ಭಟ್ಕಳದಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ, ಮೂವರು ನಾಪತ್ತೆ! Bhatkal Tragedy

ಭಟ್ಕಳದಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ, ಮೂವರು ನಾಪತ್ತೆ! Bhatkal Tragedy
ಭಟ್ಕಳದಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ, ಮೂವರು ನಾಪತ್ತೆ! Bhatkal Tragedy
Published on
ಭಟ್ಕಳ: ನದಿಯಲ್ಲಿ ಚಿಪ್ಪು ಹೆಕ್ಕಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಜಲಸಮಾಧಿಯಾದ ಘಟನೆ ಭಟ್ಕಳ ಅಳ್ವೇಕೋಡಿಯಲ್ಲಿ ( Bhatkal Tragedy ) ನಡೆದಿದೆ. ಇನ್ನೂ ಇಬ್ಬರು ಅಸ್ವಸ್ಥರಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ಮೃತರು ಹಾಗೂ ನಾಪತ್ತೆಯಾದವರು ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಭಾನುವಾರ ಒಟ್ಟು 13 ಜನರಿದ್ದ ತಂಡವೊಂದು ಅಳಿವೆಕೋಡಿ ನದಿಗೆ ತೆರಳಿತ್ತು. ಈ ವೇಳೆ ನದಿಯಲ್ಲಿ ಚಿಪ್ಪು ತೆಗೆಯಲು ನೀರಿನಲ್ಲಿ ಇಳಿದಾಗ, ಏಕಾಏಕಿ ಬಂದ ಭಾರಿ ನೀರಿನ ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರಿನ ಪಾಲಾಗಿದ್ದಾರೆ.
ಈ ಅವಘಡದಲ್ಲಿ 8 ಮಂದಿಯ ಮೃತ ದೇಹಗಳು ಪತ್ತೆಯಾಗಿವೆ., ಎಲ್ಲರೂ ಒಂದೇ ಕುಟುಂಬದವರು ಎಂಬುದು ದೃಢಪಟ್ಟಿದೆ. ಇನ್ನೂ ಮೂವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಮೃತರ ಪೈಕಿ ಏಳು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದ್ದು, ಇವರಲ್ಲಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಹಾಗೂ ಇಬ್ಬರ ಮೃತದೇಹಗಳನ್ನು ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ. ಭಟ್ಕಳ ಆಸ್ಪತ್ರೆಯಲ್ಲಿರುವ ಮೃತರನ್ನು ಲಕ್ಷ್ಮಿ ಮಾದೇವ ನಾಯ್ಕ (38 ವರ್ಷ), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ (39 ವರ್ಷ), ಉಮೇಶ್ ಮಂಜುನಾಥ್ ನಾಯ್ಕ (42 ವರ್ಷ), ಮಾಸ್ತಮ್ಮ ಮಂಜುನಾಥ್ ನಾಯ್ಕ (43 ವರ್ಷ) ಮತ್ತು ಲಕ್ಷ್ಮಿ ಅಣ್ಣಪ್ಪ ನಾಯ್ಕ (44 ವರ್ಷ) ಎಂದು ಗುರುತಿಸಲಾಗಿದೆ. ಹಾಗೆಯೇ ಮುರುಡೇಶ್ವರ ಆಸ್ಪತ್ರೆಗೆ ತರಲಾದ ಮೃತದೇಹಗಳು ಜ್ಯೋತಿ ನಾಗಪ್ಪ ನಾಯ್ಕ (37 ವರ್ಷ) ಹಾಗೂ ಮಾಲತಿ ಜಟ್ಟಪ್ಪ ನಾಯ್ಕ (38 ವರ್ಷ) ಅವರದ್ದಾಗಿವೆ ಎಂದು ತಿಳಿದುಬಂದಿದೆ.
ಇದೇ ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿ ಒಟ್ಟು ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಾಪತ್ತೆಯಾದವರನ್ನು ಮಾದೇವ ಜಟ್ಟಪ್ಪ ನಾಯ್ಕ (52 ವರ್ಷ), ಮಂಜಮ್ಮ ಗೊತ್ತಾ ನಾಯ್ಕ (50 ವರ್ಷ) ಹಾಗೂ ನಾಗರತ್ನ ಪರಮೇಶ್ವರ್ ನಾಯ್ಕ (40 ವರ್ಷ) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಡುಶಿರಾಲಿ ಶಾರದಹೊಳೆ ನಿವಾಸಿಗಳಾಗಿದ್ದಾರೆ. ಅಸ್ವಸ್ಥರಾದವರನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈ ದಾರುಣ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಕಣ್ಣೀರಿನ ವಾತಾವರಣ ನಿರ್ಮಾಣವಾಗಿದೆ.

ಮುಗಿಲುಮುಟ್ಟಿದ ಆಕ್ರಂದನ

ನದಿ ಅಳಿವೆಯಲ್ಲಿ ಕೊಚ್ಚಿಹೋದವರ ಪೈಕಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಎರಡು ಮೃತದೇಹಗಳನ್ನು ಆರ್.ಎನ್.ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿ ಅಸುನೀಗಿದ ಸುದ್ದಿ ತಿಳಿದು ಆಸ್ಪತ್ರೆಯ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಆಸ್ಪತ್ರೆಗೆ ಮುಖಂಡರ ದೌಡು

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ದೌಡಾಯಿಸಿದ್ದಾರೆ. ಮಾಜಿ ಶಾಸಕ ಸುನಿಲ್ ನಾಯ್ಕ್, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಮುಖಂಡ ದಿನೇಶ್ ನಾಯ್ಕ್ ಮುಂಡಳ್ಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ್, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡ ದೀಪಕ್ ನಾಯ್ಕ್ ಸೇರಿದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಘಟನೆ ಕುರಿತಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net