ಕಿದ್ವಾಯಿಯಲ್ಲಿ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆಗೆ ಬೇಡಿಕೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಇದೀಗ ಅಸ್ಥಿಮಜ್ಜೆ (ಬೋನ್​ ಮ್ಯಾರೋ ಟ್ರಾನ್ಸ್​ಪ್ಲಾಂಟ್​) ಕಸಿ ಶಸ್ತ್ರಚಿಕಿತ್ಸೆಗೂ ಬೇಡಿಕೆ ಹೆಚ್ಚಿದೆ.
ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ಆರ್​.ಕೃಷ್ಣಪ್ಪ
ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ಆರ್​.ಕೃಷ್ಣಪ್ಪ
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಇದೀಗ ಅಸ್ಥಿಮಜ್ಜೆ (ಬೋನ್​ ಮ್ಯಾರೋ ಟ್ರಾನ್ಸ್​ಪ್ಲಾಂಟ್​) ಕಸಿ ಶಸ್ತ್ರಚಿಕಿತ್ಸೆಗೂ ಬೇಡಿಕೆ ಹೆಚ್ಚಿದೆ.

ಸಂಸ್ಥೆಯ ನಿರ್ದೇಶಕ ಡಾ.ಆರ್​.ಕೃಷ್ಣಪ್ಪ ಅವರು "ವಿಜಯವಾಣಿ" ಪತ್ರಿಕೆ ಆಯೋಜಿಸಿದ್ದ ಸಂವಾದದಲ್ಲಿ ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ಹಂಚಿಕೊಂಡರು. ಸಂಸ್ಥೆಯಲ್ಲಿ ಸದ್ಯ ಇಬ್ಬರು ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 98 ಹಿರಿಯರು ಹಾಗೂ 55 ಮಕ್ಕಳಿಗೆ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 30 ಲಕ್ಷದಿಂದ 50 ಲಕ್ಷ ರೂಪಾಯಿ ಖರ್ಚಾಗುವ ಈ ಚಿಕಿತ್ಸೆ ಬಿಪಿಎಲ್​ ಕುಟುಂಬಗಳಿಗೆ ಉಚಿತವಾಗಿ ದೊರೆಯುತ್ತಿದೆ. ಇದರ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.

ಘಟಕದ ವಿಶೇಷತೆ: ಸಂಸ್ಥೆಯ ಆವರಣದಲ್ಲಿನ ಜಿಂದಾಲ್​​ ಕೇಂದ್ರದ ನಾಲ್ಕನೇ ಮಹಡಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದ ಅಸ್ಥಿಮಜ್ಜೆ ಘಟಕದ ಕಟ್ಟಡ ನಿರ್ಮಿಸಲಾಗಿದೆ. ಇದು 20 ಸುಸಜ್ಜಿತ ಕೊಠಡಿಗಳು, ಮೂರು ಶಸ್ತ್ರಚಿಕಿತ್ಸಾ ಘಟಕಗಳು, ವೈದ್ಯರ ವಿಶ್ರಾಂತಿ ಕೊಠಡಿಯನ್ನು ಒಳಗೊಂಡಿದೆ. ನುರಿತ ವೈದ್ಯರು ಹಾಗೂ ಸಿಬ್ಬಂದಿ ತಂಡ ಇದ್ದು, ರಾಜ್ಯದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಘಟಕದ ವಿಶೇಷತೆಗಳ ಬಗ್ಗೆ ಕೃಷ್ಣಪ್ಪ ವಿವರಿಸಿದರು.

24 ಗಂಟೆ ಲ್ಯಾಬ್​: ಕಿದ್ವಾಯಿ ಆವರಣದಲ್ಲಿ 24/7 ಅಣು ಜೀವಶಾಸ್ತ್ರ (ಮಾಲಿಕ್ಯೂಲರ್​ ಬಯೋಲಾಜಿ) ಲ್ಯಾಬ್​ ಸೇರಿ ಎರಡು ಲ್ಯಾಬ್​ಗಳಿವೆ. ಇದರಿಂದ ರೋಗಿಗಳಿಗೆ ಶೀಘ್ರವಾಗಿ ನಿಖರ ವರದಿ ಸಿಗಲಿದೆ. ಬಡರೋಗಿಗಳಿಗೆ ಉಚಿತ ಹಾಗೂ ಉಳಿದವರು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಿಸಿಕೊಂಡು, ಕೆಲವೇ ನಿಮಿಷದಲ್ಲಿ ವರದಿ ಪಡೆದುಕೊಳ್ಳಬಹುದು. ವಾರದ ಎಲ್ಲ ದಿನ ಕಾರ್ಯನಿರ್ವಹಿಸುತ್ತದೆ. ಕೆಸಿಡಿಎಫ್​ ಔಷಧಾಲಯವೂ ಇದ್ದು, ಕಡಿಮೆ ದರದಲ್ಲಿ ಔಷಧಗಳನ್ನು ಪಡೆಯಬಹುದಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ

ಸಂಸ್ಥೆಗೆ ಸರ್ಕಾರದ ಅನುದಾನದ ಜತೆಗೆ ಸಂಘ&ಸಂಸ್ಥೆಗಳು ಹಾಗೂ ದಾನಿಗಳೂ ನೆರವಿನ ಹಸ್ತ ಚಾಚಿದ್ದಾರೆ. ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ವೈದ್ಯಕೀಯ ಉಪಕರಣಗಳನ್ನು ಒದಗಿಸಿದ್ದಾರೆ. ಇದಲ್ಲದೆ ಸರ್ಕಾರದಿಂದ ರೋಬಾಟಿಕ್​ ಶಸ್ತ್ರಚಿಕಿತ್ಸಾ ಸೌಲಭ್ಯ, ಪೆಟ್​ ಸಿಟಿ ಸ್ಕಾನ್​ ಸೇರಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸುಸಜ್ಜಿತ ಪ್ರಯೋಗಾಲಯ ಒದಗಿಸಲಾಗಿದೆ.

ರೋಗಿಗಳು ಕಾಯುವಿಕೆ ತಪ್ಪಿಸಲು ಆನ್​ಲೈನ್​ ಮೂಲಕ ಸಂದರ್ಶನ ಹಾಗೂ ತಪಾಸಣೆಯ ಸಮಯ ನಿಗದಿಪಡಿಸಿ ಮೊಬೈಲ್​ ಫೋನ್​ಗೆ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ 24 ಗಂಟೆಗಳ ದಾಖಲಾತಿ ವ್ಯವಸ್ಥೆ ಜಾರಿಯಲ್ಲಿದೆ. ರೋಗಿಗಳ ಪ್ರಯೋಗಾಲಯ ಪರೀಕ್ಷಾ ವರದಿಗಳು ಕಂಪ್ಯೂಟರ್​ ಸಂದೇಶದ ಮೂಲಕ ನೇರವಾಗಿ ವೈದ್ಯರಿಗೆ ತಲುಪಲಿದೆ. ಶೀಘ್ರದಲ್ಲೇ ಇ&ಆಡಳಿತ ಜಾರಿಗೆ ಬರಲಿದೆ ಎಂದು ಹೇಳಿದರು.

ಪ್ಯಾಲಿಯೇಟಿವ್​ ಕೇರ್​

ಕ್ಯಾನ್ಸರ್​ ರೋಗದಿಂದಾಗಿ ಅಂತಿಮ ಹಂತದ ಹೋರಾಟ ನಡೆಸುವ ರೋಗಿಗಳಿಗೆ ನಿರಂತರ ಆರೈಕೆಯ ಅಗತ್ಯವಿದ್ದು, ಅಂತಹವರಿಗೆ ಈ ಪ್ಯಾಲಿಯೇಟಿವ್​ ಕೇರ್​ ನೆರವಾಗಲಿದೆ. ಗಂಭೀರ ರೀತಿಯ ನೋವು ಹೊಂದಿರುವ ರೋಗಿಗಳಿಗೆ ನೋವು ನಿವಾರಕ ಔಷಧ ನೀಡಿ ಆರೈಕೆ ಮಾಡಲಾಗುತ್ತದೆ. ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಲು ಕೌನ್ಸೆಲಿಂಗ್​ ಮಾಡಲಾಗುತ್ತದೆ. ಆಸ್ಪತ್ರೆಗೆ ಬರಲು ಸಾಧ್ಯವಾಗದ, ನೋವಿನಿಂದ ನರಳುತ್ತಿರುವ ರೋಗಿಗಳಿಗೆ ಎನ್​ಜಿಒಗಳ ನೆರವಿನೊಂದಿಗೆ ಮನೆ ಬಾಗಿಲಿಗೇ ಪ್ಯಾಲಿಯೇಟಿವ್​ ಕೇರ್​ ಸೇವೆ ಒದಗಿಸಲಾಗುತ್ತಿದೆ.

ಇಪ್ಪತ್ತಮೂರು ಎಕರೆ ಪ್ರದೇಶದಲ್ಲಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯು 1973ರಲ್ಲಿ ಆರಂಭವಾಯಿತು. 1980ರಲ್ಲಿ ಸ್ವಾಯತ್ತ ಸಂಸ್ಥೆಯಾಯಿತು. ಅದೇ ವರ್ಷ ಭಾರತ ಸರ್ಕಾರದಿಂದ ಪ್ರಾದೇಶಿಕ ಕ್ಯಾನ್ಸರ್​ ಕೇಂದ್ರವಾಗಿ ಮಾನ್ಯತೆ ಗಳಿಸಿತು. ಪ್ರಸ್ತುತ, ದೇಶದಲ್ಲಿರುವ 27 ಪ್ರಾದೇಶಿಕ ಕ್ಯಾನ್ಸರ್​ ಕೇಂದ್ರಗಳಲ್ಲಿ ಒಂದಾಗಿದೆ. ಕ್ಯಾನ್ಸರ್​ ವಿರುದ್ಧದ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯ ಸಂಸ್ಥೆಯಾಗಿ ಸೇವೆಯ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯಿಂದ "ಇನ್​ಸ್ಟಿಟ್ಯೂಟ್​ ಆಫ್​ ಎಕ್ಸಲೆನ್ಸ್​" ಎಂಬ ಮಾನ್ಯತೆ ಪಡೆದುಕೊಂಡಿದೆ. ಹಂತ ಹಂತವಾಗಿ ಮೇಲ್ದರ್ಜೆಗೇರಿದ ಸಂಸ್ಥೆಗೆ ಕರ್ನಾಟಕ ಒಳಗೊಂಡಂತೆ ದೇಶದ ವಿವಿಧ ಭಾಗಗಳಿಂದ ನಿತ್ಯ ಸರಾಸರಿ 800-1000 ಹೊರರೋಗಿಗಳು ಬರುತ್ತಾರೆ. ರೋಗಿ ಹಾಗೂ ಅವರ ಕುಟುಂಬದ ಸದಸ್ಯರು ತಂಗಲು 2 ಧರ್ಮಶಾಲೆಗಳಿವೆ.

ಕಿದ್ವಾಯಿಗೆ ಬರುವ ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಸಾಂತ್ವನ ಹಾಗೂ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ. ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳ ಆರೈಕೆಗೆ ಪ್ಯಾಲಿಯೇಟಿವ್​ ಕೇರ್​ನಲ್ಲಿ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆಸ್ಪತ್ರೆಗೆ ಬರಲಾಗದಂಥ ರೋಗಿಗಳಿಗೆ ಮನೆಗೇ ತೆರಳಿ ವೈದ್ಯಕೀಯ ಸಿಬ್ಬಂದಿ ಸೇವೆ ನೀಡುವ ವ್ಯವಸ್ಥೆಯನ್ನೂ ಇತ್ತೀಚೆಗೆ ಜಾರಿಗೆ ತರಲಾಗಿದೆ.

ಡಾ.ಎ.ಎಸ್​.ಮಹಾಂತೇಶ ವೈದ್ಯಾಧಿಕಾರಿ ಕಿದ್ವಾಯಿ ಆಸ್ಪತ್ರೆ

ಸೌಂಡ್​ ಮ್ಯೂಸಿಕ್​ ಥೆರಪಿ

ನೋವು ಮತ್ತು ಉಪಶಾಮಕ ಆರೈಕೆ ವಿಭಾಗವು ರೋಗಿಗಳಿಗೆ ಯೋಗ ಮತ್ತು ಸೌಂಡ್​ ಮ್ಯೂಸಿಕ್​ ಥೆರಪಿಯ ಚಿಕಿತ್ಸೆಯನ್ನು ಪರಿಚಯಿಸಿದೆ. ರೋಗಿಗಳಲ್ಲಿ ನೋವಿನೊಂದಿಗೆ ಎದುರಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳು, ಆತಂಕ, ಖಿನ್ನತೆಯ ಸಂಕಟವನ್ನು ನಿವಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಂಸ್ಥೆ ಈ ಚಿಕಿತ್ಸೆಗಳನ್ನು ಅಳವಡಿಸಿದೆ.

  • ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಸೇವೆ ಒದಗಿಸುವುದು.

  • ಮುಂದಿನ ಪೀಳಿಗೆಯ ಕ್ಯಾನ್ಸರ್​ ಚಿಕಿತ್ಸೆಯ ವೃತ್ತಿಪರರನ್ನು ತಯಾರಿಸುವುದು, ತರಬೇತಿಗೊಳಿಸುವುದು.

  • ಕ್ಯಾನ್ಸರ್​ನಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ಹಾಗೂ ಆರೈಕೆ ಖಾತ್ರಿಪಡಿಸಿಕೊಳ್ಳುವುದು.

  • ರೋಗಿಗಳಿಗೆ ಚಿಕಿತ್ಸೆ ಜತೆಗೆ ಅವರ ಸಹಾಯಕರು, ಕುಟುಂಬದವರಿಗೆ ಕ್ಯಾನ್ಸರ್​ ಜಾಗೃತಿ ಮೂಡಿಸುವುದು.

  • ತಪಾಸಣಾ ಶಿಬಿರಗಳ ಮೂಲಕ ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net