

ಬೆಂಗಳೂರು: ನಗರದ ಹೊರವಲಯದ ತಾವರೆಕೆರೆ ಮತ್ತು ಬಿಡದಿ ಬಳಿ ನಕಲಿ ಮತ್ತು ಅವಧಿ ಮೀರಿದ ಔಷಧ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿ 6 ರಾಜ್ಯಗಳಲ್ಲಿ ವಿಸ್ತರಣೆಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಈ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಾಬುನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಶಾಂತ್‌ನನ್ನು ಬಂಧಿಸಿತ್ತು. ಇದೀಗ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಾಡಿ ವಾರಂಟ್ ಮೇಲೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮತ್ತೊಂದೆಡೆ, ತನಿಖೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಇಂಜೆಕ್ಷನ್‌ಗಳನ್ನೂ ಹಣಕ್ಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕಳಪೆ ಮಟ್ಟದ ಔಷಧಿಗಳನ್ನು ದುಬಾರಿ ಬೆಲೆಯ ವಿದೇಶಿ ಕಂಪನಿಗಳ ಔಷಧಿಗಳಂತೆ ಮರುಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ಔಷಧಿಗಳನ್ನು ಛತ್ತಿಸಗಢ್, ಉತ್ತರಾಖಂಡ್ ರಾಜ್ಯಗಳಿಗೆ ಪೂರೈಕೆ ಮಾಡಲಾಗುತಿತ್ತು. ಆದರೆ, ಈ ಔಷಧ ಜಾಲ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳ ಮೂಲಕ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಪೂರೈಕೆಯಾಗಿರುವ ಶಂಕೆ ಇದೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.
ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ ಎರಡು ಕ್ಯಾನ್ಸರ್ ಇಂಜೆಕ್ಷನ್‌ಗಳನ್ನು ಖರೀದಿಸಿದರೆ ಕಂಪನಿಯು ಒಂದು ಇಂಜೆಕ್ಷನ್ ಉಚಿತವಾಗಿ ನೀಡುತ್ತಿತ್ತು. ಆದರೆ, ಈ ಮಾಹಿತಿಯನ್ನು ರೋಗಿಗಳಿಗೆ ತಿಳಿಸದೆ ಕಿಂಗ್‌ಪಿನ್ ಪ್ರಶಾಂತ್ ಬಾಬು ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್‌ಗಳಿಗೂ ಹಣ ಪಡೆದು ಮಾರಾಟ ಮಾಡುತ್ತಿದ್ದ. ಇಂಜೆಕ್ಷನ್ ಬಳಕೆ ಮಾಡಿದ ಬಳಿಕ ರೋಗಿ ಮೃತಪಟ್ಟರೆ ಉಳಿದ ಇಂಜೆಕ್ಷನ್‌ಗಳನ್ನು ವಾಪಸ್ ಪಡೆದು, ಬೇರೆಯವರಿಗೆ ಮೂಲ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ಆರೋಪವೂ ಕೇಳಿಬಂದಿದೆ.
ಕಾನ್ಸ್‌ರ್ ಕಾಯಿಲೆ ಹೆಚ್ಚಿರುವ ರಾಜ್ಯಗಳ ಮಾಹಿತಿ ಪಡೆದಿದ್ದ ಆರೋಪಿಗಳು ಅಂತ ರಾಜ್ಯಗಳಲ್ಲಿ ಏಜೆಂಟರ್‌ಗಳ ಮೂಲಕ ಔಷಧ ವಿತರಣೆ ಮಾಡಲು ಮುಂದಾಗಿದ್ದರು. ವಿದೇಶಿ ಕಂಪನಿಗಳ ಲೇಬಲ್ ಹೊಂದಿರುವ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಳ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿರುವ ಜಾಡು ಹಿಡಿದು ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ.