೆ ಜಾರಿಯಲ್ಲಿದೆ. ಎಲ್​ ಆ್ಯಂಡ್​ ಟಿ ಕಂಪನಿ ಈ ಕಾರ್ಯ ಮಾಡುತ್ತಿದ್ದು, ಈಗಾಗಲೇ ಅನೇಕ ವಾರ್ಡ್​ಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಮಾರ್ಚ್​ 15 ದಿನ ಕಳೆದಿದ್ದು, ಉಳಿದ ಎರಡೂವರೆ ತಿಂಗಳು ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಯೋಜಿಸಿದೆ.

ಹಲವು ಸುತ್ತಿನ ಸಭೆ

ಕುಡಿಯುವ ನೀರು, ಮೂಲಸೌಲಭ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​, ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ, ಬೇಸಿಗೆಯಲ್ಲಿ ಎದುರಾಗಬಹುದಾದ ತೊಂದರೆ ತಪ್ಪಿಸಲು ಕುಡಿಯುವ ನೀರು ಪೂರೈಕೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಎದುರಿಸಿದ ನೀರಿನ ಸಮಸ್ಯೆ, ನಗರ, ಗ್ರಾಮೀಣ ಪ್ರದೇಶದ ಯಾವ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳಬಹುದು, ನೀರು ಪೂರೈಸುವ ಬಗೆ, ನೀರಿನ ಮೂಲ, ಯಾವುದೇ ಕಾರಣಕ್ಕೂ ಜನರಿಗೆ ಕಲುಷಿತ ನೀರು ಸರಬರಾಜು ಆಗಬಾರದು, ಕೆಮಿಕಲ್​ ಟೆಸ್ಟಿಂಗ್​ಗೆ ಸೂಚನೆ ನೀಡಿದ್ದಾರೆ.
"

ನೀರಿನ ಸಮಸ್ಯಾತ್ಮಕ ಗ್ರಾಮ, ತಾಂಡಾ ಗುರುತಿಸಲಾಗಿದೆ. ವಾಟರ್​ ಟೆಸ್ಟಿಂಗ್​ ಅಭಿಯಾನ ಶುರು ಮಾಡಲಾಗಿದೆ. ಕೊಳವೆಬಾವಿ ಕೊರೆಯಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅಗತ್ಯ ಸಿದ್ಧತೆಗೆ ಅಧಿಕಾರಿಗಳನ್ನು ಅಣಿಗೊಳಿಸಲಾಗಿದೆ. ಯಾವುದೇ ಹಂತದಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಭಂವರ್​ಸಿಂಗ್​ ಮೀನಾ,

ಸಿಇಒ, ಜಿಪಂ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net