ವಿಶ್ವಸಂಸ್ಥೆ ಸಂವಾದದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಭಾಗಿ

ಕಾರ್ಯನಿರ್ವಾಹಕ ನಿರ್ದೇಶಕ ನವೀನ ನೀರದ ದಾಸ ಅಭಿಪ್ರಾಯ ಮಂಡನೆ
Executive Director Naveen Neerada Dasa, Prof. Suryadeva, and others participated on behalf of The Akshaya Patra Foundation in a United Nations dialogue on development held in Geneva.
ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಅಭಿವೃದ್ಧಿ ಕುರಿತ ಸಂವಾದದಲ್ಲಿ ಅಕ್ಷಯ ಪಾತ್ರ ೌಂಡೇಶನ್ ಪರವಾಗಿ ಕಾರ್ಯನಿರ್ವಾಹಕ ನಿರ್ದೇಶಕ ನವೀನ ನೀರದ ದಾಸ, ಪ್ರೊ. ಸೂರ್ಯದೇವಾ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಜಿನೀವಾದ ಪಲೈಸ್‌ದೆ ನೇಷನ್ಸ್‌ನಲ್ಲಿ ಮಂಗಳವಾರ (ನ. 24) ನಡೆದ ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದಗಳ ಅಂಗವಾಗಿ ಆಯೋಜಿಸಿದ್ದ ಜವಾಬ್ದಾರಿಯುತ ಉದ್ಯಮ ಪದ್ಧತಿಗಳು ಕುರಿತ ಪ್ಯಾನಲ್ ಚರ್ಚೆಯಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಭಾಗವಹಿಸಿ ತನ್ನ ಅಭಿಪ್ರಾಯ ಮಂಡಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿಯ ಹಕ್ಕಿನ ವಿಶೇಷ ವರದಿಗಾರ ಪ್ರೊ. ಸೂರ್ಯ ದೇವಾ ಆಯೋಜಿಸಿದ್ದ ಈ ಚರ್ಚೆ, ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಮಾನವ ಹಕ್ಕುಗಳ ವೇದಿಕೆಯ ಭಾಗವಾಗಿತ್ತು. ಉದ್ಯಮ ಮಾದರಿ, ಆಡಳಿತ ವ್ಯವಸ್ಥೆ, ಪ್ರೋತ್ಸಾಹಕ ಕ್ರಮಗಳು ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಮಾನವೀಯ ಮತ್ತು ಪರಿಸರ ಜವಾಬ್ದಾರಿಗಳನ್ನು ಅಳವಡಿಸಿಕೊಳ್ಳುವ ಕುರಿತು ಸಂವಾದ ನಡೆಯಿತು.

ಅಕ್ಷಯ ಪಾತ್ರ ಫೌಂಡೇಶನ್‌ನ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ ನೀರದ ದಾಸ ಮಾತನಾಡಿ, ಶಾಲಾ ಮಕ್ಕಳಿಗೆ ಊಟ ಒದಗಿಸುವುದು ಕೇವಲ ಆಹಾರ ವಿತರಣೆಯಲ್ಲ, ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯವಸ್ಥಿತ ಸಾಮಾಜಿಕ ಮಧ್ಯಸ್ಥಿಕೆ. ಇದು ಪೌಷ್ಟಿಕಾಂಶದ ಭದ್ರತೆ ಒದಗಿಸುವುದರ ಜತೆಗೆ ಸಾಮಾಜಿಕ ಸುರಕ್ಷತಾ ಕವಚವಾಗಿಯೂ ಕಾರ್ಯನಿರ್ವಹಿಸುತ್ತದೆ. ಕಳೆದ 26 ವರ್ಷಗಳಿಂದ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಕ್ಷಯ ಪಾತ್ರ ಸಂಸ್ಥೆ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯಶಸ್ವಿಯಾಗಿದ್ದು, ಮಕ್ಕಳಿಗೆ ನೀಡುವ ಊಟ ಸುಸ್ಥಿರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ ಎಂದು ವಿವರಿಸಿದರು.

ವಿವಿಧ ವಲಯಗಳ ನಡುವಿನ ಪರಸ್ಪರ ಕಲಿಕೆಯ ಮಹತ್ವವನ್ನು ಪ್ರಸ್ತಾಪಿಸಿದ ಅವರು, ಹಲವು ಕಂಪನಿಗಳು ಮಾನವೀಯ ಮತ್ತು ಪರಿಸರ ಸಂಬಂಧಿತ ಅಂಶಗಳನ್ನು ತಮ್ಮ ಉದ್ಯಮ ಮಾದರಿಗಳಲ್ಲಿ ಅಳವಡಿಸಿಕೊಂಡು ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಯಶಸ್ವಿ ಮಾದರಿಗಳನ್ನು ಇತರ ಸಂಸ್ಥೆಗಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು.