ಪ್ರತಿನಿತ್ಯ ವಾಣಿಜ್ಯ ಬಳಕೆಗೆ 16,105 ಎಲ್ಪಿಜಿ ಸಿಲಿಂಡರ್ ಸರಬರಾಜು: ಗೇಲ್‌ನಲ್ಲಿ ನೋಂದಣಿ ಕಡ್ಡಾಯ

 ಕೆ.ಎಚ್. ಮುನಿಯಪ್ಪ
ಕೆ.ಎಚ್. ಮುನಿಯಪ್ಪ
Published on
ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದಿಂದ ನಲುಗುತ್ತಿರುವ ಸೇವಾ ವಲಯಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ‘ವಾಣಿಜ್ಯ ಸಿಲಿಂಡರ್‌ಗಳ ಸರಬರಾಜು ನೀತಿ’ ಜಾರಿಗೆ ತಂದಿದ್ದು, ಹಾಗಾಗಿ, ಅಗತ್ಯ ಸೇವೆಗಳಡಿ ರಾಜ್ಯದಲ್ಲಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 16,105 ಎಲ್ಪಿಜಿ ಸಿಲಿಂಡರ್ ಪೂರೈಸುವುದಾಗಿ ಆಹಾರ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಾಣಿಜ್ಯ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ವಾರದೊಳಗೆ ಗೇಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ಹಿಂದೆ ಶೇ.20 ಕೋಟಾ ಅಡಿ ಪ್ರತಿನಿತ್ಯ ವಾಣಿಜ್ಯ ಬಳಕೆಗೆ 9,544 ಎಲ್ಪಿಜಿ ಸಿಲಿಂಡರ್ ವಿತರಿಸಲಾಗುತ್ತಿತ್ತು. ಇದೀಗ ಆ ಕೋಟಾದ ಮಿತಿಯನ್ನು ಶೇ.40ಕ್ಕೆ ಹೆಚ್ಚಿಸಲಾಗಿದ್ದು, ಅದರಂತೆ, 16,105 ಎಲ್ಪಿಜಿ ಸಿಲಿಂಡರ್ ಸರಬರಾಜು ಮಾಡಲಾಗುವುದು.ಇದರಲ್ಲಿ ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್ ಮತ್ತು ಆಹಾರ ಸಂಸ್ಕರಣಾ ಘಟಕಗಳು ಸೇರಿದಂತೆ ವಿವಿಧ ಸೇವಾ ವಲಯಗಳಿಗೆ 10 ಸಾವಿರ ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉದ್ಭವಿಸಿರುವ ಕಮರ್ಷಿಯಲ್ ಸಿಲಿಂಡರ್ ಸಮಸ್ಯೆ ನಿವಾರಣೆಗೆ ಕೇಂದ್ರದೊಂದಿಗೆ ನಿರಂತರವಾಗಿ ಸಮನ್ವಯತೆ ಸಾಧಿಸಲಾಗುತ್ತಿದೆ. ವಾಣಿಜ್ಯ ಸಿಲಿಂಡರ್, ಆಟೋ ಎಲ್ಪಿಜಿ ಸರಬರಾಜು ವಿತರಣೆಯಲ್ಲಿ ತುಸು ಸುಧಾರಣೆಯಾಗುತ್ತಿದೆ. ಹೋಟೆಲ್ ಹಾಗೂ ಸಂಬಂಧಿತ ಉದ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಶೇ.50 ಎಲ್ಪಿಜಿ ಸಿಲಿಂಡರ್ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಎಲ್ಪಿಜಿ ಸಿಲಿಂಡರ್ ಸಮಸ್ಯೆ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.( ಬಿಪಿಸಿಎಲ್) ಹಾಗೂ ಗೇಲ್‌ನ ಅಧಿಕಾರಿಗಳು ಜೊತೆ 2ನೇ ಬಾರಿ ಸಭೆ ಮಾಡಿದ್ದೇನೆ.ಸಭೆಯಲ್ಲಿ ಸಿಲಿಂಡರ್ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್, ದಿವ್ಯ,ಮುರಳಿಚಾರ್, ಸುಬ್ರತ್ ಚಟರ್ಜಿ, ರಾಜೇಶ್‌ಸಿಂಗ್, ಸಂಜಯ್ ಕುಮಾರ್ ಸಿಂಗ್ ಮತ್ತಿತರರಿದ್ದರು.
ಸಚಿವರ ಮಾತಿನ ಮುಖ್ಯಾಂಶಗಳು
* ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರದ ಮಾರ್ಗಸೂಚಿಯಂತೆ ಎಲ್ಲ ಕಮರ್ಷಿಯಲ್ ಸಿಲಿಂಡರ್ ಬಳಕೆದಾರರು ಗೇಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು
* ವಾರದೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಪೈಪ್‌ಲೈನ್ ಆಧಾರಿತ ಗ್ಯಾಸ್ ಪೂರೈಕೆಗೆ ಅನುಕೂಲ
* ಹಿಂದೆ ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದ್ದ ಸಾವಿರ ಸಿಲಿಂಡರ್ ಮಿತಿಯನ್ನು 10 ಸಾವಿರಕ್ಕೆ ಏರಿಕೆ
* ಕೃಷಿ, ಫಾರ್ಮಾಸ್ಯೂಟಿಕಲ್, ಮೀನುಗಾರಿಕೆ ಸೇರಿ ಇತರೆ ಅಗತ್ಯ ವಲಯಗಳಿಗೆ ಆದ್ಯತೆ ಮೇರೆಗೆ 500 ಸಿಲಿಂಡರ್ ಮೀಸಲು
* ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ಪೂರೈಕೆ ಸ್ಥಿತಿ, ಸುಧಾರಣೆ ಕುರಿತು ಸಮೀಕ್ಷೆ
* ತ್ವರಿತ ಕ್ರಮದಿಂದ ರಾಜ್ಯದಲ್ಲಿ ಎಲ್‌ಪಿಜಿ ಸಮಸ್ಯೆ ಹಂತ ಹಂತವಾಗಿ ಪರಿಹಾರವಾಗುವ ನಿರೀಕ್ಷೆ
* 10 ದಿನಗಳಿಂದ ಈವರೆಗೆ ರಾಜ್ಯದಲ್ಲಿ 30,51,045 ಗೃಹ ಬಳಕೆ, 67,641 ವಾಣಿಜ್ಯ ಬಳಕೆಯ ಸಿಲಿಂಡರ್ ವಿತರಣೆ
* 40,083 ಆಟೋ ಎಲ್ಪಿಜಿ ಸರಬರಾಜು
* ರಾಜ್ಯದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದ್ದ 1448 ಗೃಹ ಬಳಕೆ ಸಿಲಿಂಡರ್ ವಶ
* ಕೇಂದ್ರದ ಆದೇಶ ಬೆನ್ನಲ್ಲೇ ತೈಲ ಕಂಪನಿಗಳ ಜೊತೆ ಸಭೆ
* ಸಮಸ್ಯೆ ಬಗೆಹರಿಸುವಂತೆ ಹೋಟೆಲ್ ಮಾಲೀಕರಿಂದ ಪದೇಪದೆ ಪತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net