ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಿಐಐ ಗ್ರೀನ್‌ಕೋ ಪ್ರಶಸ್ತಿ

ಉತ್ತಮ ತ್ಯಾಜ್ಯ ಪರಿವರ್ತನೆಗಾಗಿ ಗೌರವ
Kempegowda International Airport (KIAL) was presented with the CII GreenCo Award for effective waste recycling at the Waste and Resource Management Summit 2026.
ತ್ಯಾಜ್ಯ ಮತ್ತು ಸಂಪನ್ಮೂಲ ನಿರ್ವಹಣೆ ಶೃಂಗಸಭೆ-2026 ರಲ್ಲಿ ಸಮರ್ಪಕ ತ್ಯಾಜ್ಯ ಮರುಬಳಕೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಸಿಐಐ ಗ್ರೀನ್‌ಕೋ ಪ್ರಶಸ್ತಿ ನೀಡಲಾಯಿತು.
Published on: 

ಬೆಂಗಳೂರು : ವಿಮಾನ ನಿಲ್ದಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾದ ವಸ್ತುಗಳು, ಜೈವಿಕ ಇಂಧನ ಹಾಗೂ ಇತರ ಸಂಪನ್ಮೂಲಗಳಾಗಿ ಪರಿವರ್ತಿಸುವ ನವೀನ ಪ್ರಯತ್ನಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಸಿಐಐ ಗ್ರೀನ್‌ಕೋ ಪ್ರಶಸ್ತಿ ಲಭಿಸಿದೆ.

ತ್ಯಾಜ್ಯ ಮತ್ತು ಸಂಪನ್ಮೂಲ ನಿರ್ವಹಣೆ ಶೃಂಗಸಭೆ 2026ರಲ್ಲಿ ಪ್ರಶಸ್ತಿ ವಿತರಿಸಲಾಗಿದ್ದು, ಕೆಐಎಎಲ್ ತ್ಯಾಜ್ಯ ನಿರ್ವಹಣೆಯಲ್ಲಿ ಸುಸ್ಥಿರ ಹಾಗೂ ಪರಿಸರಸ್ನೇಹಿ ಮಾದರಿಯನ್ನು ಅಳವಡಿಸಿಕೊಂಡಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಕೆಐಎಎಲ್‌ನಲ್ಲಿ ಶೇ.98ರಷ್ಟು ತ್ಯಾಜ್ಯವನ್ನು ಮರುಬಳಕೆಗೆ ಯೋಗ್ಯ ಸಂಪನ್ಮೂಲಗಳಾಗಿ ಪರಿವರ್ತಿಸಲಾಗುತ್ತಿದೆ. ವಾರ್ಷಿಕ 3,800 ಟನ್ ಅಜೈವಿಕ ತ್ಯಾಜ್ಯವನ್ನು ಮರುಪಡೆಯಲಾಗುತ್ತಿದ್ದು, ಕಳೆದ ವರ್ಷ 5,800 ಟನ್ ಸಾವಯವ ತ್ಯಾಜ್ಯ ಸಂಸ್ಕರಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು 7 ಕೋಟಿ ರೂ. ಆದಾಯ ಬಂದಿದೆ. ಸಾವಯವ ತ್ಯಾಜ್ಯದಿಂದ ಸಂಕುಚಿತ ಜೈವಿಕ ಅನಿಲ (ಸಿಬಿಜಿ), ದ್ರವ ಗೊಬ್ಬರ ಹಾಗೂ ಘನ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಮಾನ ನಿಲ್ದಾಣ ಆವರಣದ ರಸ್ತೆ ನಿರ್ಮಾಣಕ್ಕೂ ಬಳಸಲಾಗುತ್ತಿದೆ.

ಬಿಐಎಎಲ್‌ನ ಈ ಉಪಕ್ರಮವು ಸುಸ್ಥಿರ ಅಭಿವೃದ್ಧಿ ಹಾಗೂ ವೃತ್ತಾಕಾರದ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡುವುದರ ಜತೆಗೆ, ಇತರ ವಿಮಾನ ನಿಲ್ದಾಣಗಳಿಗೂ ಮಾದರಿಯಾಗಿದೆ ಎಂದು ಸಿಐಐ ಗ್ರೀನ್ ಬಿಸಿನೆಸ್ ಸೆಂಟರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಮುತ್ತುಶೆಳಿಯನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದ ಮೊದಲ ಹಸಿರುವಲಯ ವಿಮಾನ ನಿಲ್ದಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ಹಸಿರುಕ್ಷೇತ್ರ ವಿಮಾನ ನಿಲ್ದಾಣವಾಗಿದೆ. ದಕ್ಷಿಣ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವೂ ಆಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಸುಮಾರು 4 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ್ದು, 5.32 ಲಕ್ಷ ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಲಾಗಿದೆ.

ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ವಿಮಾನ ನಿಲ್ದಾಣವು, ದೇಶ-ವಿದೇಶಗಳೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಇಂಧನ ದಕ್ಷತೆ, ಜಲಸಂರಕ್ಷಣೆ, ಸುಸ್ಥಿರ ಸಾರಿಗೆ ಹಾಗೂ ತ್ಯಾಜ್ಯ ಮರುಬಳಕೆಗೆ ಆದ್ಯತೆ ನೀಡಿರುವ ಕೆಐಎಎಲ್, 2030ರ ಸುಸ್ಥಿರ ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ಪರಿಸರ ಸ್ನೇಹಿ ವಿಮಾನ ನಿಲ್ದಾಣ ನಿರ್ವಹಣೆಗೆ ಒತ್ತು ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net