

ಬೆಂಗಳೂರು: ರಾಜ್ಯದಲ್ಲಿ 319 ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ನಡೆದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, 88,450 ಅಭ್ಯರ್ಥಿಗಳ ಪೈಕಿ 4,697 ಮಂದಿ ಮುಖ್ಯಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಈ ಬಾರಿ ಫಲಿತಾಂಶ ಪ್ರಕಟಣೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ವಿವಾದ, ಅಪನಂಬಿಕೆ ತೊಡೆದು ಹಾಕುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನ ಮಾಡಿದೆ. ಇದೇ ಮೊದಲ ಬಾರಿಗೆ ಮುಖ್ಯಪರೀಕ್ಷೆಗೆ ಆಯ್ಕೆಯಾದ ಮತ್ತು ಎಲ್ಲ ಅಭ್ಯರ್ಥಿಗಳ ಅಂಕ ಬಹಿರಂಗ ಮಾಡಲಾಗಿದೆ. ಜಾತಿ ಮತ್ತು ಪ್ರವರ್ಗಗಳ ಕಟಾಫ್ ಅಂಕಗಳನ್ನು ಪ್ರಕಟಿಸಿ ಗೊಂದಲ ನಿವಾರಣೆಗೆ ಪ್ರಯತ್ನಿಸಲಾಗಿದೆ.
ಒಟ್ಟು 319 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇವುಗಳಲ್ಲಿ 297 ಹುದ್ದೆಗಳು ಉಳಿಕೆ ಮೂಲ ವೃಂದದ (ಆರ್ಪಿಸಿ) ಹಾಗೂ 22 ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದದ (ಕೆಕೆಸಿ) ಪಾಲಿಗೆ ಸೇರಿವೆ. 4,697 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಅರ್ಹತೆ ಪಡೆದಿದ್ದು, ಆರ್ಪಿಸಿಯಲ್ಲಿ 4,367 ಮತ್ತು ಕೆಕೆಸಿಯಲ್ಲಿ 330 ಮಂದಿ ಇದ್ದಾರೆ.
ಹುದ್ದೆಗಳ ಸಂಖ್ಯೆಯ 15 ಪಟ್ಟು ಅಭ್ಯರ್ಥಿಗಳನ್ನು ಮುಖ್ಯಪರೀಕ್ಷೆಗೆ ಪರಿಗಣಿಸುವ ನಿಯಮದಂತೆ 4,785 ಮಂದಿ ಆಯ್ಕೆಯಾಗಬೇಕಿತ್ತು. ಆದರೆ ಮೂರು ವಿಭಾಗಗಳಲ್ಲಿ ಸಾಕಷ್ಟು ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ ಪಟ್ಟಿಯಲ್ಲಿ 88 ಕಡಿಮೆಯಾಗಿ 4,697ಕ್ಕೆ ನಿಂತಿದೆ. ಸಾಮಾನ್ಯ ಅರ್ಹತೆಯ ತೃತೀಯ ಲಿಂಗಿ ವರ್ಗದಲ್ಲಿ 5 ಹುದ್ದೆಗೆ 23, ಪರಿಶಿಷ್ಟ ಪಂಗಡದ ಅಂಧ ಮತ್ತು ದೃಷ್ಟಿದೋಷ ವರ್ಗದಲ್ಲಿ 3 ಹುದ್ದೆಗೆ 14 ಹಾಗೂ ಪ್ರವರ್ಗ-2ಬಿ ದೃಷ್ಟಿದೋಷ ವರ್ಗದಲ್ಲಿ 1 ಹುದ್ದೆಗೆ 10 ಅಭ್ಯರ್ಥಿಗಳು ಮಾತ್ರ ಲಭ್ಯರಿದ್ದರು. ಈ ಹಂತದಲ್ಲಿ ಹುದ್ದೆಗಳನ್ನು ಬೇರೆ ವರ್ಗಕ್ಕೆ ವರ್ಗಾಯಿಸಿಲ್ಲ, ಅಂತಿಮ ಆಯ್ಕೆ ಹಂತದಲ್ಲಿ ಇದನ್ನು ನಿರ್ಧರಿಸಲಾಗುತ್ತದೆ.
ಅಂಕ ಕಡಿತ: 250ಕ್ಕೂ ಹೆಚ್ಚು ಅಂಕ ಗಳಿಸಿದವರು 15 ಮಂದಿ ಇದ್ದು, ಬಹುತೇಕರಿಗೆ ಪತ್ರಿಕೆ-2 ಹೆಚ್ಚು ಅಂಕ ತಂದುಕೊಟ್ಟಿದೆ. ಸರಾಸರಿ 62.5 ಅಂಕ ಬಂದರೆ ಪತ್ರಿಕೆ-1ರಲ್ಲಿ 45.1 ಅಂಕ ಬಂದಿದೆ (ತಲಾ 200ರಲ್ಲಿ). ತಪ್ಪು ಉತ್ತರಕ್ಕೆ 0.5 ಅಂಕ ಕಡಿತ ಇರುವುದರಿಂದ 31 ಮಂದಿಯ ಒಟ್ಟು ಅಂಕ ಋಣಾತ್ಮಕವಾಗಿದ್ದು, ಕನಿಷ್ಠ ಅಂಕ 63 ಆಗಿದೆ.
ಪ್ರಶ್ನೆ ಸಂಖ್ಯೆ (ಕ್ಯೂ) 60ರಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧ 1. ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. 2. 2026-27ನೇ ಸಾಲಿನಲ್ಲಿ ಮಾಸಿಕ ಅಕ್ಕಿ ವಿತರಣೆಯ ಬದಲಾಗಿ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ಇಂದಿರಾ ಫುಡ್ ಕಿಟ್ ವಿತರಿಸಲು ಸರ್ಕಾರ ಉದ್ದೇಶಿಸಿದೆ. 3. ಇಂದಿರಾ ಫುಡ್ ಕಿಟ್ ವಿತರಣೆಗೆ ವಾರ್ಷಿಕ 6,200 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ 3 ಹೇಳಿಕೆಗಳೂ ಸರಿಯಾಗಿವೆ ಎಂಬುದು ಬಜೆಟ್ ಪುಸ್ತಕದ ಆಧಾರದ ಮೇಲೆ ಸ್ಪಷ್ಟವಾಗಿತ್ತು. ಆದರೆ, ಕೆಪಿಎಸ್ಸಿ ತನ್ನ ಕೀ ಉತ್ತರದಲ್ಲಿ ಮೊದಲನೇ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸಮ್ಮತಿಸಿದ ಕೆಪಿಎಸ್ಸಿ, ಮೂರು ಉತ್ತರಗಳು ಸರಿ ಎಂದು ಪರಿಗಣಿಸಿ ಅಂಕ ನೀಡಿದೆ.
2024ರ ಪರೀಕ್ಷೆಗೆ ಹೋಲಿಸಿದರೆ ಎಲ್ಲ ವರ್ಗಗಳ ಕಟ್ಆಫ್ ಏರಿಕೆಯಾಗಿದೆ. ಸಾಮಾನ್ಯ ಅರ್ಹತೆ ಕಟಾಫ್ 195ರಿಂದ 206.5ಕ್ಕೆ (11.5 ಅಂಕ) ಹೆಚ್ಚಿದ್ದರೆ, ಏಳು ಮೀಸಲು ವರ್ಗಗಳ ಕಟಾಫ್ ಸರಾಸರಿ 35 ಅಂಕ ಏರಿದೆ. ಪರಿಶಿಷ್ಟ ಪಂಗಡದಲ್ಲಿ 131.5ರಿಂದ 184.5ಕ್ಕೆ (53 ಅಂಕ) ಅತಿ ಹೆಚ್ಚು ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಅರ್ಹತೆ ಮತ್ತು ಮೀಸಲು ವರ್ಗಗಳ ನಡುವಿನ ಅಂತರ ಸುಮಾರು 40 ಅಂಕದಿಂದ 17 ಅಂಕಕ್ಕೆ ಇಳಿದಿದೆ. ಕಲ್ಯಾಣ ಕರ್ನಾಟಕ ವೃಂದದ 13 ವರ್ಗಗಳ ಪೈಕಿ 8ರಲ್ಲಿ ಕಟಾಫ್ ಆರ್ಪಿಸಿಗಿಂತ ಹೆಚ್ಚಿದೆ. ಮುಂದೆ ಪ್ರತಿ ಹುದ್ದೆಗೆ ಮೂವರಂತೆ 957 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗಲಿದ್ದಾರೆ.
ಒಟ್ಟು 400 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಆನಂದ ಮುತ್ತಪ್ಪ ಪೂಜೇರಿ ಅವರು 264.5 ಅಂಕ (ಪತ್ರಿಕೆ-1ರಲ್ಲಿ 131.5, ಪತ್ರಿಕೆ-2ರಲ್ಲಿ 133) ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ಅಭಿಲಾಷ್ ಜೆ.ಎಸ್. (263) ದ್ವಿತೀಯ ಹಾಗೂ ಮಲ್ಲಿಕಾರ್ಜುನ (262.5) ತೃತೀಯ ಸ್ಥಾನ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಅವರೇ ಮೊದಲ ಸ್ಥಾನದಲ್ಲಿದ್ದಾರೆ. 15 ಮಂದಿ 250ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಸಾಮಾನ್ಯ ಅರ್ಹತೆ (ಜನರಲ್ ಮೆರಿಟ್) ವರ್ಗದ ಕಟಾಫ್ ಆರ್ಪಿಸಿಯಲ್ಲಿ 206.5 ಹಾಗೂ ಕೆಕೆಸಿಯಲ್ಲಿ 210 ಅಂಕಕ್ಕೆ ನಿಂತಿದೆ. ಆರ್ಪಿಸಿಯಲ್ಲಿ 41 ಅಭ್ಯರ್ಥಿಗಳು ಇಷ್ಟೇ ಅಂಕ ಗಳಿಸಿದ್ದು, ಸಮಾನ ಅಂಕ ಬಂದಾಗ ವಯಸ್ಸಿನಲ್ಲಿ ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗಿದೆ. 206.5 ಅಥವಾ ಹೆಚ್ಚು ಅಂಕ ಗಳಿಸಿದವರು 1,062 ಮಂದಿ, ಇದು ಅಂಕ ಪಡೆದ 88,415 ಅಭ್ಯರ್ಥಿಗಳ ಪೈಕಿ ಅಗ್ರ ಶೇ 1.2ರಲ್ಲಿ ಬರುತ್ತದೆ.
ಪರೀಕ್ಷೆಗೆ ಒಟ್ಟು 1,47,067 ಅರ್ಜಿಗಳು ಬಂದಿದ್ದವು. ಅಂದರೆ ಪ್ರತಿ ಹುದ್ದೆಗೆ ಸರಾಸರಿ 461 ಅರ್ಜಿ. ಇವರಲ್ಲಿ 88,450 ಮಂದಿ (ಶೇ 60.1) ಪತ್ರಿಕೆ-1ಕ್ಕೆ ಹಾಜರಾಗಿದ್ದರು. ಹಾಜರಾದವರ ಪೈಕಿ ಶೇ 5.3 ಮಂದಿ ಮಾತ್ರ ಮುಖ್ಯಪರೀಕ್ಷೆಗೆ ಆಯ್ಕೆಯಾಗಿದ್ದಾರೆ.