ಮುಂಬೈಯಲ್ಲಿ ದಲಾಲ್​ಸ್ಟ್ರೀಟ್, ಬೆಂಗ್ಳೂರಲ್ಲಿ ತರಗುಪೇಟೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
‘ದಲ್ಲಾಳಿ’ ಅಂದರೆ ವ್ಯಾಪಾರದಲ್ಲಿ ಕೊಡುವವರ ಹಾಗೂ ಕೊಳ್ಳುವವರ ನಡುವೆ ವ್ಯವಹರಿಸಿ ಅದಕ್ಕಾಗಿ ಪಡೆಯುವ ಶುಲ್ಕ. ಉದಾಹರಣೆಗೆ- ‘ದನಕರುಗಳ ವ್ಯಾಪಾರದಲ್ಲಿ ಸಿಗುವ ದಲ್ಲಾಳಿಯಿಂದಲೇ ತಾತಪ್ಪ ಬದುಕು ನಡೆಸುತ್ತಿದ್ದನು’, ‘ಈ ಕಾರ್ಯದಲ್ಲಿ ತಮಗೆ ಯಶ ದೊರೆತಲ್ಲಿ ರತ್ನಗೋಲದ ಬೆಲೆಯಲ್ಲಿ ಶೇಕಡಾ ಐದರಷ್ಟು ದಲ್ಲಾಳಿ ಕೊಡಲು ನಮ್ಮ ರಾಯರು ಸಿದ್ಧರಿದ್ದಾರೆ’. ಕೆಲವೊಮ್ಮೆ ದಲ್ಲಾಳ ಮತ್ತು ದಲ್ಲಾಳಿ ಪದಗಳನ್ನು ಅದಲುಬದಲಾಗಿ ಬಳಸುವುದಿದೆ. ದಲಾಲ, ದಳ್ಳಾಳ, ದಲಾಲಿ, ದಳ್ಳಾಳಿ ಮುಂತಾಗಿ ಅಪಭ್ರಂಶ ರೂಪಗಳಲ್ಲಿ ಬಳಸುವುದೂ ಇದೆ. ಅದೇನಿದ್ದರೂ ಮೂಲತಃ ಅರೇಬಿಕ್ ಮತ್ತು ಪಾರಸೀ ಭಾಷೆಗಳಲ್ಲಿನ ದಲಾಲ್/ದಲಾಲೀ ಪದಗಳು ಹಿಂದಿ ಮತ್ತು ಮರಾಠಿ ಭಾಷೆಗಳ ಮೂಲಕ ಅಷ್ಟಿಷ್ಟು ಮಾರ್ಪಾಡಾಗಿ ಕನ್ನಡಕ್ಕೆ ಬಂದು ಬಳಕೆಯಲ್ಲಿವೆ.
ಭಾರತದ ವಾಣಿಜ್ಯರಾಜಧಾನಿ ಮುಂಬೈಯಲ್ಲಿ ಷೇರು ವಿನಿಮಯ ಕೇಂದ್ರದ ಕಟ್ಟಡವಿರುವ ರಸ್ತೆಗೆ, ಹಾಗೂ ಭಾರತದ ಷೇರುವ್ಯವಹಾರಕ್ಕೆ ರೂಪಕವಾಗಿ ‘ದಲಾಲ್ ಸ್ಟ್ರೀಟ್’ (ಅಮೆರಿಕದಲ್ಲಿ ‘ವಾಲ್​ಸ್ಟ್ರೀಟ್’ ಇದ್ದಂತೆ) ಹೆಸರಿರುವುದು ಇದೇ ಕಾರಣಕ್ಕೆ. ಕಳೆದ ಸಲ ಕೇಳಿದ್ದ Commission ಪದಕ್ಕೆ ಸಂವಾದಿಯಾಗಿ ಅನೇಕ ಓದುಗರು (ಅಶೋಕ ಹಂದಿಗೋಳ, ಪ್ರಸಾದ್ ಜಿ.ಎಸ್, ರಾಜೇಶ್ವರಿ ಶಿವಮೊಗ್ಗ, ಶಿವಕುಮಾರ್ ಸಿಂಗಟಗೆರೆ, ಮಹಾಂತೇಶ ಗೋಲಪ್ಪನವರ, ಮಲ್ಲಿಕಾ ಭಟ್, ಚಂದನಕುಮಾರ್ ಅಸ್ವಾಳ್, ಲಲಿತಾ ಬಾಳಿಹಳ್ಳಿಮಠ, ಡಾ.ಎಚ್.ಕೆ ಶಂಕರಾನಂದ, ಯಮನಪ್ಪ ಕೊಟ್ನಿಕಲ್, ಅರುಣ ಧಾರವಾಡಕರ್, ಸುನೀತಾ ಶಿವಾನಂದ, ಶ್ಯಾಮರಾಜ ಉಡುಪ, ಅನಿತಾ ಭಟ್, ದೇವರಾಜನ್ ಬೆಂಗಳೂರು, ಲಲಿತಾ ಸರಾಫ, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ, ಮಿಸ್ಕಿನ್ ಕುಟುಂಬ ಸದಸ್ಯರು ಮುಂತಾದವರು) ‘ದಲ್ಲಾಳಿ’ ಎಂಬ ಪದವನ್ನೇ ಸೂಚಿಸಿದ್ದಾರೆ. ಅದಕ್ಕೆ ಪೂರಕವಾಗಿ ಈ ವಿವರಣೆ.
ಆದರೆ ಅದೇ ಕಸಾಪ ನಿಘಂಟುವಿನಲ್ಲಿ ದಲ್ಲಾಳ/ದಲ್ಲಾಳಿ ಶಬ್ದಗಳನ್ನು ಕುರಿತ ವಿವರಣೆಯಲ್ಲೇ ‘ತರಗು’ ಎಂಬ ಇನ್ನೊಂದು ಶಬ್ದವನ್ನು ಬಳಸಲಾಗಿದೆ. ಮಾತ್ರವಲ್ಲ, ತರಗು ಎಂಬ ಶಬ್ದಕ್ಕೆ ದಲ್ಲಾಳಿ, ಸುಂಕ, ವಟ್ಟ ಎಂದು ಅರ್ಥವಿದೆ. ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲೂ ಇದು ಬಳಕೆಯಲ್ಲಿದೆ ಎನ್ನಲಾಗಿದೆ. ದಲ್ಲಾಳಿ ವ್ಯಾಪಾರ ನಡೆಯುವ ಅಂಗಡಿ ‘ತರಗಿನ ಅಂಗಡಿ’ ಮತ್ತು ಅಂತಹ ಅಂಗಡಿಗಳು ಇರುವ ಸ್ಥಳ ‘ತರಗು ಪೇಟೆ’. Commission ಪದಕ್ಕೆ ಸಂವಾದಿಯಾಗಿ ‘ತರಗು’ ಪದವನ್ನೂ ಕೆಲವು ಓದುಗರು (ರಂಗನಾಥ ಟಿ.ಕೆ, ಗಿರೀಶ್ ಫಡ್ಕೆ, ಅಮರ ಭೂಸನೂರ, ರೇಣುಕ ವೈಕುಂಠಯ್ಯ, ಜಿ.ನಾರಾಯಣ ರಾವ್, ದೀಪಕ ಎಸ್.ಜೋಶಿ, ನಿತ್ಯಾನಂದ ಬ್ರಹ್ಮಾವರ, ವಾಸವಿ ಗುಡೂರ, ಕೃಷ್ಣ ಎಸ್. ಕುಲಕರ್ಣಿ ಮುಂತಾದವರು) ಸೂಚಿಸಿದ್ದಾರೆ.
‘ನಮ್ಮ ಮೈಸೂರು ಮಹಾರಾಜರು ಬೆಂಗಳೂರಿನ ಮಧ್ಯಭಾಗದಲ್ಲಿ ವ್ಯಾಪಾರ ವಹಿವಾಟಿಗಾಗಿ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಸ್ಥಾಪಿಸಿದರು. ಅದರ ಸುತ್ತಮುತ್ತ ನಿರ್ವಿುತವಾದ ರಸ್ತೆಗಳು ವಿಶಿಷ್ಟ ವ್ಯಾಪಾರ/ಉದ್ಯಮಗಳಿಗೆ ಸ್ಥಳವಾದವು. ಅಂಥವುಗಳಲ್ಲಿ ದವಸಧಾನ್ಯ, ದಿನಬಳಕೆ ಸಾಮಗ್ರಿಗಳ ವ್ಯಾಪಾರಕ್ಕಾಗಿ ಮತ್ತು ಅದರ ಶುಲ್ಕ(ಕಮಿಷನ್) ಸಂಗ್ರಹಿಸಲು ನಿಗದಿಪಡಿಸಿದ್ದ ಸ್ಥಳವು ತರಗು ಪೇಟೆ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿತು’ ಎಂಬ ಪೂರಕ ಮಾಹಿತಿಯನ್ನೂ ಬರೆದಿದ್ದಾರೆ ಗೋಪಿನಾಥ ಭರಮಸಾಗರ. ಇನ್ನು ಕೆಲವರು ‘ರುಸುಮು’ ಎಂಬ ಪದ ಸೂಚಿಸಿದ್ದಾರೆ, ‘ರುಪಾಯಿಯನ್ನು ಸುಮ್ಮನೆ ಪಡೆಯುವ ಮುಖ್ಯ ವ್ಯಕ್ತಿ’ ಎಂದು ಅದಕ್ಕೊಂದು ತಮಾಷೆಯ ದೀರ್ಘರೂಪವನ್ನೂ ಅಂಜನಾ ಗುರುರಾಜ್ ಬರೆದಿದ್ದಾರೆ. ಆದರೆ ರುಸುಮು ಅಂದರೆ ನಿಯಮಾನುಸಾರವಾಗಿ ಕೊಡುವ ಶುಲ್ಕ, ತೆರಿಗೆ ಇತ್ಯಾದಿ. ಅದು ನಿಗದಿತ ಮೊತ್ತ. ದಲ್ಲಾಳಿಯಂತೆ ಚೌಕಾಶಿಯಿಂದ ನಿರ್ಧರಿತವಾಗುವುದಲ್ಲ. ಅದಕ್ಕಿಂತ, ಕುಶಾಲನಗರದ ಬಿ.ಡಿ.ರವೀಂದ್ರ ಸೂಚಿಸಿರುವ ‘ನಡುಗಾಸು’ (ನಡುವಿನವನು ಅಂದರೆ ಮಧ್ಯವರ್ತಿಯು ಪಡೆಯುವ ಕಾಸು) ಅರ್ಥಪೂರ್ಣವಾಗಿದೆ!
ಕಳೆದ ಸಲ ಕೇಳಿದ್ದ Compounder ಪದಕ್ಕೂ ವೈವಿಧ್ಯಮಯ ಪ್ರವೇಶಿಕೆಗಳು ಬಂದಿವೆ. ಇಂಗ್ಲಿಷ್​ನಲ್ಲಿ Compound ಎಂಬ ಕ್ರಿಯಾಪದಕ್ಕೆ ‘to put together, to mix, to combine; to join, couple together ಎಂಬ ಅರ್ಥಗಳಿರುವುದು. ಆ ಕ್ರಿಯೆಯನ್ನು ಮಾಡುವವನೇ Compounder. ಹಾಗೆ ನೋಡಿದರೆ ಸಿಮೆಂಟ್ ಮತ್ತು ಮರಳನ್ನು ಹದ ಪ್ರಮಾಣದಲ್ಲಿ ಮಿಶ್ರಣ ಮಾಡುವವನೂ ಕಾಂಪೌಂಡರನೇ. ಹಾಲಿಗೆ ನೀರು ಬೆರೆಸಿ ಮಾರುವ ಗೌಳಿಗನಿದ್ದರೆ ಆತನೂ ಕಾಂಪೌಂಡರನೇ! ಆದರೆ ಲೋಕರೂಢಿಯಲ್ಲಿ ವೈದ್ಯರ ಸಹಾಯಕನಾಗಿ, ವೈದ್ಯರ ಶಿಫಾರಸಿನಂತೆ ಔಷಧಗಳನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರ ಮಾಡಿಕೊಡುವವನನ್ನು ಮಾತ್ರ ನಾವು ಕಾಂಪೌಂಡರ್ ಎನ್ನುತ್ತೇವೆ. ಆಸ್ಪತ್ರೆಯಲ್ಲಿ ಔಷಧಗಳ ದಾಸ್ತಾನುಗಳನ್ನು ಮೇಲ್ವಿಚಾರಣೆ ಮಾಡುವುದು, ತುರ್ತು ಸಂದರ್ಭಗಳಲ್ಲಿ ಅಥವಾ ಪ್ರಾಥಮಿಕ ಚಿಕಿತ್ಸೆ ನೀಡುವಾಗ ವೈದ್ಯರಿಗೆ ಸಹಾಯ ಮಾಡುವುದು ಕೂಡ ಕಾಂಪೌಂಡರ್​ನ ಕೆಲಸ. ‘ಈ ವೃತ್ತಿಯ ಸ್ವರೂಪ ಈಗ ಬದಲಾಗಿದೆ. ಈಗ ಯಾರೂ ಮದ್ದು ಕಲೆಸಿ ಕೊಡುವುದಿಲ್ಲ- ಕೆಲವೇಕೆಲವು ಆಯುರ್ವೆದ ಪಂಡಿತರನ್ನು ಬಿಟ್ಟು. ಈಗ ಸಿದ್ಧವಿರುವ ಮದ್ದನ್ನು ಮಾರುವುದಷ್ಟೇ ಕೆಲಸ. ಆದರೂ ಒಂದು ಪದ ನನ್ನ ಮನಸ್ಸಿಗೆ ಹೊಳೆದಿದೆ: ಮದ್ದುಗಾರ’ ಎಂದು ಬರೆದಿದ್ದಾರೆ ಮಂಗಳೂರಿನಲ್ಲಿ ಶ್ವಾಸಕೋಶ ವೈದ್ಯವೃತ್ತಿಯಲ್ಲಿರುವ ಡಾ.ರಾಜೇಶ್ ವಿ. ಇದೇ ಪದವನ್ನು ಎನ್.ಆರ್.ರಮೇಶ್, ಗೋಪಾಲ ಹೆಗಡೆ, ಬೊ.ನಾ ಕೃಷ್ಣಮೂರ್ತಿ ಮತ್ತು ಡಾ.ದಯಾನಂದ ಭಟ್ಟ ಸಹ ಸೂಚಿಸಿದ್ದಾರೆ. ‘ಮದ್ದುಮಾಣಿ’ ಆಗಬಹುದೆಂದಿದ್ದಾರೆ ಮೈಸೂರಿನ ಆರ್.ವಿ ಮೂರ್ತಿ.
ಮದ್ದು ಕಲೆಸುವವನಾದ್ದರಿಂದ ‘ಮದ್ದುಕಲಪುಗ’ (ಎಸ್.ಅಜಯಕುಮಾರ್, ಎಸ್.ವಿಜಯಕುಮಾರ್, ರಾಜೇಶ್ವರಿ ಶಿವಮೊಗ್ಗ, ಎನ್.ಎಚ್.ದೇಶಪಾಂಡೆ, ಸಾಬು ಮಾದರ, ಸೀತಾ ವ್ಯಾಸಮುದ್ರಿ, ನಾಗತನಯ ತೊದಲಬಾಗಿ, ಡಾ.ರಾಜೇಶ್ವರಿ ಶ್ರೀನಿವಾಸ್, ವಿಶ್ವಾರಾಧ್ಯ ಎ.ಎಂ, ಸುವರ್ಣಾ ಕೌಲ್ಗೀಕರ, ಸುರೇಂದ್ರ ಪೈ ಮತ್ತಿತರರು), ‘ಮದ್ದುಮಿಶ್ರಕ’ (ಶ್ರೀಕಲಾ ಕಾರಂತ್, ರಾಘವೇಂದ್ರ ಸಂಗಮ, ಸಂಧ್ಯಾ ಅಡಿಗ, ಎಸ್ ಅನಂತರಾಮ್ ಗೋಪಾಲಕೃಷ್ಣ ಹೆಮ್ಮಿಗೆ) ಎಂಬ ಆಯ್ಕೆಗಳೂ ಬಂದಿವೆ. ಪದರಚನೆ ದೃಷ್ಟಿಯಿಂದ ಮದ್ದುಮಿಶ್ರಕ ಎಂದು ಕನ್ನಡ-ಸಂಸ್ಕೃತ ಪದಗಳನ್ನು ಕಸಿ ಕಟ್ಟುವುದಕ್ಕಿಂತ ‘ಔಷಧಮಿಶ್ರಕ’ (ಎ.ವಿಜಯಲಕ್ಷ್ಮೀ, ಅಂಜಲಿ ಬರ್ವೆ, ಭಾಗ್ಯಶ್ರೀ ಬೆಂಗಳೂರು, ಚಂಪಾವತಿ ಜೋಶಿ), ‘ಔಷಧಸಂಯೋಜಕ’ (ಲಕ್ಷ ್ಮ ರೆಡ್ಡಿ, ಶೋಭಾ ದೇಸಾಯಿ, ನರೇಂದ್ರನಾಥ್ ಹೆಚ್ ಎಂ, ಭವಾನಿ ಪ್ರಸಾದ್, ಬಿ.ಎಸ್ ನಟರಾಜು, ನಾಗಮಣಿ ಶಾಂಪೂರ್) ಎಂದು ಸಂಸ್ಕೃತ ಪದಗಳನ್ನೇ ಬೆಸೆಯುವುದು ಒಳ್ಳೆಯದು. ‘ರಸಮಿಶ್ರಕ’ (ವಸಂತಕುಮಾರ್ ಕಲ್ಯಾಣಿ), ‘ದ್ರವ್ಯಮಿಶ್ರಕ’ (ರಜನೀಕಾಂತ ಕುಡ್ಪಿ), ‘ಧಾತುಸಂಯೋಜಕ’ (ಗಿರೀಶ ಕೆ.ಎಸ್) ಕೂಡ ಚಂದದ ಪದಗಳೇ. ‘ಸಮ್ಮಿಶ್ರಕ’ (ಡಾ.ಜಿ.ಎಸ್.ವೇಣುಗೋಪಾಲ್, ಮಿಥುನ್ ಗುಡ್ಡೆತೋಟ) ಅಥವಾ ಬರೀ ‘ಮಿಶ್ರಕ’ (ಎನ್.ಕೆ ಸುಬ್ಬಣ್ಣ, ಜಿ.ಎಚ್.ಸಂಕಪ್ಪ) ಎಂದರಂತೂ ವಿಶಾಲಾರ್ಥದಿಂದ ಸೂಕ್ತವೆನಿಸುತ್ತವೆ.
ಅಂದಹಾಗೆ ಈಗಿನ ಕಾಲದಲ್ಲಿ ಸಾಂಪ್ರದಾಯಿಕ ಕಾಂಪೌಂಡರ್ ವೃತ್ತಿನಾಮ ಮರೆಯಾಗುತ್ತಿದೆಯಾದರೂ, ಸಿಲ್ಲಿ ಲಲ್ಲಿ ಹಾಸ್ಯ ಧಾರಾವಾಹಿಯ ವೀಕ್ಷಕರಿಗೆ ಡಾ.ವಿಠಲರಾವ್ ಎಂಬಿಬಿಎಸ್, ಮತ್ತವರ ಕಾಂಪೌಂಡರ್ ಗೋವಿಂದ ಸುಲಭವಾಗಿ ಮರೆತು ಹೋಗಲಾರರೇನೋ. ಅಂತೆಯೇ, ಆರೇಳು ದಶಕಗಳ ಹಿಂದಿನ ಕಾಲಘಟ್ಟದಲ್ಲಿ ಈಗಿನಂತೆ ಎಲ್ಲವೂ ವಾಣಿಜ್ಯಮಯವಾಗಿರದೆ ಪರಿಶುದ್ಧ ಸೇವಾಮನೋಭಾವವೇ ಮೂರ್ತಿವೆತ್ತಂತಿದ್ದ ವೈದ್ಯರು ಮತ್ತು ಕಾಂಪೌಂಡರರನ್ನೂ ಜನರು ಕೃತಜ್ಞತಾಭಾವದಿಂದ ನೆನಪಿಸಿಕೊಳ್ಳುತ್ತಾರೆ. ಇನ್ನು, ಕಳೆದ ಬಾರಿಯ ಮೂರನೆಯ ಪದ Parenting. ಇಂಗ್ಲಿಷ್​ನಲ್ಲಿ ಇದಕ್ಕೆ ಸರಳವಾಗಿ ‘Supervision by parents of their children’ ಎಂಬ ಅರ್ಥವಿರುವುದು. ಆರೇಳು ದಶಕಗಳಿಂದೀಚೆಗಷ್ಟೇ ಬಳಕೆಯಾಗುತ್ತಿರುವುದು. ಅದಕ್ಕಿಂತ ಹಿಂದೆ Parentcraft, Parentage ಮುಂತಾದ ಪದಬಳಕೆ ಇದ್ದುದನ್ನು ಗಮನಿಸಬಹುದು. ಹೆತ್ತವರು ಮಾಡುವ ಮಕ್ಕಳ ಪಾಲನೆ-ಪೋಷಣೆಯೇ ಪೇರೆಂಟಿಂಗ್.
ಮಕ್ಕಳನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯಕರವಾಗಿ ಬೆಳೆಸುವ ಒಂದು ಮಹತ್ತರ ಜವಾಬ್ದಾರಿ. ಉತ್ತಮ ಪೋಷಕರು ಮಕ್ಕಳಿಗೆ ಕೇವಲ ಆಹಾರ ಮತ್ತು ಶಿಕ್ಷಣವನ್ನಷ್ಟೇ ನೀಡುವುದಲ್ಲ; ಮೌಲ್ಯಗಳು, ಶಿಸ್ತು, ಸಹಾನುಭೂತಿ ಮತ್ತು ಆತ್ಮವಿಶ್ವಾಸವನ್ನೂ ಕಲಿಸುತ್ತಾರೆ. ಮಕ್ಕಳ ಮಾತುಗಳನ್ನು ಗಮನದಿಂದ ಕೇಳುವುದು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು, ಮತ್ತು ತಪ್ಪು ಮಾಡಿದಾಗ ಪ್ರೀತಿಯಿಂದ ಮಾರ್ಗದರ್ಶನ ನೀಡುವುದು ಉತ್ತಮ ಪೋಷಣೆಯ ಲಕ್ಷಣಗಳು. ಮಕ್ಕಳೊಂದಿಗೆ ಸಮಯ ಕಳೆಯುವುದು ಅತ್ಯಂತ ಮುಖ್ಯ. ಅದು ಮಕ್ಕಳ ವ್ಯಕ್ತಿತ್ವ, ನೈತಿಕತೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ದೃಷ್ಟಿಯಿಂದ, ಬಹಳಷ್ಟು ಪ್ರವೇಶಿಕೆಗಳಲ್ಲಿ ಬಂದಿರುವ ‘ಪೋಷಕತ್ವ’ (ಶ್ರೀಹರಿ ಭಟ್, ವಿರೂಪಾಕ್ಷಪ್ಪ ಶಾಂತಗೇರಿ, ಭವಾನಿ ಜೋಶಿ, ಪ್ರಕಾಶ್ ಬಿ, ಸಂಜೀವ ಮತ್ತಿಕೊಪ್ಪ, ಗುರುಪ್ರಸನ್ನ ಚಿಂತಾಮಣಿ, ಡಾ.ಎಸ್.ಎಸ್ ಚೊರಗಿ, ನಾಗೇಶ ಫಾಟಕ್, ಭಾರತಿ ಭಟ್, ರಶ್ಮಿ ರಾಜೇಂದ್ರ, ಪೂರ್ಣಿಮಾ ಭಟ್, ಷಡಕ್ಷರಮುನಿ ಸ್ವಾಮೀಜಿ, ರಾಕೇಶ ವೆಂಕಟಗಿರಿ, ಕಾಡೇಶ ವಿ.ಬಿ, ಭಾಗ್ಯಶ್ರೀ ಕುಲಕರ್ಣಿ, ಉಮಾ ಪ್ರಭು, ಕಂಪಲಾಪುರ ಶ್ರೀನಿವಾಸ್ ಮುಂತಾದವರು) ಅಥವಾ ‘ಪಾಲಕತ್ವ’ (ಡಾ.ಎಚ್.ಎಸ್.ಸುರೇಶ್, ಭಾರತಿ ಪ್ರಕಾಶ, ಸಜ್ಜನ ತಾಳಿಕೋಟೆ, ವಿ.ವಿಜಯೇಂದ್ರ ರಾವ್, ರಾಮಚಂದ್ರ ಐ.ಎಂ, ಸವಿತಾ ರತ್ನಾಕರ, ಸುಜನಾ ನಿಟ್ಟೂರು, ಯಶೋದಾ ಗೋಪಿ, ವಿಜಯಲಕ್ಷ್ಮಿ ಅಶೋಕ್, ಯು.ಎನ್. ಸಂಗನಾಳಮಠ, ಮಮತಾ ಕುಂದಾಪುರ, ವೀಣಾ ಹಂಪಿಹೊಳಿ, ರಘುನಾಥ್ ಹಿರೇಹಳ್ಳಿ ಮತ್ತಿತರರು) ಒಳ್ಳೆಯ ಆಯ್ಕೆಗಳು. ‘ಪರಿಪಾಲನೆ’ (ಅನಂತಕೃಷ್ಣ ಶಿವಮೊಗ್ಗ, ಜಿ.ಕೆ.ಲಕ್ಷಿ ್ಮನರಸಿಂಹಯ್ಯ) ಸಹ ಅರ್ಥಪೂರ್ಣವಾಗಿದೆ. ಸಾಕಾಣಿಕೆಯನ್ನು ಹೋಲುವ ‘ಬೆಳೆಸಾಣಿಕೆ’ (ರಘುನಾಥ ಎಂ.ಆರ್) ಆಕರ್ಷಕವಾಗಿದೆ. ರೇಖಾ ಮುತಾಲಿಕ್ ಸೂಚಿಸಿರುವ ‘ತಂದೆತಾಯ್ತನ’ ಇದು ತಂದೆ-ತಾಯಿ ಇಬ್ಬರದೂ ಸಮಾನ ಜವಾಬ್ದಾರಿ ಎಂಬುದನ್ನು ಪರಿಣಾಮಕಾರಿಯಾಗಿ ತಿಳಿಸುತ್ತದೆ.
ಈ ವಾರದ ಮೂರು ಪದಗಳು:
1. copycat: ಪ್ರತಿಮಾರ್ಜಾಲವೆಂದೋ ನಕಲು-ಬೆಕ್ಕು ಎಂದೋ ಪದಶಃ ಆಲೋಚಿಸದಿರಿ. ಯಥಾವತ್ತಾಗಿ ನಕಲು ಮಾಡುವವರನ್ನು ಕನ್ನಡದಲ್ಲಿ ಏನೆನ್ನುತ್ತೀರಿ?
2. Possessive: ವಸ್ತುವಿರಲಿ ವ್ಯಕ್ತಿಯಿರಲಿ ಅದು ತನಗಷ್ಟೇ ಸೇರಿದ್ದು, ಬೇರೆಯವರಿಗೆ ಬಿಟ್ಟುಕೊಡೆನು ಎಂಬ ಭಾವನೆ. ಇದಕ್ಕೊಂದು ಕನ್ನಡ ಪದ ಬೇಕು.
3. Striker : ಹರತಾಳ/ಮುಷ್ಕರ ಹೂಡುವವನಲ್ಲ; ಕೇರಂ ಆಟದಲ್ಲಿ ಬೇರೆ ಬಿಲ್ಲೆಗಳನ್ನು ಹೊಡೆಯಲಿಕ್ಕೆ ಬಳಸುವ ದೊಡ್ಡ ಬಿಲ್ಲೆಯನ್ನು ಏನೆನ್ನಬಹುದು?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net