ಬಿಎಂಟಿಸಿ ಇ.ವಿ ಬಸ್‌ಗೆ ಮತ್ತೊಂದು ಬಲಿ

EV Bus accident
EV Bus accident
Published on

ಪ್ರಮುಖ ಮುಖ್ಯಾಂಶಗಳು

  • ಆಟೋಗೆ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು : ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಹಾವಳಿಗೆ ಮತ್ತೊಂದು ಬಲಿಯಾಗಿದ್ದು, ನಗರದ ಕೆ.ಆರ್ ವೃತ್ತದ ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆ.ಆರ್.ಪುರ ನಿವಾಸಿ ಕೃಷ್ಣ ಕುಮಾರ್ (60) ಮೃತ ಆಟೋ ಚಾಲಕ. ವಿದ್ಯುತ್ ಚಾಲಿತ ಬಿಎಂಟಿಸಿ ಬಸ್ ಆಟೋಗೆ ಹಿಂದಿನಿಂದ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಸಂಚಾರ ದಟ್ಟಣೆ ಇಲ್ಲದ ಕಾರಣ ಹೆಚ್ಚಿನ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಮೆಜೆಸ್ಟಿಕ್‌ನಿಂದ ಚಂದಾಪುರಕ್ಕೆ ಹೊರಟಿದ್ದ ಬಿಎಂಟಿಸಿ ಇ.ವಿ ಬಸ್ ಕೆ.ಆರ್ ವೃತ್ತದ ಬಳಿ ಬರುತ್ತಿದ್ದಂತೆ ಆಟೋಗೆ ಡಿಕ್ಕಿಯಾಗಿದೆ. ಬಳಿಕ ನಿಯಂತ್ರಣ ತಪ್ಪಿ, ುಟ್‌ಪಾತ್ ಮೇಲೆ ಹರಿದಿದೆ. ಈ ವೇಳೆ ದುರ್ಮರಣ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಬ್ರೇಕ್ fail ಕಾರಣವೋ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೋ ಎಂಬುದು ಅಧಿಕೃತವಾಗಿ ದೃಢವಾಗಿಲ್ಲ. ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಬಸ್‌ನ ತಾಂತ್ರಿಕ ಸ್ಥಿತಿ, ಅಪಘಾತದ ಸ್ಥಳದಲ್ಲಿರುವ ಸಿಸಿ ಕ್ಯಾಮರಾದ ದೃಶ್ಯಗಳು ಮತ್ತು ಸಾಕ್ಷಿದಾರರ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದಾರೆ.

ನೆಲಕ್ಕೆ ಉರುಳಿದ ವಿದ್ಯುತ್ ಕಂಬ:

ವೇಗವಾಗಿ ಬಂದ ಇ.ವಿ ಬಸ್, ಒಟ್ಟು ಎರಡು ಆಟೋಗೆ ಡಿಕ್ಕಿಯಾಗಿದೆ. ಬಳಿಕ ುಟ್‌ಪಾತ್ ಏರಿ, ಅಲ್ಲಿದ್ದ ಮರ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ ಎರಡು ಲೈಟ್ ಕಂಬಗಳು ನೆಲಕ್ಕೆ ಉರುಳಿವೆ ಮತ್ತು ಬಸ್ಸಿನ ಮುಂಭಾಗ ಮತ್ತು ಆಟೋ ಸಂಪೂರ್ಣ ಜಖಂ ಗೊಂಡಿದೆ.
ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಸ್ ಚಾಲಕನನ್ನು ವಶಕ್ಕೆ ಪಡೆದರು. ಮೃತರ ಕುಟುಂಬಸ್ಥರಿಂದ ಅಧಿಕೃತವಾಗಿ ಯಾವುದೇ ದೂರುಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡೇ ವಾರದಲ್ಲಿ ಮೂರು ಅಪಘಾತ

ಜುಲೈ ತಿಂಗಳು ಆರಂಭವಾದಾಗಿನಿಂದ ಈತನಕ, ಬಿಎಂಟಿಸಿ ಇ.ವಿ ಬಸ್‌ಗಳಿಂದ ಒಟ್ಟು ಮೂರು ಅಪಘಾತಗಳು ಸಂಭವಿಸಿದೆ. ಜು.4ರಂದು ಕೆ.ಆರ್ ವೃತ್ತದಲ್ಲಿ ಎರಡು ಇ.ವಿ ಬಸ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದರು. ಇದಾದ ಎರಡೇ ದಿನಗಳ ಅಂತರದಲ್ಲಿ ರಾಜಾಜಿನಗರದಲ್ಲಿ ಅಪಘಾತ ಸಂಭವಿಸಿತ್ತು. ಆಗ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದೀಗ ನಿನ್ನೆ ಕೆ.ಆರ್ ವೃತ್ತದಲ್ಲಿ ಸಂಭವಿಸಿದ ಅಪಘಾತಕ್ಕೆ ಕಾಯಕ ಜೀವಿಯೇ ಬಲಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net