ಕನಕನ ಕಿಂಡಿಯಿಂದ ಸಮಸಮಾಜದ ಕನಸಿನವರೆಗೆ

Representative image
ಸಾಂದರ್ಭಿಕ ಚಿತ್ರ
Published on: 

ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಇತಿಹಾಸದಲ್ಲಿ 15ನೇ ಶತಮಾನದ ದಾಸಶ್ರೇಷ್ಠ ಕನಕದಾಸರ ವ್ಯಕ್ತಿತ್ವಕ್ಕೆ ವಿಶಿಷ್ಟ ಸ್ಥಾನವಿದೆ. ಅವರು ಕೇವಲ ಭಕ್ತಿಪಂಥದ ಕವಿಯಾಗಿ ಗುರುತಿಸಿಕೊಂಡವರಲ್ಲ. ತಮ್ಮ ಕಾಲದ ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ ಮತ್ತು ಮನುಷ್ಯರ ನಡುವಿನ ಮೇಲುಕೀಳು ಭಾವನೆಗಳನ್ನು ಪ್ರಶ್ನಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಅವರು ಪ್ರತಿಪಾದಿಸಿದ ವಿಚಾರಗಳು, ನಡೆಸಿದ ಸಾಮಾಜಿಕ ಜಾಗೃತಿ ಮತ್ತು ಸಮಾಜದ ಮೇಲೆ ಬೀರಿದ ಪ್ರಭಾವ ಇಂದಿಗೂ ಪ್ರಸ್ತುತವಾಗಿವೆ.

ಕನಕದಾಸರು ದಾಸ ಸಾಹಿತ್ಯದ ಮೂಲಕ ಭಕ್ತಿ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು. ಮನುಷ್ಯನ ಶ್ರೇಷ್ಠತೆಯನ್ನು ಜಾತಿಯಿಂದ ಅಳೆಯಬಾರದು, ಆತನ ವ್ಯಕ್ತಿತ್ವ, ನಡವಳಿಕೆ ಮತ್ತು ಮಾನವೀಯ ಗುಣಗಳೇ ಮುಖ್ಯ ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದರು. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯವನ್ನು ನೇರವಾಗಿ ಪ್ರಶ್ನಿಸಿದರು.

‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂಬ ಕನಕದಾಸರ ಪ್ರಶ್ನೆ ಇಂದಿಗೂ ಸಮಾಜದ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತದೆ. ಮನುಷ್ಯರೆಲ್ಲರೂ ಒಂದೇ ಮೂಲದಿಂದ ಬಂದವರು. ಹೀಗಿರುವಾಗ ಜಾತಿಯ ಹೆಸರಿನಲ್ಲಿ ಮೇಲು ಕೀಳು ಎಂಬ ಭಾವನೆ ಬೆಳೆಸುವುದು ಸರಿಯಲ್ಲ ಎಂಬುದು ಈ ಸಂದೇಶದ ತಿರುಳು. ಮನುಷ್ಯನನ್ನು ಆತನ ಜಾತಿಯಿಂದ ಗುರುತಿಸುವ ಬದಲು ಆತನ ಗುಣ, ನಡತೆ ಮತ್ತು ಬದುಕಿನ ಮೌಲ್ಯಗಳ ಆಧಾರದಲ್ಲಿ ಗೌರವಿಸಬೇಕು ಎಂಬ ಉದಾತ್ತ ಚಿಂತನೆಯನ್ನು ಕನಕದಾಸರು ಪ್ರತಿಪಾದಿಸಿದ್ದರು.

ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಸಂಬಂಧಿಸಿದ ಕನಕನ ಕಿಂಡಿ ಪ್ರಸಂಗವು ಅವರ ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ರಸಿದ್ಧ ಐತಿಹ್ಯ. ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ಸಾಮಾಜಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಪ್ರಸಂಗ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕನಕದಾಸರಿಗೆ ದೇವರ ದರ್ಶನಕ್ಕೆ ಅವಕಾಶ ನಿರಾಕರಿಸಿದರೂ, ದೇವಾಲಯದ ಹಿಂಭಾಗದ ಗೋಡೆಯ ಮೂಲಕ ಶ್ರೀಕೃಷ್ಣನೇ ದರ್ಶನ ನೀಡಿದ. ಅದನ್ನೇ ಇಂದು ಕನಕನ ಕಿಂಡಿ ಎನ್ನಲಾಗುತ್ತಿದೆ. ಅದು ಭಕ್ತಿ ಮತ್ತು ಸಮಾನತೆಯ ಸಂಕೇತವಾಗಿದೆ. ಇದು ಕೇವಲ ಭಕ್ತಿಯ ಕಥೆಯಾಗಿ ಉಳಿಯದೆ, ದೇವರ ಸನ್ನಿಧಿಯಲ್ಲೂ ಮನುಷ್ಯರ ನಡುವೆ ಗೋಡೆಗಳನ್ನು ನಿರ್ವಿುಸುವ ಸಾಮಾಜಿಕ ಮನಸ್ಥಿತಿಗೆ ಸಂಕೇತಾತ್ಮಕ ಉತ್ತರವಾಗಿದೆ.

ಕನಕದಾಸರು ರಚಿಸಿದ ಸಾಹಿತ್ಯದಲ್ಲಿ ಮಾನವೀಯತೆ, ಸಮಾನತೆ ಮತ್ತು ಆತ್ಮವಿಮರ್ಶೆಯ ಆಶಯಗಳು ಪ್ರಮುಖವಾಗಿವೆ. ಅವರ ಕೀರ್ತನೆಗಳು ಧಾರ್ವಿುಕ ಭಕ್ತಿಗೆ ಮಾತ್ರ ಸೀಮಿತವಾಗಿರದೆ, ಸಮಾಜದ ಲೋಪದೋಷಗಳನ್ನು ತಿದ್ದುವ ಉದ್ದೇಶವನ್ನೂ ಹೊಂದಿದ್ದವು. ಮನುಷ್ಯನ ಅಹಂಕಾರ, ಜಾತಿಯ ಮೇಲಿನ ಅಭಿಮಾನ, ಸಂಪತ್ತಿನ ಗರ್ವ ಮತ್ತು ಅಧಿಕಾರದ ದರ್ಪವನ್ನು ಅವರು ತಮ್ಮ ಸಾಹಿತ್ಯದ ಮೂಲಕ ಪ್ರಶ್ನಿಸಿದರು. ಸರಳ ಭಾಷೆ, ಜನಸಾಮಾನ್ಯರಿಗೆ ಅರ್ಥವಾಗುವ ಅಭಿವ್ಯಕ್ತಿ ಮತ್ತು ಆಳವಾದ ಜೀವನದರ್ಶನ ಅವರ ಸಾಹಿತ್ಯದ ವಿಶೇಷತೆಗಳಾಗಿವೆ. ಕನಕದಾಸರ ಕೀರ್ತನೆಗಳಲ್ಲಿ ಭಕ್ತಿಯ ಜತೆಗೆ ಬದುಕಿನ ವಾಸ್ತವಗಳೂ ಅನಾವರಣಗೊಳ್ಳುತ್ತವೆ. ಮಾನವ ಜೀವನದ ಕ್ಷಣಿಕತೆ, ಆಸೆ-ಆಕಾಂಕ್ಷೆಗಳು, ಅಹಂಕಾರ, ಲೌಕಿಕ ವ್ಯಾಮೋಹ ಮತ್ತು ಮನುಷ್ಯನ ಕರ್ತವ್ಯಗಳ ಕುರಿತು ಅವರು ಚಿಂತನೆ ನಡೆಸಿದ್ದಾರೆ. ದೇವರ ಮೇಲಿನ ಭಕ್ತಿ ಎಂದರೆ ಕೇವಲ ಪೂಜೆ, ಪ್ರಾರ್ಥನೆಗಳಲ್ಲ; ಅದು ಮನುಷ್ಯನ ಬದುಕಿನಲ್ಲಿ ಒಳ್ಳೆಯತನ, ವಿನಯ, ಕರುಣೆ ಮತ್ತು ಪರೋಪಕಾರದ ರೂಪದಲ್ಲಿ ವ್ಯಕ್ತವಾಗಬೇಕು ಎಂಬ ಆಶಯ ಅವರ ಸಾಹಿತ್ಯದಲ್ಲಿ ಕಾಣುತ್ತದೆ.

ಕನಕದಾಸರು ತಮ್ಮ ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ಸಿಗಬೇಕೆಂಬ ಚಿಂತನೆಯನ್ನು ಬಿತ್ತಿದರು. ಜಾತಿ, ವರ್ಗ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದಲ್ಲಿ ವ್ಯಕ್ತಿಯನ್ನು ಅಳೆಯುವ ಮನೋಭಾವವನ್ನು ತಿರಸ್ಕರಿಸಿದರು. ದೇವರ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಸಾರುವ ಮೂಲಕ ಸಾಮಾಜಿಕ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಿದರು.

ಅವರ ಸಾಹಿತ್ಯದ ಮತ್ತೊಂದು ವಿಶೇಷವೆಂದರೆ ಅದು ಇಂದಿಗೂ ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡಿರುವುದು. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಸೇರಿದಂತೆ ಅನೇಕ ಕೀರ್ತನೆಗಳು ಭಕ್ತಿಯ ಆಳವನ್ನು ವ್ಯಕ್ತಪಡಿಸುವುದರ ಜತೆಗೆ ಮಾನವ ಜೀವನದ ಅರ್ಥವನ್ನು ಅನಾವರಣಗೊಳಿಸುತ್ತವೆ. ಅವರ ಕೃತಿಗಳು ಕನ್ನಡ ಸಾಹಿತ್ಯದ ಸಂಪತ್ತನ್ನು ಶ್ರೀಮಂತಗೊಳಿಸಿವೆ. ದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಕನಕದಾಸರ ಕೊಡುಗೆ ಮಹತ್ವದ್ದಾಗಿದೆ.

ಕನಕದಾಸರ ಸಾಮಾಜಿಕ ಚಿಂತನೆ ಇಂದಿನ ಕಾಲಕ್ಕೂ ಅಗತ್ಯವಾಗಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಾನಮಾನಗಳಲ್ಲಿ ಬದಲಾವಣೆಗಳಾಗಿದ್ದರೂ ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಮೇಲು ಕೀಳು ಮನೋಭಾವ ಸಂಪೂರ್ಣವಾಗಿ ದೂರವಾಗಿಲ್ಲ. ಇಂತಹ ಸಂದರ್ಭದಲ್ಲಿ ಕನಕದಾಸರು ಸಾರಿದ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

ಸಮಾಜದ ಪ್ರಗತಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಅಥವಾ ಭೌತಿಕ ಸೌಲಭ್ಯಗಳ ಹೆಚ್ಚಳವಲ್ಲ. ಪ್ರತಿಯೊಬ್ಬರಿಗೂ ಗೌರವ, ಸಮಾನ ಅವಕಾಶ ಮತ್ತು ಘನತೆಯಿಂದ ಬದುಕುವ ವಾತಾವರಣ ನಿರ್ವಣವಾಗುವುದೂ ಅಷ್ಟೇ ಮುಖ್ಯ. ಜಾತಿ, ಧರ್ಮ, ಭಾಷೆ ಮತ್ತು ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮನುಷ್ಯರನ್ನು ವಿಭಜಿಸುವ ಬದಲು ಪರಸ್ಪರ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕನಕದಾಸರ ಚಿಂತನೆಯ ಮೂಲ ಆಶಯವೂ ಇದೇ ಆಗಿದೆ. ಕನಕದಾಸರು ಶತಮಾನಗಳ ಹಿಂದೆ ಭಕ್ತಿಯ ಮೂಲಕ ಸಮಾನತೆಯ ಬೀಜ ಬಿತ್ತಿದರು. ಅವರ ಕೀರ್ತನೆಗಳು ಸಮಾಜದ ಆತ್ಮವಿಮರ್ಶೆಗೆ ಪ್ರೇರಣೆ ನೀಡಿದವು. ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು, ಪ್ರತಿಯೊಬ್ಬರಿಗೂ ಗೌರವ ದೊರೆಯಬೇಕು ಮತ್ತು ಸಮಾಜದಲ್ಲಿ ಯಾರೂ ತಾರತಮ್ಯಕ್ಕೆ ಒಳಗಾಗಬಾರದು ಎಂಬ ಅವರ ಆಶಯ ಇಂದಿಗೂ ಪ್ರಸ್ತುತವಾಗಿದೆ.

ಕಾಲ ಬದಲಾಗಬಹುದು, ಸಮಾಜದ ಸ್ವರೂಪ ಬದಲಾಗಬಹುದು. ಆದರೆ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳು ಎಂದಿಗೂ ಶಾಶ್ವತ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಮತ್ತು ಬದುಕುವ ಅವಕಾಶ ದೊರೆತಾಗ ಮಾತ್ರ ಸಮಸಮಾಜದ ಕನಸು ನನಸಾಗುತ್ತದೆ. ಕನಕದಾಸರು ಸಾರಿದ ಸಾಮಾಜಿಕ ಸಂದೇಶದ ಸಾರವೂ ಇದೇ ಆಗಿದೆ.

(ಲೇಖಕರು ಕರ್ನಾಟಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು)