

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ. ಪರೀಕ್ಷೆಗೂ ಮುನ್ನ ಮತ್ತು ಪರೀಕ್ಷೆ ನಂತರ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೂ ಕರೆ ಮಾಡಿ 1 ಕೋಟಿ ರೂಪಾಯಿಗೆ ಡೀಲ್ ಮಾಡಿಸುತ್ತಿದ್ದ ಶಿವಶಂಕರಪ್ಪ ಸಾಹುಕಾರ್ ಮತ್ತು ಅಮಾನತುಗೊಂಡ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕೊನೆಗೆ 40 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳುತ್ತಿದ್ದ ಸಂಗತಿ ಇ.ಡಿ ತನಿಖೆಯಿಂದ ಬಯಲಿಗೆ ಬಂದಿದೆ.
ಪಶುವೈದ್ಯಾಧಿಕಾರಿಗಳ ಹುದ್ದೆ ಗಿಟ್ಟಿಸಿಕೊಳ್ಳಲು ಕಷ್ಟಪಟ್ಟು ಓದಿ ರ್ಯಾಂಕ್ ಬಂದ ಅಭ್ಯರ್ಥಿಗಳನ್ನು ಮಧ್ಯವರ್ತಿ ಪವನ್ ಕುಮಾರ್ ರೆಡ್ಡಿ, ಬಸವರಾಜ್ ಕನ್ನಾಳೆ ಮೂಲಕ ವಾಟ್ಸ್ಪ್ ಕರೆ ಮಾಡಿಸಿ ಕೋಟಿ ರೂ. ಬೇಡಿಕೆ ಇಡುತ್ತಿದ್ದರು.
ನಂತರ ಅಭ್ಯರ್ಥಿಗಳನ್ನು ಬೀದರ್, ಬೆಂಗಳೂರಿನ ವಿವಿಧ ಹೋಟೆಲ್, ಲಾಡ್ಜ್ಗಳಲ್ಲಿ ಕರೆದು ನೇಮಕಾತಿ, ಅಂತಿಮ ಆಯ್ಕೆ ಹೇಗೆ ನಡೆಯುತ್ತದೆ. ಹಣ ಇಲ್ಲದಿದ್ದರೆ ಆಯ್ಕೆ ಹೇಗೆ ಕೈ ತಪ್ಪಿಹೋಗುತ್ತದೆ ಎಂಬುದನ್ನು ವಿವರಿಸುತ್ತಿದ್ದರು. ಇದರಿಂದ ಆತಂಕಕ್ಕೆ ಒಳಗಾಗುತ್ತಿದ್ದ ಅಭ್ಯರ್ಥಿಗಳು 35ರಿಂದ 40 ಹಣ ನೀಡಲು ಒಪ್ಪಿಕೊಂಡು ಎರಡು ಕಂತಿನಲ್ಲಿ ಹಣ ಮುಟ್ಟಿಸುತ್ತಿದ್ದರು.
ಮಧ್ಯವರ್ತಿಗಳ ಜತೆ ಸೇರಿಕೊಂಡಿದ್ದ ಆಯೋಗದ ಸದಸ್ಯೆ ಬಿ.ವಿ.ಗೀತಾ, ಅಭ್ಯರ್ಥಿಯೊಬ್ಬರೊಂದಿಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟು ನಂತರ 40 ಲಕ್ಷ ರೂ.ಗೆ ಮಾತುಕತೆ ಮಾಡಿಕೊಂಡಿದ್ದರು. ಆ ಹಣವನ್ನು ಒಂದೇ ಬಾರಿ ಪಡೆದರೆ ತೊಂದರೆಯಾಗಲಿದೆ ಎಂದು ಅರಿತು, ಪ್ರತಿ ದಿನ ಯುಪಿಐ ಮೂಲಕ ತನ್ನ ಖಾತೆಗೆ ಒಂದೊಂದು ಲಕ್ಷ ರೂ. ವರ್ಗಾಯಿಸಿಕೊಳ್ಳುತ್ತಿದ್ದರು. ಈ ರೀತಿ ಲಂಚದ ಹಣ ಪಡೆಯುತ್ತಿದ್ದ ಮೂವರ ಗುಂಪು ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಮಾಡುತ್ತಿದ್ದರು.
ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣ ಸಾಹುಕಾರ್ ಮತ್ತು ಜ್ಞಾನೇಂದ್ರಗೆ ಬಹುಪಾಲು ಹೋಗುತ್ತಿತ್ತು. ಪ್ರಶ್ನೆಪತ್ರಿಕೆ, ಕೀ ಉತ್ತರಗಳನ್ನು ಬೆಂಗಳೂರಿನ ಆರ್ಕಿಡ್ ನಿರ್ವಾಣ ವಿಲ್ಲಾ, ಮೇಜೆಸ್ಟಿಕ್ ಸಮೀಪದ ಸುಭದ್ರಾ ಲಾಡ್ಜ್, ಬಸವರಾಜ್ ಕನ್ನಾಳೆಗೆ ಸೇರಿದ್ದ ಸಂಜಯನಗರದ ಜಯಮಹಲ್ ಸೇರಿ ಅಕ್ರಮ ವ್ಯವಹಾರ ನಡೆಸುತ್ತಿರುವುದನ್ನು ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಆರೋಪಿಗಳು ಅಭ್ಯರ್ಥಿಗಳಿಂದ ಹೆಚ್ಚಾಗಿ ನಗದು ರೂಪದಲ್ಲಿ ಹಣ ಸಂಗ್ರಹ ಮಾಡುತ್ತಿದರು. ಅಭ್ಯರ್ಥಿ ಬಸವರಾಜ್ ವಡಾರಿ ಎಂಬುವರು ಪರೀಕ್ಷೆಯಲ್ಲಿ 433.25 ಅಂಕ ಪಡೆದು 13ನೇ ರ್ಯಾಂಕ್ ಬಂದಿದ್ದರೂ, ಬೆಂಗಳೂರಿನ ಆರ್ಕಿಡ್ ನಿರ್ವಾಣ ವಿಲ್ಲಾದಲ್ಲಿ 27 ಲಕ್ಷ ರೂ. ಹಣ ಪಾವತಿ ಮಾಡಿದ್ದರು. ಮತ್ತೊಬ್ಬ ಅಭ್ಯರ್ಥಿ ಡಾ.ಸಿದ್ಧಾರ್ಥ 30 ಲಕ್ಷ ರೂ. ಡೀಲ್ ಒಪ್ಪಿಕೊಂಡು ಆಯ್ಕೆಯಾಗಿದ್ದರು.
ವಾಟ್ಸ್ ಕರೆಯ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಡಾ.ರಾಜ್ ಮೊಹಮ್ಮದ್, ಸಲಿಂ ಒಂಟಿ ಅಭ್ಯರ್ಥಿಗಳು ಮೆಜೆಸ್ಟಿಕ್ ಬಳೀಯ ಸುಭದ್ರಾ ಲಾಡ್ಜ್ನಲ್ಲಿ ತಂದಿದ್ದರು. 2026 ಜನರಿ 8 ರಂದು ಪರೀಕ್ಷೆಯ ಒಂದು ದಿನ ಮುಂಚಿತವಾಗಿ ತಮ್ಮ ಮೊಬೈಲ್ಗಳನ್ನು ಲಾಡ್ಜ್ನಲ್ಲಿಯೇ ಬಿಟ್ಟು ಹಾಲ್ ಟಿಕೆಟ್ನೊಂದಿಗೆ ಮಧ್ಯವರ್ತಿ ಪವನ್ ಕುಮಾರ್ ರೆಡ್ಡಿ ಅವರನ್ನು ಕಾರಿನಲ್ಲಿ ಆರ್ಕಿಡ್ ನಿರ್ವಾಣ ಹೌಸಿಂಗ್ ಸೊಸೈಟಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬೇರೊಂದು ಕಾರಿನಲ್ಲಿ ವಿಲ್ಲಾಗೆ ಕರೆದುಕೊಂಡು ಹೋಗಿ ಅಲ್ಲಿ ಬಸವರಾಜ್ ಕನ್ನಾಳೆ ಬಳಿ ಬಿಟ್ಟಿದ್ದರು ಎಂದು ಅಭ್ಯರ್ಥಿಗಳು ಇ.ಡಿ ಮುಂದೆ ಹೇಳಿಕೆ ನೀಡಿದ್ದಾರೆ.
ಸೂಚನೆ ನೀಡಿದ್ದರೂ ಅಭ್ಯರ್ಥಿಗಳು ಮೊಬೈಲ್, ಎಲೆಕ್ಟ್ರಿಕ್ ಸಾಧನ ತೆಗೆದುಕೊಂಡು ಬಂದಿರಬಹುದು ಎಂಬ ಅನುಮಾನದಿಂದ ವಿಲ್ಲಾದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಿ ತಪಾಸಣೆ ಮಾಡುತ್ತಿದ್ದರು. ವಿಲ್ಲಾದಲ್ಲಿ ಡಾ.ನಿರಂಜನ್ ಪಾಟೀಲ್, ಡಾ.ಮಹೇಂದ್ರ ಮತ್ತು ಡಾ.ಅಮರೇಗೌಡ ಹೀಗೆ 10ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಒಂದು ಕಡೆ ಕೂಡಿ ಹಾಕಿ ಪ್ರಶ್ನೆ ಪತ್ರಿಕೆಯ ಜತೆ ಕೀ ಉತ್ತರಗಳನ್ನು ನೀಡಿ ಕಂಠಪಾಠ ಮಾಡಿಸಿದ್ದರು. ಪತ್ರಿಕೆ-1 ಮತ್ತು 2ಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಯೆ 70 ರಿಂದ 80 ಉತ್ತರಗಳನ್ನು ನೀಡಿದ್ದರು.
ಹೀಗೆ ಡಾ.ಕಿರಣ್ಗೌಡ, ಎಚ್.ಎಲ್.ಡಾ.ಚೈತ್ರಾ, ವಿನೋದ್ ನಾಯ್ಕ ಸೇರಿ ಇತರೆ ಅಭ್ಯರ್ಥಿಗಳಿಗೆ ಗಾಳ ಹಾಕಿ ಅಕ್ರಮ ಎಸಗಿರುವುದನ್ನು ಇ.ಡಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.