

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ಅಲಹಾಬಾದ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಮಾರ್ಗ ಮಧ್ಯೆ ಲೆವೆಲ್ ಕ್ರಾಸಿಂಗ್ ಎದುರಾಯಿತು. ಸಚಿವರ ಕಾರು ಕ್ರಾಸಿಂಗ್ ಬಳಿ ಬರುತ್ತಿದಾಗಲೇ ರೈಲು ಬರುವ ಸೂಚನೆ ಬಂದ ಕಾರಣ ಲೈನ್ವ್ಯಾನ್ ಗೇಟ್ ಹಾಕಿದ. ರೈಲ್ವೆ ಸಚಿವರೇ ಕಾರಿನಲ್ಲಿ ಇರುವುದರಿಂದ ಅವರನ್ನು ಕಾಯಿಸಬಾರದೆಂದು ಜತೆಗೆ ಬಂದಿದ್ದ ಅಧಿಕಾರಿಗಳು ಹೇಳಿದರೂ ಆತ ಗೇಟ್ ತೆರೆಯಲು ನಿರಾಕರಿಸಿದ. ಅವನ ‘ಉದ್ಧಟತನ’ದಿಂದ ಕುಪಿತರಾದ ಅಧಿಕಾರಿಗಳು ಕಾರಿನಲ್ಲಿ ಕುಳಿತಿದ್ದ ಶಾಸ್ತ್ರಿ ಅವರಿಗೆ ದೂರು ಕೊಟ್ಟರು. ಶಾಸ್ತ್ರಿ ಅವರು ಆಗ ಏನನ್ನೂ ಹೇಳಲಿಲ್ಲ. ದೆಹಲಿಗೆ ವಾಪಸಾದ ನಂತರ ಆ ಲೈನ್ವ್ಯಾನ್ಗೆ ಬಡ್ತಿ ನೀಡಿದ ಆದೇಶ ಬಂತು! ಕರ್ತವ್ಯ ನಿಷ್ಠೆಯನ್ನು ಶಾಸ್ತ್ರಿ ಅವರು ಸಚಿವರ ಪ್ರತಿಷ್ಠೆಗಿಂತಲೂ ಹೆಚ್ಚಿನದೆಂದು ಭಾವಿಸಿದ್ದರು.
ಶಾಸ್ತ್ರಿಯವರು ಪ್ರತಿ ತಿಂಗಳು ತಮ್ಮ ವೇತನವನ್ನು ಮನೆ ನಿಭಾಯಿಸಲು ಪತ್ನಿಗೆ ಕೊಡುತ್ತಿದ್ದರು. ಒಂದು ಸಲ ತಿಂಗಳ ಕೊನೆಗೆ ಶಾಸ್ತ್ರೀಜಿ ಮನೆಯಲ್ಲಿದ್ದಾಗ ಯಾರೋ ಕೆಲವರು ಧಾರ್ವಿುಕ ಸಂಸ್ಥೆಯ ಕಟ್ಟಡದ ವಿಚಾರ ಮುಂದಿಟ್ಟುಕೊಂಡು ದೇಣಿಗೆ ಕೇಳಲು ಬಂದರು. ಶಾಸ್ತ್ರಿಯವರ ಬಳಿ ಹಣ ಇರಲಿಲ್ಲ. ಪತ್ನಿ ಲಲಿತಾ ಶಾಸ್ತ್ರಿ ತಾವು ಉಳಿಸಿದ್ದ ಹಣದಲ್ಲಿ 20 ರೂ. ತಂದು ಕೊಟ್ಟರು. ಅವರು ಹೋದ ನಂತರ ಶಾಸ್ತ್ರೀಜಿ ತಮ್ಮ ಪತ್ನಿಗೆ ‘20 ರೂಪಾಯಿ ಎಲ್ಲಿಂದ ಬಂತು?’ ಎಂದು ಕೇಳಿದರು. ‘ತಿಂಗಳ ಖರ್ಚಿನಲ್ಲಿ ಉಳಿತಾಯವಾಗಿದ್ದ ಪುಡಿಗಾಸು ಕೂಡಿಸಿ ಕೊಟ್ಟೆ’ ಎಂದು ಪತ್ನಿ ಹೇಳಿದರು. ಆಗ ಶಾಸ್ತ್ರಿ ಸುಮ್ಮನಾದರು. ಮುಂದಿನ ತಿಂಗಳ ತಮ್ಮ ಸಂಬಳದಲ್ಲಿ 20 ರೂ. ಕಡಿಮೆ ಕೊಡಲು ಸರ್ಕಾರಕ್ಕೆ ತಿಳಿಸಿದರು!
ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸಂಧಾನಕ್ಕೆ ಅಂದಿನ ಸೋವಿಯತ್ ಒಕ್ಕೂಟದ ಅಧ್ಯಕ್ಷ ಅಲೆಕ್ಸ್ ಕೊಸಿಗಿನ್ ಆಸಕ್ತಿ ವಹಿಸಿ ಉಭಯ ದೇಶಗಳ ನಾಯಕರನ್ನು ತಾಷ್ಕೆಂಟಿಗೆ ಆಹ್ವಾನಿಸಿದರು. 1966ರ ಜ. 10ರಂದು ಕೊಸಿಗಿನ್ ಅವರ ಸಮ್ಮುಖದಲ್ಲಿ ಪಾಕಿಸ್ತಾನದ ಅಧ್ಯಕ್ಷ ಅಯೂಬ್ಖಾನ್ ಮತ್ತು ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ದಿನ ರಾತ್ರಿ ಶಾಸ್ತ್ರಿ ಅವರು ತಾಷ್ಕೆಂಟಿನಲ್ಲಿಯೇ ಮೃತಪಟ್ಟರು. ಶಾಸ್ತ್ರಿ ಅವರ ಪಾರ್ಥಿವ ಶರೀರವನ್ನು 12ರಂದು ಭಾರತಕ್ಕೆ ತಂದು ಯಮುನಾ ನದಿ ತೀರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಸಮಾಧಿ ಸ್ಥಳದ ಹೆಸರು ವಿಜಯ ಘಾಟ್. ಇದರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಒಟ್ಟು 9 ವರ್ಷ ಸೆರೆವಾಸ ಅನುಭವಿಸಿದ್ಧ ಧೀರ ನಾಯಕನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಅವಕಾಶದಿಂದ ಭಾರತ ವಂಚಿತವಾಯಿತು.
ಶಾಸ್ತ್ರಿ ಅವರು ನಿಧನರಾದಾಗ ಆಗಿನ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಅವರು ಲಲಿತಾ ಶಾಸ್ತ್ರಿ ಅವರಿಗೆ ರಾಜ್ಯಸಭೆಗೆ ನಾಮಕರಣ ಮಾಡುವುದಾಗಿ ಹೇಳಿದರು. ಆದರೆ ಅದನ್ನು ಒಪ್ಪದ ಲಲಿತಾ ಶಾಸ್ತ್ರಿ ತಮ್ಮ ನಿಧನಾನಂತರ ಶಾಸ್ತ್ರಿಯವರ ಸಮಾಧಿಯ ಪಕ್ಕದಲ್ಲಿಯೇ ತಮ್ಮ ಅಂತ್ಯಕ್ರಿಯೆ ನಡೆಸಬೇಕು ಎಂಬ ಕೋರಿಕೆಯನ್ನಷ್ಟೇ ಸಲ್ಲಿಸಿದರು. ದೇಶಕ್ಕಾಗಿ ಮುಡುಪಿಟ್ಟ ಬದುಕನ್ನು ಶ್ರೀಗಂಧದ ಚಕ್ಕೆಯಂತೆ ತೇಯ್ದವರು ಲಾಲ್ ಬಹದ್ದೂರ್ ಶಾಸ್ತ್ರಿ. ಅವರು ಉನ್ನತ ಆದರ್ಶಗಳನ್ನು ಬೋಧಿಸಲಿಲ್ಲ, ಅದನ್ನೇ ಬದುಕಿದರು.
ಶಾಸ್ತ್ರಿ ಅವರ ಜೀವನದುದ್ದಕ್ಕೂ ನಡೆದ ಹಲವಾರು ಘಟನೆಗಳು ನಿತ್ಯ ಸ್ಮರಣೆಗೆ ಅರ್ಹವಾದಂಥವು. ಸಾರ್ವಜನಿಕ ಜೀವನದಲ್ಲಿರುವವರ ನಡೆ-ನುಡಿ ಹೇಗಿರಬೇಕು ಎಂಬುದಕ್ಕೆ ಶಾಸ್ತ್ರಿ ಅವರು ಮಾದರಿಯಾಗಿದ್ದರು. ಅವರ ಮೇಲ್ಪಂಕ್ತಿ ಈಗಿನವರಿಗೂ ಅನುಕರಣೀಯವಾಗಿದೆ.
-ಗಿರೀಶ್ ಜೆ. ಬಡಿಗೇರ್ (ಲೇಖಕರು ಶಿಕ್ಷಕರು, ಹುಬ್ಬಳ್ಳಿ)