ಸರ್ಕಾರಕ್ಕೆ ಹೆದರಿಸುವ ಕೆಲಸ ಬೇಡ, ಪ್ರತಿಷ್ಠೆ ಬಿಟ್ಟು ಪ್ರತಿಭಟನೆ ಹಿಂಪಡೆಯಿರಿ! ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ

ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ
ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಮನವಿ
Published on: 

ಬೆಂಗಳೂರು: ವೇತನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಹಠ ಹಾಗೂ ಪ್ರತಿಷ್ಠೆಯನ್ನು ಬಿಟ್ಟು ಹೋರಾಟವನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಇಂದು ಸಂಜೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ನಾಳೆ ಮತ್ತೆ ಈ ಬಗ್ಗೆ ಮಾತನಾಡುತ್ತೇನೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಪ್ರತಿಷ್ಠೆ ಬಿಟ್ಟು ಪ್ರತಿಭಟನೆಯನ್ನು ವಾಪಸ್ ಪಡೆಯಿರಿ, ನಾನು ನಿಮ್ಮನ್ನು ಕೂರಿಸಿಕೊಂಡು ಮಾತನಾಡುತ್ತೇನೆ. ಬೇರೆಯವರು ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆಯೇ ಹೊರತು, ಯಾರಿಂದಲೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು

ಸರ್ಕಾರಕ್ಕೆ ಹೆದರಿಸುವ ಕೆಲಸ ಮಾಡಬಾರದು ಎಂದಿರುವ ಸಿಎಂ, ಪ್ರತಿಯೊಬ್ಬರ ಬದುಕು ನಮಗೆ ಮುಖ್ಯ. ಹೆಣ್ಣು ಎಂದರೆ ಕುಟುಂಬದ ಕಣ್ಣು ಎಂಬ ಅರಿವು ನಮಗಿದೆ. ಇದೇ ಕಾರಣಕ್ಕೆ ಗೃಹಲಕ್ಷ್ಮಿ, ಅಕ್ಕಿ, ಉಚಿತ ವಿದ್ಯುತ್‌ನಂತಹ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಹಣಕಾಸು ಇಲಾಖೆಯೊಂದಿಗೆ ಈಗಾಗಲೇ ಐದಾರು ಸುತ್ತಿನ ಮಾತುಕತೆ ನಡೆಸಿದ್ದೇನೆ. ಇದೊಂದೇ ಇಲಾಖೆಯಾಗಿದ್ದರೆ ತಕ್ಷಣವೇ ಮಾಡಬಹುದಿತ್ತು, ಆದರೆ ಎಲ್ಲರೂ ಬೀದಿಗೆ ಬಂದು ಕುಳಿತರೆ ಹೇಗೆ? ಪ್ರಣಾಳಿಕೆಯಲ್ಲಿ ಹೇಳಿದಂತೆ ಖಂಡಿತ ಪರಿಹಾರ ಕೊಡುತ್ತೇವೆ, ನಮ್ಮ ಮೇಲೆ ವಿಶ್ವಾಸವಿಡಿ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆಯೂ ಉಲ್ಲೇಖಿಸಿದ ಸಿಎಂ, ಯುಪಿಎ ಸರ್ಕಾರದ ಬಳಿಕ ಈ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿಲ್ಲ. ನಾವೇ ಹಂತ ಹಂತವಾಗಿ ಜಾಸ್ತಿ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿ ನಾಯಕರು ಯಾಕೆ ಕೇಂದ್ರದ ಬಳಿ ಹೋಗಿ ಹಣ ಕೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಬೇಡ ಎಂಬ ಆರೋಗ್ಯ ಸಚಿವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಸಿಎಂ, ಅದೆಲ್ಲ ಸುಳ್ಳು, ನಮಗೆ ಎಲ್ಲರೂ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಆನೆ ಹಾವಳಿ ನಿಯಂತ್ರಣ ವಿಷಯದ ಬಗ್ಗೆಯೂ ಡಿಕೆಶಿ ಮಾತು!

ಚಿಕ್ಕಮಗಳೂರು ಮತ್ತು ಹಾಸನ ಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ಯತ್ನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆನೆಗಳ ವಿಚಾರದಲ್ಲಿ ಅಷ್ಟು ಸುಲಭವಾಗಿ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ನಮ್ಮ ಮನೆ ತೋಟಕ್ಕೂ, ಐಎಎಸ್ ಅಧಿಕಾರಿಗಳ ತೋಟಕ್ಕೂ ಆನೆಗಳು ನುಗ್ಗಿದ್ದವು. ಗಡಿ ಭಾಗವಾಗಿರುವುದರಿಂದ ಎಲ್ಲವೂ ಮಿಕ್ಸ್ ಆಗಿದೆ. ಚಿಕ್ಕಮಗಳೂರು ಶಾಸಕರು ಕೇಳುವುದರಲ್ಲಿ ತಪ್ಪಿಲ್ಲ, ಆದರೆ ಆನೆಗಳನ್ನು ಏಕಾಏಕಿ ಒಂದು ಕಡೆಗೆ ಓಡಿಸಲು ಸಾಧ್ಯವಿಲ್ಲ. ಹಾಸನ, ಚಿಕ್ಕಮಗಳೂರು ಸೇರಿದಂತೆ ಎಲ್ಲ ಭಾಗದ ಜನರ ರಕ್ಷಣೆ ಮಾಡಬೇಕು. ಕೂಡಲೇ ಆ ಕಡೆ ಆನೆಗಳನ್ನು ಕಳುಹಿಸದಂತೆ ಸೂಚನೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳು, ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ನಾಗೇಂದ್ರ ಕ್ಲೀನ್ ಚಿಟ್ ವಿಚಾರ

ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಡಿ ಕೆ ಶಿವಕುಮಾರ್, ಈ ವಿಚಾರ ನನಗೆ ಇನ್ನೂ ಪೂರ್ಣವಾಗಿ ತಿಳಿದಿಲ್ಲ, ಪತ್ರಿಕೆಯಲ್ಲಿ ಓದಿದ್ದೇನೆ ಅಷ್ಟೇ. ನಾನು ಯಾವುದೇ ತನಿಖೆಯಲ್ಲೂ ಮಧ್ಯಪ್ರವೇಶ ಮಾಡುವುದಿಲ್ಲ, ಅದು ಸರಿಯೂ ಅಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.