

ಕಲಬುರಗಿ: ಸಾವಿರಾರು ವರ್ಷಗಳ ಹಿಂದೆ ಧರ್ಮ, ಅಧ್ಯಾತ್ಮ, ಶಿಕ್ಷಣ ಕ್ಷೇತ್ರಗಳಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಕೀರ್ತಿ ಹೊನ್ನಕಿರಣಗಿಗೆ ಸಲ್ಲುತ್ತದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ್ ಹೇಳಿದರು. ಹೊನ್ನಕಿರಣಗಿ ಗ್ರಾಮದ ತ್ರೈಲಿಂಗೇಶ್ವರ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಭಾನುವಾರ ಹಮ್ಮಿಕೊಂಡ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಹೊನ್ನಕಿರಣಗಿ ಪ್ರಾಚಿನ ಕಾಲದಲ್ಲಿ ನಾಡಿಗೆ ಚಿರಪರಿಚಿತವಾಗಿತ್ತು. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ದೇಗುಲ, ಸ್ಮಾರಕಗಳು ನಾಡಿನ ಇತಿಹಾಸದ ಪುಟ ಮಾಹಿತಿ ನೀಡುತ್ತವೆ. ಈಶ್ವರ, ತ್ರೈಲಿಂಗೇಶ್ವರ ದೇವಾಲಯ ಪ್ರಾಚಿನ ಕಾಲದ ಕಲೆ, ಸಾಹಿತ್ಯ, ಸಂಗೀತ, ಧರ್ಮ, ಆಧ್ಯಾತ್ಮದ ಮೇಲೆ ಬೆಳಕು ಚೆಲ್ಲುತ್ತವೆ. ಸುತ್ತಮುತ್ತಲಿರುವ ತಿಳಗೊಳ, ತೊನಸನಳ್ಳಿ, ಭಂಕೂರು, ಶಹಾಬಾದ್ ಮುಂತಾದ ಗ್ರಾಮಗಳಲ್ಲಿ ದೊರೆತಿರುವ ಶಿಲ್ಪ, ಸ್ಮಾರಕಗಳು ಕರುನಾಡಿನ ಕಥೆ ಸಾರುತ್ತವೆ ಎಂದರು. ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಮಾತನಾಡಿ, ಅಳವಿನ ಅಂಚಿನಲ್ಲಿರುವ ಸ್ಮಾರಕಗಳ ರಕ್ಷಣೆ ಅಗತ್ಯವಾಗಿದೆ. ಗ್ರಾಮಸ್ಥರು ಗ್ರಾಮದ ಇತಿಹಾಸ ತಿಳಿದುಕೊಳ್ಳಬೇಕು ಎಂದರು. ಪ್ರಮುಖರಾದ ಶಿವಯೋಗೆಪ್ಪ ಬಿರಾದಾರ, ದೇವಿಂದ್ರಪ್ಪ ಸಜ್ಜನ, ಸಿದ್ದಣ್ಣ ಕೌಲಗಿ, ಪಂಚಾಕ್ಷರಿ ಹಿರೇಮಠ, ಅಣ್ಣಾರಾಯ ಜಂಗಿಮಠ, ಚನ್ನವಿರ ಹಿರೇಮಠ, ಸಂತೋಷಕುಮಾರ ಸಾಗನೂರ, ಸಿಮೋನ ಎಸ್. ನಂಬಿ ಇತರರಿದ್ದರು.