ಸಂಪಾದಕೀಯ: ಉತ್ತಮ ನಿರ್ಧಾರ

ಮಧ್ಯವರ್ತಿಗಳಿಲ್ಲದೆ ಪೌರಕಾರ್ವಿುಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗುವುದು ಎಂಬ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೌರಕಾರ್ವಿುಕರ ದಿನದಂದು ಪ್ರಕಟಿಸಿದ್ದಾರೆ.
Representative image
ಸಾಂದರ್ಭಿಕ ಚಿತ್ರ
Published on: 

ಮಧ್ಯವರ್ತಿಗಳಿಲ್ಲದೆ ಪೌರಕಾರ್ವಿುಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗುವುದು ಎಂಬ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೌರಕಾರ್ವಿುಕರ ದಿನದಂದು ಪ್ರಕಟಿಸಿದ್ದಾರೆ. ಪೌರ ಕಾರ್ವಿುಕರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಇರಿಸಿರುವ ಮಹತ್ವದ ಹೆಜ್ಜೆ ಇದು. ಪೌರ ಕಾರ್ವಿುಕರ ಭತ್ಯೆಯನ್ನೂ ಹೆಚ್ಚಿಸಲಾಗಿದೆ. ಕಾರ್ವಿುಕರ ಮಕ್ಕಳಿಗೆ ವಿಶೇಷ ವಸತಿ ಶಾಲೆ, ಪೌರಭವನ ನಿರ್ವಣದ ಭರವಸೆಯನ್ನೂ ನೀಡಿದ್ದಾರೆ. ನಗರ-ಪಟ್ಟಣಗಳ ನೈರ್ಮಲ್ಯ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೌರಕಾರ್ವಿುಕರ ಬದುಕಿಗೆ ಭದ್ರತೆ ಮತ್ತು ಗೌರವ ಕಲ್ಪಿಸುವುದು ಯಾವುದೇ ಜನಪರ ಸರ್ಕಾರದ ಪ್ರಮುಖ ಕರ್ತವ್ಯ. ಪೌರಕಾರ್ವಿುಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕಟಿಸಿರುವ ನಿರ್ಧಾರಗಳು ಈ ನಿಟ್ಟಿನಲ್ಲಿ ಆಶಾದಾಯಕವಾಗಿವೆ.

ಸಮಾರಂಭದಲ್ಲಿ ಪೌರಕಾರ್ವಿುಕರ ಸಮವಸ್ತ್ರ ಧರಿಸಿದ್ದ ಮುಖ್ಯಮಂತ್ರಿಗಳು, ‘ಕಾರ್ವಿುಕರು ಇಲ್ಲದಿದ್ದರೆ ಸ್ವಚ್ಛತೆ ಇರುವುದಿಲ್ಲ. ಏಕೆಂದರೆ, ಪೌರಕಾರ್ವಿುಕರು ಸ್ವಚ್ಛತೆಯ ರಾಯಭಾರಿಗಳು. ನಿಮ್ಮ ಕೆಲಸದ ಬಗ್ಗೆ ಕೀಳರಿಮೆ ಬಿಡಿ. ನಿಮ್ಮ ಕೈಗಳು ಕರುನಾಡನ್ನು ಕಾಪಾಡುವ ಕೈಗಳು’ ಎಂದು ಹೇಳುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನ ಮಾಡಿದ್ದಾರೆ.

ಪೌರಕಾರ್ವಿುಕರಿಗೆ ಸರ್ಕಾರಿ ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ತಲುಪುವಂತೆ ಮಾಡಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲು ಮುಂದಾಗಿರುವುದು ಶ್ಲಾಘನೀಯ. ಅನೇಕ ಸಂದರ್ಭಗಳಲ್ಲಿ ಯೋಜನೆಗಳು ಕಾಗದದ ಮೇಲಷ್ಟೇ ಉಳಿದು, ನೈಜ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ತಲುಪದಿರಲು ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳ ಹಾವಳಿಯೇ ಮುಖ್ಯ ಕಾರಣವಾಗಿತ್ತು. ಇದನ್ನು ಬುಡಸಮೇತ ಕಿತ್ತೊಗೆಯಲು ಉಪಸಮಿತಿಯ ಮೂಲಕ ಸ್ಪಷ್ಟ ನೀತಿ ರೂಪಿಸುವುದು ಅತ್ಯಂತ ಅಗತ್ಯ. ಅಲ್ಲದೆ, ಎಲ್ಲ ಭತ್ಯೆ ಮತ್ತು ವೇತನವು ನೇರವಾಗಿ ಕಾರ್ವಿುಕರ ಬ್ಯಾಂಕ್ ಖಾತೆಗೇ ಜಮೆಯಾಗುವ ಪಾರದರ್ಶಕ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ಕಸ ವಿಲೇವಾರಿ ವೇಳೆ ಎದುರಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಆಧುನಿಕ ಸುರಕ್ಷತಾ ಸಲಕರಣೆಗಳು, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಸಮಗ್ರ ವಿಮಾ ಸೌಲಭ್ಯಗಳು ನಿರಂತರವಾಗಿ ಸಿಗಬೇಕು. ಬರಿಗೈಯಲ್ಲಿ ತ್ಯಾಜ್ಯ ಎತ್ತುವ ಪದ್ಧತಿಯನ್ನು ಸಂಪೂರ್ಣ ನಿಮೂಲನೆ ಮಾಡಿ, ಕಸ ಸಂಗ್ರಹಣೆ ಹಾಗೂ ಒಳಚರಂಡಿ ಸ್ವಚ್ಛತೆಗೆ ಆಧುನಿಕ ಯಂತ್ರೋಪಕರಣಗಳ ಬಳಕೆಯನ್ನು ಕಡ್ಡಾಯಗೊಳಿಸುವುದು ಅಗತ್ಯ. ಗುಣಮಟ್ಟದ ಕೈಗವಸು, ಬೂಟುಗಳು, ಮಾಸ್ಕ್, ರೇನ್​ಕೋಟ್ ಹಾಗೂ ರಿಫ್ಲೆಕ್ಟಿವ್ ಜಾಕೆಟ್​ಗಳನ್ನು ನಿಯಮಿತವಾಗಿ ಪೂರೈಸಬೇಕು.

ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿರುವ ಸಾವಿರಾರು ನೈರ್ಮಲ್ಯ ಸೇನಾನಿಗಳನ್ನು ಹಂತ-ಹಂತವಾಗಿ ಕಾಯಂ ನೌಕರರನ್ನಾಗಿ ಪರಿಗಣಿಸುವ ಬಹುದಿನಗಳ ಬೇಡಿಕೆಗೆ ಶಾಶ್ವತ ಮುಕ್ತಿ ಕಾಣಿಸಬೇಕು. ಕೆಲಸದ ಸ್ಥಳಗಳ ಬಳಿ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಶೌಚಗೃಹ ಸೌಲಭ್ಯಗಳನ್ನು ಹಂತ-ಹಂತವಾಗಿ ಕಲ್ಪಿಸಬೇಕು. ನೈರ್ಮಲ್ಯ ಕೆಲಸದ ಮಹತ್ವ ಮತ್ತು ಪೌರ ಕಾರ್ವಿುಕರ ಶ್ರಮವನ್ನು ಗೌರವಿಸುವ ಪಾಠಗಳನ್ನು ಶಾಲಾ ಹಂತದಲ್ಲೇ ಪಠ್ಯಕ್ರಮದಲ್ಲಿ ಅಳವಡಿಸಬೇಕು.

ನೈರ್ಮಲ್ಯ ಕಾಪಾಡುವ ಸೇನಾನಿಗಳಾದ ಪೌರ ಕಾರ್ವಿುಕರಿಗೆ ಸೌಲಭ್ಯಗಳು ಸರಿಯಾಗಿ ತಲುಪುವಂತಾಗಲಿ, ಅವರು ಎದುರಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಲಿ. ಸರ್ಕಾರದ ಈ ಉತ್ತಮ ನಿರ್ಧಾರವು ಕೇವಲ ಭರವಸೆಯಾಗಿ ಉಳಿಯದೆ, ಶೀಘ್ರವಾಗಿ ಅನುಷ್ಠಾನಕ್ಕೆ ಬಂದು ಪೌರಕಾರ್ವಿುಕರ ಬದುಕಿನಲ್ಲಿ ನಿಜವಾದ ಬೆಳಕು ತರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net