ಸಂಪಾದಕೀಯ: ಸರ್ವರಿಗೂ ಸೂರು ಶ್ಲಾಘನೀಯ

ಅನ್ನ, ಅಕ್ಷರ ಮತ್ತು ವಸತಿ ಇವು ಯಾವುದೇ ಒಂದು ಕಲ್ಯಾಣ ರಾಜ್ಯದ ಮೂಲಭೂತ ಜವಾಬ್ದಾರಿಗಳು. ಈ ನಿಟ್ಟಿನಲ್ಲಿ, ರಾಜ್ಯದ ವಸತಿರಹಿತ ಬಡ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯ ಅತ್ಯಂತ ಮಹತ್ವದ್ದು ಹಾಗೂ ಸ್ವಾಗತಾರ್ಹವಾಗಿದೆ. ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ಮತ್ತು ಆಶ್ರಯ ಯೋಜನೆಯಡಿ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವುದು ಹಾಗೂ ಎರಡನೇ ಹಂತದಲ್ಲಿ ಮತ್ತೆ 5 ಲಕ್ಷ ನಿವೇಶನಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿರುವುದು ಬಡವರ ಪಾಲಿಗೆ ಆಶಾಕಿರಣವಾಗಿದೆ.
ಸಂಪಾದಕೀಯ: ಸರ್ವರಿಗೂ ಸೂರು ಶ್ಲಾಘನೀಯ
WEB
Published on: 

ಸೂರು ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಒಂದು ಕುಟುಂಬದ ಆತ್ಮಗೌರವ, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಸಂಕೇತ. ಇಂದಿಗೂ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬಗಳು ಸ್ವಂತ ನಿವೇಶನ/ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ಅಥವಾ ಗುಡಿಸಲುಗಳಲ್ಲಿ ಬದುಕು ಸಾಗಿಸುತ್ತಿವೆ. ಸರ್ಕಾರಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ಅನುದಾನ ಲಭ್ಯವಿದ್ದರೂ, ‘ಸ್ವಂತ ನಿವೇಶನ’ ಇಲ್ಲದ ಕಾರಣಕ್ಕೆ ಎಷ್ಟೋ ಅರ್ಹ ಬಡವರು ವಸತಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ಈಗ ಸರ್ಕಾರವೇ ಎರಡು ಹಂತಗಳಲ್ಲಿ ಹತ್ತು ಲಕ್ಷ ನಿವೇಶನಗಳನ್ನು ಒದಗಿಸಲು ಮುಂದಾಗಿರುವುದು ಈ ಮೂಲಭೂತ ಅಡಚಣೆಯನ್ನು ನಿವಾರಿಸುವ ದಿಟ್ಟ ಹೆಜ್ಜೆಯಾಗಿದೆ.

ಯಾವುದೇ ಒಂದು ಬೃಹತ್ ಯೋಜನೆಯ ನಿಜವಾದ ಯಶಸ್ಸು ಅಡಗಿರುವುದು ಅದರ ಅನುಷ್ಠಾನದ ಮೇಲೆ. 10 ಲಕ್ಷ ನಿವೇಶನಗಳನ್ನು ಗುರುತಿಸಿ ಹಂಚುವುದು ಸುಲಭದ ಮಾತಲ್ಲ. ಈ ಹಾದಿಯಲ್ಲಿ ಸರ್ಕಾರಕ್ಕೆ ಹಲವು ಸವಾಲುಗಳಿವೆ. ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಗೋಮಾಳ, ಕಂದಾಯ ಭೂಮಿ ಲಭ್ಯವಿದ್ದರೂ, ಅವುಗಳಲ್ಲಿ ಹೆಚ್ಚಿನವು ಒತ್ತುವರಿಯಾಗಿವೆ ಅಥವಾ ಕಾನೂನು ತೊಡಕುಗಳಲ್ಲಿ ಸಿಲುಕಿವೆ. ನಗರ ಪ್ರದೇಶಗಳಲ್ಲಂತೂ ಸರ್ಕಾರಿ ಭೂಮಿಯ ತೀವ್ರ ಕೊರತೆಯಿದೆ. ಖಾಸಗಿ ಭೂಮಿಯನ್ನು ಖರೀದಿಸಿ ನಿವೇಶನ ಹಂಚುವುದು ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗಬಹುದು.

ಈ ಹಿಂದೆ ಹಲವು ಬಾರಿ ಊರಿನಿಂದ ಬಹಳ ದೂರದಲ್ಲಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಒಳಚರಂಡಿ ವ್ಯವಸ್ಥೆಯಿಲ್ಲದ ಜಾಗಗಳಲ್ಲಿ ನಿವೇಶನಗಳನ್ನು ಹಂಚಿದ ಉದಾಹರಣೆಗಳಿವೆ. ಸೌಲಭ್ಯಗಳಿಲ್ಲದ ಕಾರಣ ಫಲಾನುಭವಿಗಳು ಅಲ್ಲಿ ಮನೆ ಕಟ್ಟಿಕೊಳ್ಳದೆ ನಿವೇಶನಗಳು ಪಾಳುಬಿದ್ದಿವೆ. ಈ ಬಾರಿ ಸರ್ಕಾರ ನಿವೇಶನ ಹಂಚಿಕೆಯ ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಕಡ್ಡಾಯವಾಗಿ ಒದಗಿಸಬೇಕು.

ವಸತಿ ಯೋಜನೆಗಳಲ್ಲಿ ಅತ್ಯಂತ ದೊಡ್ಡ ಪಿಡುಗೆಂದರೆ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪ. ಅರ್ಹ ಕಡುಬಡವರನ್ನು ಬಿಟ್ಟು, ಉಳ್ಳವರಿಗೆ ಅಥವಾ ರಾಜಕೀಯ ಬೆಂಬಲಿಗರಿಗೆ ನಿವೇಶನಗಳು ಹಂಚಿಕೆಯಾಗದಂತೆ ತಡೆಯಬೇಕು. ಆಧಾರ್ ಜೋಡಣೆ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಅರ್ಹ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಬೇಕು. ಅಲ್ಲದೆ, ನಿವೇಶನ ಹಂಚಿಕೆಯ ಬೆನ್ನಲ್ಲೇ, ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ವಣಕ್ಕೆ ನೀಡುವ ಸಹಾಯಧನವನ್ನು ಸಕಾಲಕ್ಕೆ ಬಿಡುಗಡೆ ಮಾಡುವ ಆರ್ಥಿಕ ಬದ್ಧತೆಯನ್ನೂ ಸರ್ಕಾರ ತೋರಬೇಕಿದೆ. ಬಡವರ ಬದುಕಿಗೆ ನೆರಳಾಗುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಲಿ ಎಂಬುದೇ ಎಲ್ಲರ ಆಶಯ.