

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಬ್ಯಾಂಕಾಕ್ ಮತ್ತು ದೆಹಲಿಯಿಂದ ಬರೋಬ್ಬರಿ 34 ಕೋಟಿ ರೂ.ಮೌಲ್ಯದ ನಿಷೇಧಿಕ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ 8 ಜನ ಡ್ರಗ್ಸ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಐಷಾರಾಮಿ ಜೀವ ನಡೆಸಲು ದೆಹಲಿಯಿಂದ ಬೆಂಗಳೂರು ನಗರಕ್ಕೆ 11.74 ಕೋಟಿ ರೂ.ಮೌಲ್ಯದ 5.87 ಕೆ.ಜಿ ಎಂಡಿಎಂಎ ಸಾಗಣೆ ಮಾಡುತ್ತಿದ ಇಬ್ಬರನ್ನು ಯಲಹಂಕ ಉಪನಗರ ಹಾಗೂ ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್ನಿಂದ ವಿವಿಧ ವಿಮಾನದ ಮೂಲಕ ಆಗಮಿಸಿದ್ದ 6 ಜನ ಪೆಡ್ಲರ್ಗಳನ್ನು ಬಂಧಿಸಿ ಅವರಿಂದ 22.3 ಕೋಟಿ ರೂ.ಮೌಲ್ಯದ 72.5 ಕೆ.ಜಿ ಹೈಡ್ರೋಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ವ್ಯಾನಿಟಿ ಬ್ಯಾಗ್ನಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಕುರಿತು ಬುಧವಾರ ನಗರ ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಮಾಹಿತಿ ನೀಡಿ, ಗಂಗೊಂಡನಹಳ್ಳಿ ನಿವಾಸಿ ಇಮ್ರಾನ್ ಪಾಷಾ (28), ಹೊಕೋಟೆ ತಾಲ್ಲೂಕಿನ ಕಣ್ಣೂರು ಹಳ್ಳಿ ನಿವಾಸಿ ಆಯಿಷಾ ಸಿದ್ದಿಕಿ (27) ಬಂಧಿತರು. ಇಬ್ಬರಿಂದ 5.74 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.
ಕೆಂಚೇನಹಳ್ಳಿಯಿಂದ ಹಾರೋಹಳ್ಳಿ ಕಡೆ ತೆರಳುವ ರಸ್ತೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದುದರ ಬಗ್ಗೆ ಮಾಹಿತಿ ಕಲೆಹಾಕಿದ್ದ ಪೊಲೀಸರು ನ.22ರಂದು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಆರೋಪಿಗಳ ಬಂಧಿಸಿ ಪರಿಶೀಲನೆ ನಡೆಸಿದಾಗ ವ್ಯಾನಿಟಿ ಬ್ಯಾಗ್ನಲ್ಲಿ ಕೋಟ್ಯಂತರ ರೂ.ಮಾದಕ ವಸ್ತು ಪತ್ತೆಯಾಗಿದೆ.
ಇಬ್ಬರು ಆರೋಪಿಗಳು ಸ್ನೇಹಿತರಾಗಿದ್ದು, ಮೋಜು ಮಸ್ತಿ ಜೀವನ ನಡೆಸುವ ಉದ್ದೇಶದಿಂದ ಆರೋಪಿಗಳು ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಯಾರಿಗೆ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದರು? ಈ ದಂಧೆಯ ಹಿಂದೆ ಮತ್ತಷ್ಟು ವ್ಯಕ್ತಿಗಳ ಕೈವಾಡವಿದೆಯೇ? ಎಂಬುದರ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ ನಗರದಲ್ಲಿನ ಐಟಿ-ಬಿಟಿ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದರು.
ನ.21 ರಿಂದ 24ರವರೆಗೆ ಬ್ಯಾಂಕಾಕ್ನಿಂದ ನಗಕ್ಕೆ ಪ್ರಯಾಣಿಕರ ಸೋಗಿನಲ್ಲಿ ಆಗಮಿಸಿದ್ದ ಮೂವರುನ್ನು ತಡೆದು ತಪಾಸಣೆ ನಡೆಸಲಾಗಿದೆ. ಈ ವೇಳೆ 14.29 ಕೋಟಿ ರೂ.ಮೌಲ್ಯದ 40.83 ಕೆ.ಜಿ ಹೈಡ್ರೋಗಾಂಜಾ ಪತ್ತೆಯಾಗಿದೆ. ನ.24 ಹಾಗೂ 24ರಂದು ನಡೆಸಿದ ತಪಾಸಣೆ ವೇಳೆ 4.11 ಕೋಟಿ ರೂ.ಮೌಲ್ಯದ 16.14 ಕೆಜಿ ಡ್ರಗ್ಸ್ ಪತ್ತೆಯಾಗಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.