ಕಸ ಉತ್ಪತ್ತಿ ಡೇಟಾ ಸಂಗ್ರಹಕ್ಕೆ ಕರೆಂಟ್ ಬಿಲ್

ಕಸ ಸಂಗ್ರಹ ಆಟೋ
ಕಸ ಸಂಗ್ರಹ ಆಟೋ
Published on
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ಸಂಗ್ರಹ ಮತ್ತು ಬ್ಲ್ಯಾಕ್ ಸ್ಪಾಟ್‌ಗಳನ್ನು ತಪ್ಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೂತನ ಯೋಜನೆ ರೂಪಿಸಿದೆ.
ಪ್ರತಿ ಆಸ್ತಿಯ ಇ-ಖಾತಾ ಜತೆಗೆ ವಿದ್ಯುತ್ ಮೀಟರ್‌ನ ಆರ್‌ಆರ್ ನಂಬರ್ ಸಂಯೋಜನೆ ಮಾಡಿ ಕಸ ಉತ್ಪತ್ತಿ ಮತ್ತು ಸಂಗ್ರಹವನ್ನು ಸುವ್ಯವಸ್ಥಿತಗೊಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಜಿಬಿಎ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ, ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣಗಳಿಂದ 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿ ಆಗಲಿದ್ದು ಆಟೋಗಳು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತವೆ.
ಒಂದೇ ಸೈಟ್‌ನಲ್ಲಿ 20 ಮನೆಗಳಿಗೂ ಹೆಚ್ಚಿರುವ ವಠಾರ, ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣದಲ್ಲಿ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ಕಸವನ್ನು ನೋಂದಾಯಿತ ಕಂಪನಿಗಳು ಸಂಗ್ರಹಿಸಬೇಕು.
ಸ್ಥಿರಾಸ್ತಿಯ ಇ-ಖಾತಾದಲ್ಲಿ ವಸತಿ ಎಂದು ಉಲ್ಲೇಖ ಇದ್ದರೂ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ಕೋಳಿ ಅಂಗಡಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಹೆಚ್ಚು ಕಸ ಉತ್ಪಾದಿಸುವ ವಾಣಿಜ್ಯ ವ್ಯವಹಾರ ಸಂಸ್ಥೆಗಳು ಜಿಬಿಎ ಗಮನಕ್ಕೆ ಬಂದಿರುವುದಿಲ್ಲ.
ಬಹುತೇಕ ಕಡೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋಗಳೇ ಬಲ್ಕ್ ಮತ್ತು ವಾಣಿಜ್ಯ ಸಂಕೀರ್ಣದ ಕಸ ಸಂಗ್ರಹಿಸುತ್ತಿರುವುದು ಜಿಬಿಎ ಅಧಿಕಾರಿಗಳಿಗೆ ದೊಡ್ಡ ತಲೆನೋವು ಆಗಿದೆ. ಮನೆಗಳಿಂದ ಕಸ ಸಂಗ್ರಹಿಸಬೇಕಾದ ಆಟೋಗಳು, ಬಲ್ಕ್ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಸಂಗ್ರಹಿಸಿದರೇ ಮನೆ ಮನೆಗೆ ತೆರಳಲು ನಿರ್ಲಕ್ಷ್ಯ ವಹಿಸುತ್ತಿವೆ. ಮನೆ ಬಳಿಗೆ ಆಟೋ ಬರುವ ಹೊತ್ತಿಗೆ ಕಸ ತುಂಬಿರುವ ಕಾರಣ ಅರ್ಧಕ್ಕೆ ವಾಪಸ್ ಹೋಗುತ್ತಾರೆ.
ಇದರಿಂದ ರಸ್ತೆ ಬದಿ, ರಸ್ತೆ ಕೊನೆ, ಖಾಲಿ ಜಾಗದಲ್ಲಿ ಕಸ ಎಸೆಯುವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಬ್ಲ್ಯಾಕ್ ಸ್ಪಾಟ್‌ಗಳು ಸೃಷ್ಟಿಯಾಗುತ್ತಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಸಾಕಷ್ಟು ದೂರು ಬಂದಿರುವ ಹಿನ್ನೆಲೆಯಲ್ಲಿ
‘ಕಸ ಉತ್ಪತ್ತಿ- ಸಂಗ್ರಹ-ವಿಲೇವಾರಿ’ ಮೇಲೆ ನಿಗಾವಹಿಸಲು ಇ-ಖಾತಾ ಜತೆಗೆ ವಿದ್ಯುತ್ ಮೀಟರ್‌ನ ಆರ್‌ಆರ್ ನಂಬರ್ ಲಿಂಕ್‌ಗೆ ಯೋಜನೆ ರೂಪಿಸಲಾಗಿದೆ.
"

ಇ-ಖಾತಾಗಳಿಗೆ ವಿದ್ಯುತ್ ಮೀಟರ್‌ನ ಆರ್‌ಆರ್ ನಂಬರ್ ಲಿಂಕ್ ಮೂಲಕ ಕಸ ಉತ್ಪಾದಿಸುವ ಕಟ್ಟಡಗಳ ಡೇಟಾ ಸಂಗ್ರಹಿಸಲಾಗುತ್ತದೆ. ಮನೆ,ಮನೆ ಕಸ ಹಾಗೂ ವಾಣಿಜ್ಯ ಕಟ್ಟಡಗಳ ಕಸ ಸಂಗ್ರಹಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧಾರಿಸಲಾಗಿದೆ.

— ಕೃಷ್ಣಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ
ಡಿಜಿಟಲ್ ಖಾತಾದಲ್ಲೇ ಕಸದ ಜಾತಕ
ಪ್ರತಿ ಆಸ್ತಿಯ ಡಿಜಿಟಲ್ ಖಾತಾಗೆ ವಿದ್ಯುತ್ ಬಿಲ್‌ನ ಆರ್‌ಆರ್ ನಂಬರ್ ಲಿಂಕ್‌ನಿಂದ ಒಂದು ಸೈಟ್‌ನಲ್ಲಿ ಎಷ್ಟು ಮನೆ ಇವೆ- ಎಷ್ಟು ಯೂನಿಟ್ ವಿದ್ಯುತ್ ಬಳಕೆ ಆಗುತ್ತಿದೆ? ಎಂಬ ಡೇಟಾ ಜಿಬಿಎಗೆ ಸಿಗಲಿದೆ. ಇದನ್ನಾಧರಿಸಿ ಮನೆಗಳ ಅಥವಾ ಅಂಗಡಿಗಳ, ವಠಾರ ಎಂಬುದನ್ನು ಕುಳಿತಲ್ಲೇ ಲೆಕ್ಕ ಮಾಡಬಹುದು.
ಪ್ರತಿ ರಸ್ತೆಯಲ್ಲಿ ಎಷ್ಟು ವಸತಿ-ವಾಣಿಜ್ಯ ಕಟ್ಟಡಗಳು ಇವೆ ಎಂದು ತಿಳಿದು ಕಸ ಸಂಗ್ರಹಿಸುವ ಗುತ್ತಿಗೆ ಕಂಪನಿಗಳನ್ನು ಹತೋಟಿಗೆ ತೆಗೆದುಕೊಳ್ಳಬಹುದು ಎಂಬುದು ಸಚಿವ ಕೃಷ್ಣಬೈರೇಗೌಡರ ಲೆಕ್ಕಾಚಾರ.

ಸೆಸ್ ಸೋರಿಕೆ ಮೇಲೂ ನಿಗಾ

ಕಸ ಸಂಗ್ರಹ, ವಿಲೇವಾರಿ ಸಂಬಂಧ ಮನೆಗಳಿಗೆ ಹಾಗೂ ವಾಣಿಜ್ಯ ಸಂಕೀರ್ಣ, ಬಲ್ಕ್ ಕಸ ಉತ್ಪತ್ತಿ ಮಾಡುವರಿಗೆ ಪ್ರತ್ಯೇಕ ಸೆಸ್ ನಿಗದಿ ಮಾಡಲಾಗಿದೆ. ಹೆಚ್ಚು ಕಸ ಉತ್ಪಾದಿಸುವವರು ಮನೆ ಮನೆಯಿಂದ ಕಸ ಸಂಗ್ರಹಿಸುವರಿಗೆ ಹಣ ಕೊಟ್ಟು ಆಟೋಗೆ ಕಸ ತುಂಬಿಸಿ ತೆರಿಗೆಯಿಂದ ಹೊರಗೆ ಉಳಿಯುತ್ತಿದ್ದಾರೆ. ಇದರಿಂದ ಜಿಬಿಎಗೂ ನಷ್ಟವಾಗುತ್ತಿದೆ. ಮತ್ತೊಂದೆಡೆ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯಲ್ಲೂ ಲೋಪವಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net