ಸಿಎಂ ನಿವಾಸ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ

ಹೈಕೋರ್ಟ್ ಸ್ಫೋಟಿಸುವುದಾಗಿ ಬೆದರಿಕ ಸಂದೇಶ
Bomb therat
Bomb therat
Published on: 

ಬೆಂಗಳೂರು: ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸ, ಅವರ ಬೆಂಗಾಲು ವಾಹನಗಳು ಹಾಗೂ ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿಯ ಬಾಲಾಜಿನಗರದ ನಿವಾಸಿ ಆರ್.ಕಾರ್ತಿಕ್(20) ಎಂಬಾತನನ್ನು ಸದಾಶಿವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾರ್ತಿಕ್, ಆಟೊ ಚಾಲಕನ ಮೊಬೈಲ್ ಬಳಸಿಕೊಂಡು ಬೆದರಿಕೆ ಹಾಕಿರುವುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿ ಕಾರ್ತಿಕ್‌ನನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ಪೂರ್ವಾಪರದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರದ ಆಟೋ ಚಾಲಕರೊಬ್ಬರಿಗೆ ನ.5ರ ಸಂಜೆ ಕಾರ್ತಿಕ್ ಎಂಬ ಹೆಸರಿನಲ್ಲಿ ಟೋ ಬುಕ್ಕಿಂಗ್ ಬಂದಿತ್ತು. ಅರಮನೆ ನಗರದ 18ನೇ ಅಡ್ಡರಸ್ತೆಯಿಂದ ರಾಜರಾಜೇಶ್ವರಿ ನಗರದ ಬಿಎಚ್‌ಇಎಲ್ ಬಡಾವಣೆಗೆ ಪ್ರಯಾಣಿಸಲು ಬುಕ್ಕಿಂಗ್ ಮಾಡಲಾಗಿತ್ತು. ಬುಕ್ಕಿಂಗ್ ಸ್ವೀಕರಿಸಿದ್ದ ಚಾಲಕ, ಪ್ರಯಾಣಿಕನನ್ನು ಕರೆದುಕೊಂಡು ಹೋಗಲು ನಿಗದಿತ ಸ್ಥಳಕ್ಕೆ ಅಂದರೆ ಸಿಎಂ ನಿವಾಸದ ಬಳಿ ತೆರಳಿದ್ದರು. ಆದರೆ, ಅಲ್ಲಿ ಪ್ರಯಾಣಿಕ ಕಾಣಿಸಿರಲಿಲ್ಲ. ಮೊಬೈಲ್ ಮೂಲಕ ಕರೆ ಮಾಡಿ ಸ್ಥಳದ ಬಗ್ಗೆ ಆಟೋ ಚಾಲಕ ವಿಚಾರಿಸಿದ್ದರು. ಈ ವೇಳೆ ಕರೆ ಸ್ವೀಕರಿಸಿದ್ದ ವ್ಯಕ್ತಿ, ತಾನು ಮುಖ್ಯಮಂತ್ರಿ ನಿವಾಸದ ಒಳಗೆ ಇರುವುದಾಗಿ ಹೇಳಿಕೊಂಡಿದ್ದಾನೆ.

ಆರೋಪಿ ಹೇಳಿದ ಸ್ಥಳಕ್ಕೆ ಬಂದಿರುವುದಾಗಿ ಆಟೋ ಚಾಲಕ ಹೇಳಿದ್ದಾನೆ. ಗೇಟ್ ಬಳಿ ಇರುವ ಪೊಲೀಸ್ ಸಿಬ್ಬಂದಿಗೆ ಮೊಬೈಲ್ ಕೊಡಿ ಎಂದು ಚಾಲಕನಿಗೆ ಆರೋಪಿ ಸೂಚಿಸಿದ್ದ. ಸಿಎಂ ನಿವಾಸದ ಒಳಗೆ ಇರಬಹುದು ಎಂದು ನಂಬಿದ್ದ ಚಾಲಕ, ಮುಖ್ಯಮಂತ್ರಿ ನಿವಾಸದ ಬಳಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ತನ್ನ ಮೊಬೈಲ್ ನೀಡಿದ್ದಾನೆ. ಆಗ ಮಾತನಾಡಿದ್ದ ಆರೋಪಿ, ಮುಖ್ಯಮಂತ್ರಿ ನಿವಾಸ, ವಿಧಾನಸೌಧದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು, ಆಟೊವನ್ನು ಪರಿಶೀಲಿಸಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ಬುಕ್ಕಿಂಗ್ ಮಾಹಿತಿ:

ಕರೆ ಮಾಡಿದ ವ್ಯಕ್ತಿ ನನಗೆ ಪರಿಚಯವಿಲ್ಲ. ಆ್ಯಪ್ ಮೂಲಕ ಆಟೋ ಬುಕ್ಕಿಂಗ್ ಮಾಡಿದ್ದರು. ಆತ ತಿಳಿಸಿದ್ದ ಸ್ಥಳಕ್ಕೆ ಬಂದಿದ್ದೇನೆ ಎಂದು ಹೇಳಿ ಬುಕ್ಕಿಂಗ್ ವಿವರ ತೋರಿಸಿದ್ದರು. ನಂತರ, ತನ್ನ ಫೋನ್ ಬಳಸಿಕೊಂಡು ಹುಸಿ ಬಾಂಬ್ ಬೆದರಿಕೆ ನೀಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ಆ್ಯಪ್‌ನಲ್ಲಿದ್ದ ಬುಕ್ಕಿಂಗ್ ವಿವರವನ್ನು ಬಳಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾರ್ತಿಕ್, ಬಾಲಾಜಿನಗರದ ಪೇಯಿಂಗ್ ಗೆಸ್ಟ್‌ನಲ್ಲಿ ನೆಲಸಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆತ ಮೇಲ್ನೊಟಕ್ಕೆ ಖಿನ್ನತೆಗೆ ಒಳಗಾಗಿರುವಂತೆ ವರ್ತಿಸುತ್ತಿದ್ದಾನೆ. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಶಂಕೆಯಿದೆ. ಆತ ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಕರೆ ಮಾಡಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದಿದೆ.

ಹೈಕೋರ್ಟ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶವೊಂದು ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಿಜಿಸ್ಟ್ರಾರ್ ಜನರಲ್ ಅವರ ಕಚೇರಿ ಇ-ಮೇಲ್ ಐಡಿಗೆ ನ.23ರಂದು ಮಧ್ಯಾಹ್ನ 12.50ರ ಸುಮಾರಿಗೆ ‘ಬಾಂಬ್ ಬ್ಲಾಸ್ಟ್ ಆ್ಯಟ್ ಕರ್ನಾಟಕ ಹೈಕೋರ್ಟ್’ಎಂಬ ಸಂದೇಶ ಬಂದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ನಿಷ್ಕಿಯ, ಶ್ವಾನದಳದೊಂದಿಗೆ ಆಗಮಿಸಿದ್ದ ಪೊಲೀಸರು ಹೈಕೋರ್ಟ್ ಮತ್ತು ಆವರಣದ ಸುತ್ತಲು ಪರಿಶೀಲನೆ ನಡೆಸಿದ್ದರು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂಬುದಾಗಿ ಪೊಲೀಸರು ಹೇಳಿದ್ದರು. ಇದರಿಂದೆ ಕೋರ್ಟ್ ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೈಕೋರ್ಟ್ ಲೀಗಲ್ ಸೆಲ್ ಜಂಟಿ ರಿಜಿಸ್ಟ್ರಾರ್ ರಾಜೇಶ್ವರಿ ಎಂಬುವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.