

ಮುಂಬೈ : ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಗ್ಲೋಬಲ್ ಪೀಸ್ ಆನರ್ಸ್ (‘ಜಾಗತಿಕ ಶಾಂತಿ ಗೌರವ’) ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೇಲಾರ್ ಅವರು ಶನಿವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಸನ್ಮಾನಕ್ಕೂ ಮುನ್ನ ನಡೆದ ಸಂವಾದದಲ್ಲಿ ಸದ್ಗುರು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆಂತರಿಕ ಶಾಂತಿ, ಒತ್ತಡ, ವೃತ್ತಿಜೀವನದ ಸವಾಲುಗಳು, ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಜೀವನದ ಕುರಿತು ಸಂವಾದ ನಡೆಸಿದರು.
ಇಂದಿನ ಯುವಜನರು ವೃತ್ತಿಜೀವನ ಮತ್ತು ಸಾಮಾಜಿಕ ಜಾಲತಾಣಗಳಿಂದ ಎದುರಿಸುತ್ತಿರುವ ಒತ್ತಡದ ಕುರಿತು ಮಾತನಾಡಿದ ಸದ್ಗುರು, ನಮ್ಮ ದೇಹ ಮತ್ತು ಮನಸ್ಸನ್ನು ಸರಿಯಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗದಿರುವುದೇ ಒತ್ತಡಕ್ಕೆ ಮೂಲ ಕಾರಣ. ನಮ್ಮದೇ ಬುದ್ಧಿವಂತಿಕೆ ನಮ್ಮ ವಿರುದ್ಧ ಕೆಲಸ ಮಾಡುವ ಸ್ಥಿತಿಯೇ ಆತಂಕ ಮತ್ತು ಸಂಕಟಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು. ವೈಯಕ್ತಿಕ ಪರಿವರ್ತನೆ ಮತ್ತು ಆಂತರಿಕ ನೆಮ್ಮದಿಯೇ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಅಡಿಪಾಯ ಎಂಬ ಸಂದೇಶವನ್ನು ಸಂವಾದ ಸಾರಿತು.
ದಿವ್ಯಾಜ್ ಪ್ರತಿಷ್ಠಾನ ನೀಡುವ ಜಾಗತಿಕ ಶಾಂತಿ ಗೌರವ ಪ್ರಶಸ್ತಿಯು; ಶಾಂತಿ, ಮಾನವೀಯತೆ ಹಾಗೂ ಸಮಾಜಸೇವೆಯಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತದೆ. ಭಯೋತ್ಪಾದನೆಗೆ ಬಲಿಯಾದವರ ಸ್ಮರಣೆ ಹಾಗೂ ಶಾಂತಿಗಾಗಿ ಹೋರಾಡುವವರ ಧೈರ್ಯಕ್ಕೆ ಗೌರವ ಸಲ್ಲಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ. ಸಮಾರಂಭದಲ್ಲಿ ಕ್ರಿಕೆಟ್ ತಾರೆ ಸಚಿನ್ ತೆಂಡಲ್ಕರ್, ರಿಲಯನ್ಸ್ ಸಮೂಹದ ಅನಂತ್ ಅಂಬಾನಿ, ಬಾಲಿವುಡ್ ನಟ-ನಟಿಯರು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.