

ಬೆಂಗಳೂರು: ಪ್ರಕೃತಿ ರಕ್ಷಣೆಗಾಗಿ ಘೋಣೆಯಾಗುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು. ಅದು ಕೇವಲ ವೆಚ್ಚ ಮತ್ತು ಘೋಷಣೆಗೆ ಸಿಮೀತವಾಗಬಾರದು ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಚಾರಿ ಜೀವವೈವಿಧ್ಯ ವಸ್ತು ಸಂಗ್ರಹಾಲಯ (ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್) ಮತ್ತು ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನಾ ಯೋಜನೆಗಳ ಕುರಿತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೀಗ ಪರಿಚಯವಾಗಿರುವ ಕಾರ್ಯಕ್ರಮಗಳು ಜನರನ್ನು ಎಚ್ಚರಿಸುವಂತಿವೆ. ಪ್ರಯೋಜನ ಜನಕ್ಕೆ ತಲುಪಬೇಕು ಎಂದರು.
ಪರಿಸರ ರಕ್ಷಣೆ ವಿಚಾರದಲ್ಲಿ ಅಧಿಕಾರಿಗಳಿಗೆ ಆತ್ಮಸಾಕ್ಷಿ ಇರಬೇಕು. ಇದರಲ್ಲಿ 16 ಇಲಾಖೆಗಳಿಗೆ ಜವಾಬ್ದಾರಿ ಸೂಚಿಸಲಾಗಿದೆ. ಶಾಲಾ ಮಕ್ಕಳಿಗೆ ಪ್ರತ್ಯೇಕವಾಗಿ ಪರಿಸರ ರಕ್ಷಣೆ ಕುರಿತು ಬೋಧನೆ ಮಾಡಿದಾಗ ಜಾಗೃತಿ ಮೂಡುತ್ತದೆ. ಹುಟ್ಟುಹಬ್ಬದ ದಿನ ಒಂದು ಸಸಿ ನೆಟ್ಟರು ಹಸಿರು ವಾತಾವರಣ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಒಂದು ಕಡೆ ನಾಟಿ ಮಾಡಲಾಗಿರುವ ಸಸಿಗೆ ಪದೇಪದೆ ಬಿಲ್ ಬಿಡುಗಡೆ ಮಾಡಿರುವ ಅಧಿಕಾರಿಗಳು ಇದ್ದಾರೆ. ಈ ಕುರಿತು ದೂರು ಬಂದಾಗ ಪರಿಶೀಲಿಸಿದಾಗ ಸತ್ಯ ಬಯಲಿಗೆ ಬಂದಿದೆ. ಇದೀಗ ಸ್ವಯಂ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಮಾಹಿತಿ ಕೊಡಿ ಅಂತ ಹೇಳಿದ್ದರೂ ಕೊಟ್ಟಿಲ್ಲ. ಇಲಾಖೆಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಮಕೂರಿನಲ್ಲಿ 300 ಎಕರೆ ಅರಣ್ಯ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಗಮನಕ್ಕೆ ಬಂದಾಗ, ತೆರವುಗೊಳಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರೂ ಕ್ರಮವನ್ನೇ ವಹಿಸದೆ ಲೋಕಾಯುಕ್ತರನ್ನೇ ದಿಕ್ಕು ತಪ್ಪಿಸಲು ನೋಡಿದರು. ಆಗ ಖುದ್ದು ಸ್ಥಳಕ್ಕೆ ಹೋಗಿ ಒತ್ತುವರಿ ತೆರವುಗೊಳಿಸಿ ಸಸಿಗಳನ್ನು ನಾಟಿ ಮಾಡಿಸಲಾಯಿತು. ಇಂತಹ ಪ್ರಕರಣಗಳು ಮರು ಕಳುಹಿಸದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ವೀರಪ್ಪ ಸಲಹೆ ನೀಡಿದರು.
ಶಾಲಾ ಹಂತದಿಂದಲೇ ಜಾಗೃತಿಗೊಳಿಸಿ
ಮನುಷ್ಯ ಅರಣ್ಯವನ್ನು ನಾಶ ಪಡಿಸಿದ್ದಷ್ಟು ಅದರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮರಗಳನ್ನು ಬೆಳೆಸಿದ ಯಶಸ್ಸು ಅಧಿಕಾರಿಗಳಿಗೆ ಸಲ್ಲಬೇಕು ಎಂದರೆ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಬೇಕು. ಪರಿಸರ ರಕ್ಷಣೆ ವಿಚಾರದಲ್ಲಿ ಹಲವು ಪ್ರಯತ್ನಗಳು ಆಗುತ್ತಿದ್ದರು ಸಹ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ದೇವಾಲಯ ಸೇರಿ ಇತರೆ ಸರ್ಕಾರಿ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಹಸರೀಕರಣ ಹೆಚ್ಚಿಸಬೇಕು ಎಂದು ನ್ಯಾಯಾಂಗ ಸದಸ್ಯ ಹಾಗೂ ನಿವೃತ್ತ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.
ಸರ್ಕಾರದಿಂದ ಅನುಮತಿ ಸಿಗುವ ನಿರೀಕ್ಷೆ
ಪಶ್ಚಿಮ ಘಟ್ಟಗಳಿಗೆ ಹೋಗಿ ನಿಸರ್ಗವನ್ನು ನೋಡಲು ಪ್ರತಿಯೊಬ್ಬರಿಂದಲು ಸಾಧ್ಯವಾಗುವುದಿಲ್ಲ. ಇದ್ದಕಡೆಯಲ್ಲೇ ಪರಿಸರದ ಅನುಭವ ದೊರಕಿಸಲು ಸಂಚಾರಿ ಜೀವವೈವಿಧ್ಯ ವಸ್ತು ಸಂಗ್ರಹಾಲಯ ಮತ್ತು ಪರಿಸರ ರಕ್ಷಣೆಗಾಗಿ ಪಾಜೆಕ್ಟ್ ಸಹ್ಯಾದ್ರಿ ಸಂವರ್ಧನಾ-2026 ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, 6 ತಿಂಗಳಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ. ಅದಾದ ನಂತರ ಹಂತಹಂತವಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರ್ೀ ಹೇಳಿದರು.