ಮಹಾತ್ಮರ ಅವಹೇಳನಕ್ಕೆ ಪಂಚಪೀಠಾಧೀಶ್ವರರ ಖಂಡನೆ

ಬಸವಣ್ಣನವರ ಬಗ್ಗೆ ಹಗುರವಾದ ಮಾತು ತಪ್ಪು ಎಂದಿರುವ ಜಗದ್ಗುರುಗಳು
Shri Jagadguru Panchapithadheeshwara
ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು
Published on: 

ಬೆಂಗಳೂರು : ಭಾರತ ದೇಶ ಧಾರ್ಮಿಕ ಪರಂಪರೆಗೆ ವಿಶೇಷ ಗೌರವ ನೀಡುವ ಸಂಸ್ಕೃತಿಯನ್ನು ಹೊಂದಿದೆ. ಅಂತಹ ಧಾರ್ಮಿಕ ಸಂಸ್ಕೃತಿ ಪುನುರುತ್ಥಾನಕ್ಕೆ ಆಯಾ ಕಾಲಘಟ್ಟದಲ್ಲಿ ಹಲವು ಆಚಾರ್ಯರು, ಸಂತ-ಮಹಾಂತರು, ಶರಣರು ವಿಶೇಷ ಕೊಡುಗೆ ನೀಡಿದ್ದಾರೆ. ಆ ಯಾವುದೇ ಸಂಪ್ರದಾಯದ ಅಥವಾ ಪರಂಪರೆಯ ಮಹಾತ್ಮರನ್ನು ಅವಹೇಳನ ಮಾಡುವುದು ಖಂಡನೀಯ ಎಂದು ವೀರಶೈವ ಪಂಚಪೀಠದ ಜಗದ್ಗುರುಗಳು ಹೇಳಿದ್ದಾರೆ.

ಈ ಕುರಿತು ಸಂಯುಕ್ತ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶೈಲ ಮತ್ತು ಶ್ರೀಕಾಶೀ ಪೀಠದ ಜಗದ್ಗುರುಗಳು, ಅಭಿಪ್ರಾಯ ಭೇದಗಳೇನೇ ಇದ್ದರೂ ದಾರ್ಶನಿಕರ ವೈಯಕ್ತಿಕ ನಿಂದನೆ, ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಇತಿಹಾಸವನ್ನು ಮೀರಿ ಬಹು ಸಂಖ್ಯಾತ ಜನರು ತಮ್ಮ ತಮ್ಮ ಆರಾಧ್ಯ ವ್ಯಕ್ತಿಗಳ ಬಗ್ಗೆ ಭಕ್ತಿ-ಭಾವವನ್ನು ಇರಿಸಿಕೊಂಡಿರುತ್ತಾರೆ. ಅಂತಹ ಜನರ ಭಾವನೆಗಳಿಗೆ ನೋವಾಗುವಂತಹ ಅಥವಾ ಕೆರಳಿಸುವಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆ. ಆ ಕೆಲಸವನ್ನು ಯಾರೇ ಮಾಡಿದರು ಅದು ಖಂಡನಾರ್ಹ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸೋ ಇಚ್ಛೆ ಹೇಳಿಕೆ, ಬರವಣಿಗೆ, ಟೀಕೆ, ಟಿಪ್ಪಣಿಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ 12ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣನವರ ಬಗ್ಗೆ ರವಿ ಹಂಜ್ ಆಡಿರುವ ಹಗುರವಾದ ಮತ್ತು ಆಕ್ಷೇಪಾರ್ಹ ಮಾತುಗಳ ಬಗ್ಗೆ ಸರ್ಕಾರ ಕ್ಷಿಪ್ರ ಕ್ರಮ ಕೈಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾವುದೇ ವ್ಯಕ್ತಿಗಳು ಯಾವುದೇ ಮಹಾತ್ಮರ ಬಗ್ಗೆ ಇಂತಹ ಅಸಹನೀಯವಾದ ಮಾತುಗಳನ್ನಾಡುವುದು ಅಥವಾ ಬರೆಯುವುದು ತಪ್ಪು. ಇಂತಹ ಘಟನೆಗಳು ಮರುಕಳಿಸಬಾರದೆಂದು ವೀರಶೈವ ಲಿಂಗಾಯತ ಪಂಚಪೀಠದ ಜಗದ್ಗುರುಗಳು ಒತ್ತಾಯಿಸಿದ್ದಾರೆ.