₹25.23 ಕೋಟಿ ಮೌಲ್ಯದ ಡ್ರಗ್ಸ್ ಖಾಕಿ ವಶ

25.23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
25.23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಮೂವರು ವಿದೇಶಿ ಪೆಡ್ಲರ್ ಸೇರಿ 17 ಜನರ ಬಂಧನ
  • ನಗರದ ವಿವಿಧ 9 ಠಾಣೆ ಪೊಲೀಸರಿಂದ ಕಾರ್ಯಾಚರಣೆ
ಬೆಂಗಳೂರು: ನಿಷೇಧಿತ ಮಾದಕ ವಸ್ತು ಮತ್ತು ಇ-ಸಿಗರೇಟ್ ಮಾರಾಟ ಸಂಬಂಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ನಗರದ ವಿವಿಧ ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ ಸೇರಿ 17 ಜನರನ್ನು ಬಂಧಿಸಿ, ಒಟ್ಟು 25.23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಬಂಧಿತರಿಂದ 10.30 ಕೆ.ಜಿ ಎಂಡಿಎಂಎ, 127.30 ಕೆ.ಜಿ ಗಾಂಜಾ, 3.31 ಕೆ.ಜಿ ಹೈಡ್ರೋಗಾಂಜಾ, 300 ಇ-ಸಿಗರೇಟ್‌ಗಳು, 90 ಹುಕ್ಕಾ ್ಲೇವರ್‌ಗಳು, 30 ಹುಕ್ಕಾ ಪಾಟ್, ಸ್ಟಾೃಂಡ್, ಹುಕ್ಕಾ ಪಿಂಗಾಣಿಗಳು ಮತ್ತು ವಿದೇಶಿ ಸಿಗರೇಟ್ ಪ್ಯಾಕ್‌ಗಳು, ವಿವಿಧ ಕಂಪನಿಯ ತಂಬಾಕು ಉತ್ಪನ್ನ ಹಾಗೂ ಕಾರು, ಬೈಕ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.

₹23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಪ್ರತ್ಯೇಕ ಪ್ರಕರಣದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು, ಆಫ್ರೀಕಾ ಮೂಲದ ಅಂಬೊಮೊ ಜಾನ್ (37), ನೈಜೀರಿಯಾದ ಚೈಮ್ ಮೋಸೆಸ್ (36) ಮತ್ತು ಕಾರಿಕ್ರಿ ಎಮೋಸ್ (33) ಎಂಬಾತರನ್ನು ಬಂಧಿಸಿ, 23 ಕೋಟಿ ಮೌಲ್ಯದ 10.27ಕೆ.ಜಿ ಎಂಡಿಎಂಎ ಸೇರಿ ವಿವಿಧ ಬಗೆಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಮೆಡಿಕಲ್ ವೀಸಾ ಹಾಗೂ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿಗಳು, ವೀಸಾ ಅವಧಿ ಮುಗಿದಿದ್ದರೂ ಸಹ ನಗರದಲ್ಲಿ ಅನಧಿಕೃತವಾಗಿ ವಾಸವಾಗಿದ್ದುಕೊಂಡು ದೆಹಲಿಯಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಯಸ್ಥರ ಮುಖೇನ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಇವರು ಈ ಹಿಂದೆಯು ಡ್ರಗ್ಸ್ ಪ್ರಕರಣಗಳಲ್ಲಿ ಸಿಲುಕಿದ್ದರು.

₹73.98 ಲಕ್ಷದ ಡ್ರಗ್ಸ್ ವಶ

ಮತ್ತೊಂದು ಪ್ರಕರಣ: ಆಂದ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಟ್ರೈನ್ ಮೂಲಕ ಬೆಂಗಳೂರಿಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಪೆಡ್ಲರ್‌ನನ್ನು ಸುಬ್ರಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂದ್ರಪ್ರದೇಶ ಮೂಲದ ಕೆ. ಪ್ರಸಾದ್ (25) ಬಂಧಿತ. ಈತನಿಂದ ಒಟ್ಟು 73.98 ಲಕ್ಷ ರೂ. ಮೌಲ್ಯದ 45.85 ಕೆ.ಜಿ ಗಾಂಜಾ, 237 ಗ್ರಾಂ ಹೈಡ್ರೋ ಗಾಂಜಾ, 36 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.
ಆರೋಪಿ ತನ್ನ ಸಹಚರ ಕದಿರನ್ ಎಂಬಾತನ ಸಹಾಯದಿಂದ ಬಾಡಿಗೆ ಮನೆ ಪಡೆದಿದ್ದ. ಹೊರರಾಜ್ಯದಿಂದ ಡ್ರಗ್ಸ್ ತಂದು ಬಾಡಿಗೆ ಮನೆಯಲ್ಲಿ ಚಿಕ್ಕ-ಚಿಕ್ಕ ಪ್ಯಾಕೇಟ್ ತಯಾರಿಸಿ, ಮಿಲ್ಕ್ ಕಾಲನಿಯ ಅಪಾರ್ಟ್‌ಮೆಂಟ್ ಸಮೀಪ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಇನ್ನುಳಿದಂತೆ ಆರ್‌ಎಂಸಿ ಯಾರ್ಡ್, ಮಡಿವಾಳ, ರಾಜಾಜಿನಗರ, ತಿಲಕನಗರ, ವೈಟ್‌ಫೀಲ್ಡ್, ಯಶವಂತಪುರ ಹಾಗೂ ಇಂದಿರಾನಗರ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net