ದಶ ದಿಕ್ಕುಗಳಲ್ಲಿ ಅರಣ್ಯ ವೃಕ್ಷೋದ್ಯಾನ

Representative image
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ಬೆಂಗಳೂರಿಗೆ ಮತ್ತೆ ’ಉದ್ಯಾನನಗರಿ’ಯ ವೈಭವ ಮರಳಿಸಲು ಕರ್ನಾಟಕ ಅರಣ್ಯ ಇಲಾಖೆಯು ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ರೂಪಿಸಿದ್ದು, ಅನುಷ್ಠಾನಕ್ಕೆ ತರುವ ಪ್ರಯತ್ನ ಆರಂಭವಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮುಖ್ಯಮಂತಿ ಘೊಷಿಸಿದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಒಟ್ಟು 10 ಆಯ್ದ ಅರಣ್ಯ ಪ್ರದೇಶಗಳಲ್ಲಿ ‘ವೃಕ್ಷೋದ್ಯಾನಗಳು, ಆರ್ಬೆರೇಟಂಗಳು ಹಾಗೂ ನೈಸರ್ಗಿಕ ವನಪ್ರದೇಶಗಳ’ ಜಾಲವನ್ನು ಅಭಿವೃದ್ಧಿಪಡಿಸಲು ನೈಬರ್​ಹುಡ್ ಫಾರೆಸ್ಟ್ ಪರಿಕಲ್ಪನೆಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನದ ಪ್ರಕಾರ, 1973ರಲ್ಲಿ ಶೇ.68ರಷ್ಟಿದ್ದ ಬೆಂಗಳೂರಿನ ಹಸಿರು ಹೊದಿಕೆ 2020ರ ವೇಳೆಗೆ ಶೇ.3ಕ್ಕಿಂತ ಇಳಿದಿದೆ. 1.4 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಸ್ತುತ ಲಾಲ್​ಬಾಗ್ ಮತ್ತು ಕಬ್ಬನ್ ಪಾರ್ಕ್ ಬೃಹತ್ ತಾಣಗಳು ಮಾತ್ರ ಇವೆ.

ಇನ್ನು ಕಾಂಕ್ರೀಟ್ ಪ್ರದೇಶಗಳಲ್ಲಿ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಾಪಮಾನವನ್ನು ತಗ್ಗಿಸಲು ಹಾಗೂ ಪರಿಸರ ಸಮತೋಲನ ಕಾಪಾಡಲು ನಗರದೊಳಗೆ ನೈಸರ್ಗಿಕ ಹವಾನಿಯಂತ್ರಕಗಳಂತೆ ಕೆಲಸ ಮಾಡುವ ಕಿರು ಅರಣ್ಯಗಳ ನಿರ್ಮಾಣ ಅನಿವಾರ್ಯವಾಗಿದೆ ಎಂಬುದು ಅರಣ್ಯ ಇಲಾಖೆ ಪ್ರತಿಪಾದನೆಯಾಗಿದೆ. ಈ ಯೋಜನೆಯಡಿ ಒಟ್ಟು 10 ತಾಣಗಳಲ್ಲಿ ಸುಮಾರು 3,271 ಎಕರೆ (1,323.90 ಹೆಕ್ಟೇರ್) ಅರಣ್ಯ ಭೂಮಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಸುಮಾರು 1,303 ಎಕರೆಯನ್ನು ನಿಯಂತ್ರಿತ ಪ್ರವೇಶದೊಂದಿಗೆ ಸಾರ್ವಜನಿಕರ ವಿಹಾರ, ನಡಿಗೆ ಮತ್ತು ಪರಿಸರ ಶಿಕ್ಷಣಕ್ಕೆ ಮುಕ್ತಗೊಳಿಸಲಾಗುವುದು. ಉಳಿದ 1,968 ಎಕರೆ ಪ್ರದೇಶವನ್ನು ಯಾವುದೇ ಮಾನವ ಹಸ್ತಕ್ಷೇಪವಿಲ್ಲದಂತೆ ಸಂಪೂರ್ಣವಾಗಿ ವನ್ಯಜೀವಿಗಳು, ಪಕ್ಷಿಗಳು ಮತ್ತು ಸ್ಥಳೀಯ ಸಸ್ಯಸಂಕುಲಗಳ ನೈಸರ್ಗಿಕ ಪರಿಸರ ವ್ಯವಸ್ಥೆಯಾಗಿ ಸಂರಕ್ಷಿಸಲಾಗುವುದು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯೊಳಗೆ 5 ಹಾಗೂ ಹೊರಗೆ 5 ತಾಣಗಳನ್ನು ಗುರುತಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ತುರಹಳ್ಳಿ ಕಾಯ್ದಿಟ್ಟ ವನಪ್ರದೇಶ, ತುರಹಳ್ಳಿ ಕಿರುಅರಣ್ಯ ವೃಕ್ಷೋದ್ಯಾನ (ತುರಹಳ್ಳಿ ಗುಡ್ಡ), ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಲ್ಕೆರೆ ಅರಣ್ಯ ಪರಿಸರ ಕೇಂದ್ರ, ದೊರೆಸಾನಿಪಾಳ್ಯ ಅರಣ್ಯ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪಣತ್ತೂರು ನಗರವನ ಜೀವವೈವಿಧ್ಯ ಉದ್ಯಾನವನ ಸೇರಿವೆ. ಜಿಬಿಎ ಹೊರವಲಯದಲ್ಲಿ ಮಾರಸಂದ್ರ ಜೀವವೈವಿಧ್ಯ ಉದ್ಯಾನವನ, ಮಂಡೂರು ಬಿದಿರು ವನ (ಬ್ಯಾಂಬೂಸೆಟಮ್, ಜಾರಕಬಂಡೆ ನಗರವನ (ಬಿ ಬ್ಲಾಕ್), ಜಾರಕಬಂಡೆ ವೃಕ್ಷ ಕೃಷಿ ಕೇಂದ್ರ (ಎ ಬ್ಲಾಕ್) ಹಾಗೂ ಮಾದಪ್ಪನಹಳ್ಳಿಯ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನಗಳು ತಲೆ ಎತ್ತಲಿವೆ.

ಯಾವುದಕ್ಕೆಲ್ಲ ಆದ್ಯತೆ?

  1. ಕಟ್ಟಡಗಳಿಗೆ ಅವಕಾಶ ನೀಡದೆ ಕೇವಲ ಮರ, ಬಿದಿರು ಮತ್ತು ಪರಿಸರಸ್ನೇಹಿ ಸಾಮಗ್ರಿಗಳನ್ನು ಬಳಸಿ ಸಂದರ್ಶಕರಿಗೆ ಮೂಲಸೌಕರ್ಯ.

  2. ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ ಸುಸಜ್ಜಿತ ನಡಿಗೆ ಮತ್ತು ಸೈಕಲ್ ಪಥಗಳ ನಿರ್ವಣ.

  3. ಯೋಗ-ಧ್ಯಾನ ವೇದಿಕೆಗಳು, ಮಕ್ಕಳ ಆಟದ ತಾಣಗಳು, ಬಯಲು ರಂಗಮಂದಿರ, ಪ್ರಕೃತಿ ಮಾಹಿತಿ ಕೇಂದ್ರ.

  4. ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಗೃಹಗಳ ನಿರ್ವಣ.

  5. ಅರಣ್ಯ ಭೂಮಿ ಅರಣ್ಯೇತರ ಉದ್ದೇಶಕ್ಕೆ ಬಳಸದೆ ಒತ್ತುವರಿ ತಡೆಯಲು ಮೊದಲು ಗಡಿ ಭದ್ರಪಡಿಸುವಿಕೆ.

  6. ಕೆರೆ ಕುಂಟೆ ಪುನಶ್ಚೇತನ, ಸಾವಿರ ಇಂಗುಗುಂಡಿ

ಹತ್ತು ವೃಕ್ಷೋದ್ಯಾನಗಳ ವ್ಯಾಪ್ತಿಯಲ್ಲಿ ಸುಮಾರು 1,000 ಮಳೆನೀರು ಇಂಗು ಗುಂಡಿಗಳು, ಚೆಕ್ ಡ್ಯಾಮ್ಳು ಮತ್ತು ಜಲಮರುಪೂರಣ ರಚನೆಗಳನ್ನು ನಿರ್ವಿುಸುವುದರ ಜತೆಗೆ ಹಳೆಯ ಕೆರೆ- ಕುಂಟೆಗಳನ್ನು ಪುನಶ್ಚೇತನ ಗೊಳಿಸಲಾಗುವುದು. ಇದರಿಂದ ಮಳೆನೀರು ಚರಂಡಿ ಸೇರಿ ವ್ಯರ್ಥವಾಗುವ ಬದಲು ಭೂಮಿಯೊಳಗೆ ಇಂಗಿ ಅಂತರ್ಜಲದ ಮಟ್ಟ ಮತ್ತಷ್ಟು ವೃದ್ಧಿಯಾಗಲಿದೆ.

ನೀಲಗಿರಿ, ಅಕೇಶಿಯಾಗೆ ಗೇಟ್​ಪಾಸ್

1960-70ರ ದಶಕದಲ್ಲಿ ನಾಟಾ ಮತ್ತು ಉರುವಲಿಗಾಗಿ ನೆಡಲಾಗಿದ್ದ ನೀಲಗಿರಿ ಹಾಗೂ ಅಕೇಶಿಯಾ ನೆಡುತೋಪುಗಳು ಅಂತರ್ಜಲವನ್ನು ಅತಿಯಾಗಿ ಹೀರುತ್ತಿದ್ದು, ಲಂಟಾನದಂತಹ ಆಕ್ರಮಣಕಾರಿ ಕಳೆಗಳು ಸ್ಥಳೀಯ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿವೆ. ಈ ಯೋಜನೆಯಡಿ ಇಂತಹ ವಿದೇಶಿ ಮರಗಳು ಮತ್ತು ಕಳೆಗಳನ್ನು ಹಂತಹಂತವಾಗಿ ತೆರವುಗೊಳಿಸಿ, ಮತ್ತಿ, ದಿಂಡಿಗ, ಶ್ರೀಗಂಧ, ಹೊಂಗೆ, ಬಿದಿರು ಹಾಗೂ ಔಷಧೀಯ ಸಸ್ಯಗಳಂತಹ ಸ್ಥಳೀಯ ಪ್ರಭೇದಗಳನ್ನು ಬೆಳೆಸಲಾಗುವುದು. ಮಂಡೂರಿನಲ್ಲಿ 16 ಬಗೆಯ ಬಿದಿರುಗಳ ಸಂಗ್ರಹಾಲಯ ಹಾಗೂ ಜಾರಕಬಂಡೆಯಲ್ಲಿ ರೈತರಿಗಾಗಿ ವೃಕ್ಷ ಕೃಷಿ ಸಂಶೋಧನಾ ಕೇಂದ್ರವನ್ನು ವಿಶೇಷವಾಗಿ ರೂಪಿಸಲಾಗುತ್ತಿದೆ.

ಪ್ರಸ್ತಾವನೆ ಸಿದ್ಧ

ಒಟ್ಟು 10 ಯೋಜನೆಗಳಿಗೆ ಅಂದಾಜು 222.99 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಮಾದಪ್ಪನಹಳ್ಳಿಯ ವಿಶ್ವಗುರು ಬಸವಣ್ಣ ಬೃಹತ್ ಜೀವವೈವಿಧ್ಯ ಉದ್ಯಾನವನಕ್ಕೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಉಳಿದ 9 ಉದ್ಯಾನಗಳಿಗೆ ಸುಮಾರು 150 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧವಾಗಿದ್ದು, 2026-27ನೇ ಸಾಲಿನಿಂದ ರಾಜ್ಯ ಆಯವ್ಯಯ ಅನುದಾನ ಹಾಗೂ ಸಿಎಸ್​ಆರ್ ನಿಧಿಯಡಿ ಕಾಮಗಾರಿಗಳು ಅನುಷ್ಠಾನಗೊಳ್ಳಲಿವೆ. ಆಯಾ ಉದ್ಯಾನಗಳ ಟಿಕೆಟ್ ಆದಾಯವನ್ನು ಅವುಗಳ ನಿರಂತರ ನಿರ್ವಹಣೆಗಾಗಿಯೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.