ಕಸ ಕಡೆಗಣಿಸಿದರೆ ದುಬಾರಿ ದಂಡ!

Representative image
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಏಕರೂಪದ ವ್ಯವಸ್ಥೆ ಜಾರಿಗೆ ತರಲು ಬಯಸಿರುವ ಸರ್ಕಾರ ಹೊಸ ಮಾದರಿ ಬೈಲಾ ಪರಿಚಯಿಸಲು ಮುಂದಾಗಿದೆ. ಕಸ ವಿಲೇವಾರಿ ಶುಲ್ಕ ಮತ್ತು ದಂಡದ ವಿಚಾರದಲ್ಲಿ ಸ್ಪಷ್ಟತೆ ತರಲಾಗಿದೆ. ಜತೆಗೆ ಬೃಹತ್ ತ್ಯಾಜ್ಯ ಉತ್ಪಾದಕರ ಮೇಲೆ ಕಠಿಣ ಜವಾಬ್ದಾರಿ ಹೇರಲಾಗುತ್ತಿದೆ. ಬಹು ಮುಖ್ಯವಾಗಿ ಕಸ ಸುಡುವವರಿಗೆ 25 ಸಾವಿರ ರೂ. ವರೆಗೂ ದಂಡ ವಿಧಿಸಲು ಅವಕಾಶ ಮಾಡಿಕೊಳ್ಳಲಾಗುತ್ತಿದೆ. ಮನೆಗಳಿಗೆ ತಿಂಗಳಿಗೆ 45 ರೂ.ನಿಂದ 100 ರೂ.(500 ಚ.ಅಡಿವರೆಗೆ 45 ರೂ., 2,000 ಚ.ಅಡಿ ಮೇಲ್ಪಟ್ಟರೆ 100 ರೂ.) ಶುಲ್ಕ ನಿಗದಿಯಾಗಲಿದೆ. ಹೋಟೆಲ್​ಗಳಿಗೆ 700 ರೂ.ನಿಂದ 1,000, ಕಲ್ಯಾಣ ಮಂಟಪಗಳಿಗೆ 2,000, ಬೀದಿ ವ್ಯಾಪಾರಿಗಳಿಗೆ 150 ರೂ. ಶುಲ್ಕ ಇರಲಿದೆ.

ವಸತಿ ಮನೆಗಳಿಗೆ ಸ್ಥಳೀಯ ಸಂಸ್ಥೆಯ ದರ್ಜೆ ಮತ್ತು ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಸಿಕ 20 ರೂ.ನಿಂದ 90 ರೂ.ವರೆಗೆ, ನಿವೇಶನಗಳಿಗೆ ವಾರ್ಷಿಕ ಪ್ರತಿ ಚದರ ಅಡಿಗೆ 20 ಪೈಸೆಯಿಂದ 25 ಪೈಸೆವರೆಗೆ ದರ ನಿಗದಿಯಾಗಲಿದೆ. ಈ ಶುಲ್ಕ ಮೂರು ವರ್ಷಕ್ಕೊಮ್ಮೆ ಶೇ.10 ಹೆಚ್ಚಳವಾಗುತ್ತದೆ. ಮೂರು ತಿಂಗಳು ಪಾವತಿಸದಿದ್ದರೆ ತಿಂಗಳಿಗೆ ಶೇ.2 ಹೆಚ್ಚುವರಿ ಶುಲ್ಕ, ಆರು ತಿಂಗಳಿಗಿಂತ ಹೆಚ್ಚು ಬಾಕಿ ಉಳಿಸಿದರೆ ತೆರಿಗೆಯಂತೆ ವಸೂಲಿ ಮಾಡಬಹುದು ಮತ್ತು ಸೇವೆಯನ್ನೂ ನಿಲ್ಲಿಸಬಹುದು. ಮನೆಯಲ್ಲೇ ಕಾಂಪೋಸ್ಟ್ ಮಾಡುವವರಿಗೆ ಶುಲ್ಕ ರಿಯಾಯಿತಿ ನೀಡಲು ಅವಕಾಶವಿದೆ.

ರಸ್ತೆಯಲ್ಲಿ ಕಸ ಎಸೆಯುವುದು, ಉಗುಳುವುದಕ್ಕೆ ಮೊದಲ ಬಾರಿ 300 ರೂ., ಪುನರಾವರ್ತನೆಗೆ 500 ರೂ. ಕಸ ಸುಡುವುದು, ಅಕ್ರಮವಾಗಿ ಸುರಿಯುವುದು ಅಥವಾ ಗುಂಡಿಯಲ್ಲಿ ಮುಚ್ಚಿದರೆ ಬೃಹತ್ ಉತ್ಪಾದಕರಿಗೆ 25,000 ರೂ. ಮತ್ತು ಇತರರಿಗೆ 5,000 ರೂ. ದಂಡ ಹಾಕಲಾಗುತ್ತದೆ. ಕಸ ವಿಂಗಡಿಸದ ಸಾಮಾನ್ಯ ಕುಟುಂಬಕ್ಕೆ 200 (ಪುನರಾವರ್ತನೆಗೆ 300 ರೂ.), ಬೃಹತ್ ಉತ್ಪಾದಕರಿಗೆ 2,000 ರೂ. (ನಂತರ 5,000 ರೂ.). ಕಟ್ಟಡ ಅವಶೇಷವನ್ನು ವಿಂಗಡಿಸದೆ ಸುರಿದರೆ ಟನ್​ಗೆ 1,500. ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕೆ 750ರಿಂದ ದಂಡ ಆರಂಭ, ಮೂರನೇ ಬಾರಿ ವ್ಯಾಪಾರ ಪರವಾನಗಿ ರದ್ದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ದಂಡದ ಹಣ ಪ್ರತ್ಯೇಕ ಘನತ್ಯಾಜ್ಯ ನಿಧಿಗೆ ಜಮೆಯಾಗಲಿದೆ. ದಂಡ ವಿಧಿಸಿದ ಆದೇಶದ ವಿರುದ್ಧ ಮೂರು ತಿಂಗಳೊಳಗೆ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸುವುದಕ್ಕೂ ಒಂದು ಅವಕಾಶ ಮಾಡಿಕೊಡಲಾಗಿದೆ.

ಸಂಸ್ಕರಣೆ ಮತ್ತು ವಿಲೇವಾರಿಗೆ ಹೊಸ ಮಾನದಂಡಗಳಿವೆ. ಒಣ ಕಸ ವಿಂಗಡಣೆಗೆ ವಸ್ತು ಮರುಪಡೆಯುವಿಕೆ ಕೇಂದ್ರ ಸ್ಥಾಪನೆ ಕಡ್ಡಾಯ. ಪ್ರತಿ ಕೆ.ಜಿ.ಗೆ 1,500 ಕಿಲೋ ಕ್ಯಾಲರಿ ಮೀರಿದ ಮರುಬಳಕೆಯಾಗದ ಒಣ ಕಸವನ್ನು ಸಿಮೆಂಟ್ ಕಾರ್ಖಾನೆ, ಬಾಯ್ಲರ್​ಗಳಲ್ಲಿ ಇಂಧನವಾಗಿ ಬಳಸಬೇಕು. ಹಸಿ ಕಸವನ್ನು ಕಾಂಪೋಸ್ಟ್, ಜೈವಿಕ ಅನಿಲ ಅಥವಾ ಬಯೋ-ಸಿಎನ್​ಜಿ ಘಟಕಗಳಲ್ಲಿ ಸಂಸ್ಕರಿಸಬೇಕು, ಕಾಂಪೋಸ್ಟ್ ಗುಣಮಟ್ಟವನ್ನು ತ್ರೖೆಮಾಸಿಕ ಪರೀಕ್ಷಿಸಬೇಕು. ಸಂಸ್ಕರಿಸದ ಹಸಿ ಕಸವನ್ನು ಭೂ ಭರ್ತಿಗೆ ಹಾಕುವಂತಿಲ್ಲ. ಹಳೆಯ ತ್ಯಾಜ್ಯ ರಾಶಿ ಗುರುತಿಸಿ ಜೈವಿಕ ಗಣಿಗಾರಿಕೆ (ಬಯೋ-ಮೈನಿಂಗ್) ಮೂಲಕ ತೆರವುಗೊಳಿಸಲು ಪ್ರತ್ಯೇಕ ಯೋಜನೆ ರೂಪಿಸಬೇಕು, ಅಂತಹ ಕಡೆ ಹೊಸ ಕಸ ಸುರಿಯುವಂತಿಲ್ಲ.

ಕಟ್ಟಡ ತ್ಯಾಜ್ಯಕ್ಕೆ ಪ್ರತ್ಯೇಕ

ಕಟ್ಟಡ ಮತ್ತು ಕೆಡವಿದ ಅವಶೇಷ ನಿರ್ವಹಣೆಗೂ ಪ್ರತ್ಯೇಕ ಅಧ್ಯಾಯವಿದೆ. ನಿರ್ವಣ, ನವೀಕರಣ ಅಥವಾ ಕೆಡವುವ ಕೆಲಸ ಆರಂಭಿಸುವ ಮೊದಲು ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಪಾಲಿಕೆಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಪಾಲಿಕೆಗಳು ತಾತ್ಕಾಲಿಕ ಸಂಗ್ರಹಣಾ ಕೇಂದ್ರ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಬೇಕು ಹಾಗೂ ಪಾಲಿಕೆಯ ಕಾಮಗಾರಿಗಳಲ್ಲಿ ಮರುಬಳಕೆ ಅವಶೇಷವನ್ನು ಶೇ.10ರವರೆಗೆ ಬಳಸಲು ಉತ್ತೇಜಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ವಣ, ಇಂಧನ ಬಳಕೆ ಇತ್ಯಾದಿಗಳಿಗೆ ಬಳಸಲು ಮತ್ತು ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚಿಸಲಾಗಿದೆ. ಹೋಟೆಲ್, ಆಸ್ಪತ್ರೆ ಮುಂತಾದ ಜೈವಿಕ-ವೈದ್ಯಕೀಯ ತ್ಯಾಜ್ಯವನ್ನು ಪುರಸಭೆ ಕಸದೊಂದಿಗೆ ಬೆರೆಸುವಂತಿಲ್ಲ.

ಜಾರಿ ಯಾವಾಗ?

ನಗರಾಭಿವೃದ್ಧಿ ಇಲಾಖೆಯು ‘ಕರ್ನಾಟಕ ಮುನ್ಸಿಪಲ್ ಕಾರ್ಪೆರೇಷನ್ಸ್ ಘನತ್ಯಾಜ್ಯ ನಿರ್ವಹಣೆ ಮಾದರಿ ಉಪನಿಯಮಗಳು-2026 ಮತ್ತು ಕರ್ನಾಟಕ ಮುನ್ಸಿಪಾಲಿಟೀಸ್ ಘನತ್ಯಾಜ್ಯ ನಿರ್ವಹಣೆ ಮಾದರಿ ಕರಡನ್ನು ಸಿದ್ಧಪಡಿಸಿ, ಸಾರ್ವಜನಿಕರು ಮತ್ತು ನಗರಪಾಲಿಕೆಗಳಿಂದ 30 ದಿನಗಳೊಳಗೆ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ. ನಿಯಮಗಳು ಅಂತಿಮವಾಗಿ ಅಧಿಸೂಚನೆಗೊಂಡ ಮೂರು ತಿಂಗಳೊಳಗೆ ನಗರಪಾಲಿಕೆಗಳು ಇವುಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಿದೆ. ವಿಫಲವಾದಲ್ಲಿ ನಾಲ್ಕನೇ ತಿಂಗಳ ಮೊದಲ ದಿನದಿಂದಲೇ ಸ್ವಯಂಚಾಲಿತವಾಗಿ ಜಾರಿಗೆ ಬರಲಿವೆ.

ಮುಖ್ಯಾಂಶಗಳು

  1. ಆಡಳಿತ ಮತ್ತು ಕಾರ್ವಿುಕ ಕಲ್ಯಾಣಕ್ಕೂ ಒತ್ತು ನೀಡಲಾಗಿದೆ. ಪ್ರತಿ ಪಾಲಿಕೆ ನೋಡಲ್ ಅಧಿಕಾರಿ, ವಾರ್ಡ್ ಮಟ್ಟದ ಉಸ್ತುವಾರಿಗಳನ್ನು ನೇಮಿಸಬೇಕು.

  2. ವಾರ್ಡ್ ಸ್ವಚ್ಛತಾ ಸಮಿತಿಗಳನ್ನು ರಚಿಸಬೇಕು, ವಾರ್ಡ್ ಕಸ ನಿರ್ವಹಣಾ ಯೋಜನೆ ಸಿದ್ಧಪಡಿಸಬೇಕು ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆ ಮಾಡಬೇಕು.

  3. ಕಾರ್ಯಕ್ಷಮತೆಯ ಮಾಹಿತಿಯನ್ನು ಸ್ವಚ್ಛತಮ್ ಪೋರ್ಟಲ್ ಸೇರಿ ಆನ್​ಲೈನ್ ವೇದಿಕೆಗಳಲ್ಲಿ ಪ್ರಕಟಿಸಬೇಕು. ಪೌರಕಾರ್ವಿುಕರಿಗೆ ಗುರುತಿನ ಚೀಟಿ, ಸಮವಸ್ತ್ರ, ಸುರಕ್ಷತಾ ಸಾಧನ, ನಿಯಮಿತ ಆರೋಗ್ಯ ತಪಾಸಣೆ ಮತ್ತು ತರಬೇತಿ ಕಡ್ಡಾಯ

  4. ಮುಚ್ಚಿದ ವ್ಯವಸ್ಥೆ ಮತ್ತು ಜಿಪಿಎಸ್ ಟ್ರಾ್ಯಕಿಂಗ್ ಇರಬೇಕು. ಪೌರಕಾರ್ವಿುಕರಿಗೆ ವರ್ಷದೊಳಗೆ ಡಿಜಿಟಲ್ ಹಾಜರಾತಿ ಕಡ್ಡಾಯ.

  5. ಪಾಲಿಕೆಗಳು ಮನೆಮನೆ ಕಸ ಸಂಗ್ರಹದ ವಾರ್ಡ್​ವಾರು ವೇಳಾಪಟ್ಟಿ, ಮಾರ್ಗ ನಕ್ಷೆಗಳನ್ನು ಪ್ರಕಟಿಸಬೇಕು.

ಮೂಲದಲ್ಲೇ ನಾಲ್ಕು ಭಾಗಗಳಾಗಿ ವಿಂಗಡಣೆ

ಹೊಸ ನಿಯಮದಂತೆ ತ್ಯಾಜ್ಯವನ್ನು ಮೂಲದಲ್ಲೇ ನಾಲ್ಕು ಭಾಗಗಳಾಗಿ ವಿಂಗಡಿಸುವುದು ಕಡ್ಡಾಯ. ಹಸಿ ಕಸಕ್ಕೆ (ಅಡುಗೆ ಮನೆ, ತರಕಾರಿ, ಹೂವು, ಸಾವಯವ ತ್ಯಾಜ್ಯ) ಹಸಿರು ಬಣ್ಣದ ಬುಟ್ಟಿ, ಒಣ ಕಸಕ್ಕೆ (ಕಾಗದ, ಪ್ಲಾಸ್ಟಿಕ್, ಗಾಜು, ಲೋಹ, ಇ-ತ್ಯಾಜ್ಯ) ನೀಲಿ ಬಣ್ಣದ ಬುಟ್ಟಿ, ನೈರ್ಮಲ್ಯ ತ್ಯಾಜ್ಯಕ್ಕೆ (ಡೈಪರ್, ಸ್ಯಾನಿಟರಿ ನ್ಯಾಪ್ಕಿನ್ ಇತ್ಯಾದಿ) ಕೆಂಪು ಬಣ್ಣದ ಬುಟ್ಟಿ ಹಾಗೂ ವಿಶೇಷ ಕಾಳಜಿ ತ್ಯಾಜ್ಯಕ್ಕೆ (ಅವಧಿ ಮೀರಿದ ಔಷಧಗಳು, ಬ್ಯಾಟರಿ, ಸಿಎಫ್​ಎಲ್/ಎಲ್​ಇಡಿ ಬಲ್ಬ್, ಸಿರಿಂಜ್ ಇತ್ಯಾದಿ) ಕಪ್ಪು ಬಣ್ಣದ ಬುಟ್ಟಿಯನ್ನು ಬಳಸಬೇಕು. ಕಸ ಸಂಗ್ರಹದ ವೇಳೆ ವಿಂಗಡಿತ ಕಸ ಬೆರೆಸುವುದನ್ನು ನಿಷೇಧಿಸಲಾಗಿದ್ದು, ವಾಹನಗಳಲ್ಲಿ ಪ್ರತ್ಯೇಕ ವಿಭಾಗ ಇರಬೇಕಾಗುತ್ತದೆ.

ನೋಂದಣಿ ವ್ಯವಸ್ಥೆ, ವಾರ್ಷಿಕ ರಿಟರ್ನ್

20,000 ಚ.ಮೀ. ಮೇಲ್ಪಟ್ಟ ಕಟ್ಟಡ, ದಿನಕ್ಕೆ 40,000 ಲೀಟರ್ ನೀರು ಬಳಕೆ ಅಥವಾ ದಿನಕ್ಕೆ 100 ಕೆ.ಜಿ. ಕಸ ಉತ್ಪಾದಿಸುವ ಸಂಸ್ಥೆಗಳು ದೊಡ್ಡ ಪ್ರಮಾಣದ ಕಸ ಉತ್ಪಾದಕರ ವ್ಯಾಪ್ತಿಗೆ ಬರುತ್ತವೆ. ಇವು ಆನ್​ಲೈನ್​ನಲ್ಲಿ ನೋಂದಾಯಿಸಿಕೊಂಡು, ಆವರಣದಲ್ಲೇ ಹಸಿ ಕಸ ಸಂಸ್ಕರಿಸಬೇಕು. ಸಾಧ್ಯವಾಗದಿದ್ದರೆ ಪಾಲಿಕೆಯಿಂದ ವಿಸõತ ಬೃಹತ್ ತ್ಯಾಜ್ಯ ಉತ್ಪಾದಕರ ಹೊಣೆಗಾರಿಕೆ ಪ್ರಮಾಣಪತ್ರ ಖರೀದಿಸಬೇಕು. ಪ್ರತಿ ವರ್ಷ ಜೂನ್ 30ರೊಳಗೆ ವಾರ್ಷಿಕ ರಿಟರ್ನ್ ಸಲ್ಲಿಸಬೇಕು. ಜಾಗದ ಕೊರತೆ ಇದ್ದರೆ ವಿನಾಯಿತಿ ಕೋರಿ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಬೃಹತ್ ಉತ್ಪಾದಕರಲ್ಲ ಎಂದು ಸುಳ್ಳು ಘೊಷಣೆ ನೀಡಿದರೆ 10,000 ದಂಡ ತೆರಬೇಕಾಗುತ್ತದೆ.