ಬೆಂಗಳೂರು: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಅಂಗೀಕಾರ(Governor Accepts Resignation) ಮಾಡಿದ್ದಾರೆ.
ರಾಜೀನಾಮೆ ಸಲ್ಲಿಸುವುದು ಅತ್ಯಂತ ಗಂಭೀರ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ನಿಯಮದಂತೆ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಆದರೆ, ಎಲ್ಲರನ್ನೂ ಅಚ್ಚರಿಗೊಳಿಸಿರುವುದು ಅವರ ರಾಜೀನಾಮೆ ಪತ್ರದ ಶೈಲಿ. ಕೇವಲ ಒಂದೇ ಒಂದು ಸಾಲಿನಲ್ಲಿ ಸಿದ್ದರಾಮಯ್ಯ ತಮ್ಮ ಇಚ್ಛೆಯನ್ನು ಸರಳವಾಗಿ ಬರೆದಿದ್ದಾರೆ.
ರಾಜೀನಾಮೆ ಪತ್ರದಲ್ಲೇನಿದೆ?
"ಗೌರವಾನ್ವಿತ ಸರ್, ನಾನು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಲು ವಿನಂತಿ. ಸಾದರವಾಗಿ, ನಿಮ್ಮ ವಿಶ್ವಾಸಿ, ಸಿದ್ದರಾಮಯ್ಯ."
ಅಧಿಕಾರ ತ್ಯಜಿಸಲು ಸಿದ್ದರಾಮಯ್ಯ ಅವರು ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಕಾರಣಗಳನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಅತ್ಯಂತ ಸಂಕ್ಷಿಪ್ತ ಹಾಗೂ ಅಧಿಕೃತವಾಗಿ ಪತ್ರ ಮುಗಿಸಿದ್ದಾರೆ. ಪತ್ರದ ಕೊನೆಯಲ್ಲಿ 'ನಿಮ್ಮ ವಿಶ್ವಾಸಿ' ಎಂದು ಬರೆಯುವ ಮೂಲಕ ರಾಜ್ಯಪಾಲರ ಹುದ್ದೆಗೆ ನೀಡಬೇಕಾದ ಶಿಷ್ಟಾಚಾರ ಮತ್ತು ಗೌರವವನ್ನು ಅವರು ಕಾಯ್ದುಕೊಂಡಿದ್ದಾರೆ. ಸದ್ಯ ಈ ಸರಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸಂಪುಟ ವಿಸರ್ಜನೆ: ಮುಂದೇನು?
ನಿಯಮಗಳ ಪ್ರಕಾರ, ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಿದ ತಕ್ಷಣವೇ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಡೀ ಸಚಿವ ಸಂಪುಟದ ಅಸ್ತಿತ್ವವೂ ಕೊನೆಗೊಳ್ಳುತ್ತದೆ. ಅದರಂತೆ ರಾಜ್ಯಪಾಲರು ರಾಜೀನಾಮೆ ಅಂಗೀಕರಿಸುತ್ತಿದ್ದಂತೆ ಇಡೀ ಸಂಪುಟ ವಿಸರ್ಜನೆಯಾಗಿದೆ. ಇದೀಗ ಮುಂದಿನ ಮುಖ್ಯಮಂತ್ರಿ ಯಾರು? ಮುಂದಿನ ರಾಜಕೀಯ ಬೆಳವಣಿಗೆಗಳೇನು? ಎಂಬ ಕುತೂಹಲ ಇಡೀ ನಾಡಿನ ಜನರಲ್ಲಿ ಮನೆಮಾಡಿದೆ. ರಾಜಕೀಯ ವಲಯದಲ್ಲಿ ಮುಂದಿನ ಹಂತದ ಚಟುವಟಿಕೆಗಳು ಈಗಾಗಲೇ ಚುರುಕುಗೊಂಡಿವೆ.