117 ಕೋಟಿ ರೂ. ಮೌಲ್ಯದ 58.83 ಕೆ.ಜಿ ಹೆರಾಯಿನ್ ನಾಶ

ಪ್ರಸಕ್ತ ವರ್ಷದಲ್ಲಿ 300 ಕೋಟಿ ರೂ. ಡ್ರಗ್ಸ್ ಧ್ವಂಸ
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ಮಾದಕ ವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬೆಂಗಳೂರು ವಲಯ ಘಟಕವು 117 ಕೋಟಿ ರೂ. ಮೌಲ್ಯದ 58.83ಕೆ.ಜಿ. ಹೆರಾಯಿನ್ ಅನ್ನು ನಾಶಪಡಿಸಿದೆ.

ನಗರದ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಘಟಕದಲ್ಲಿ ಶುಕ್ರವಾರ ಈ ಕಾರ್ಯಾಚರಣೆ ನಡೆಸಲಾಗಿದೆ. ನ್ಯಾಯಾಲಯ ವಿಚಾರಣೆ ಪೂರ್ಣಗೊಂಡಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಹೆರಾಯಿನ್ ಅನ್ನು ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) 1985ರ ಪ್ರಕಾರ ಹೆರಾಯಿನ್ ನಾಶಪಡಿಸಿದೆ.

ಈ ಪ್ರಕ್ರಿಯೆಯನ್ನು ಔಷಧ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಕೈಗೊಳ್ಳಲಾಗಿದೆ. ಎನ್‌ಸಿಬಿ ದಕ್ಷಿಣ ಪಶ್ಚಿಮ ವಲಯದ ಉಪ ಮಹಾನಿರ್ದೇಶಕ ಎಂ. ವಿಶಾಲ್ (ಐಆರ್‌ಎಸ್) ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಮಾದಕ ವಸ್ತು ವಿಲೇವಾರಿ ಸಮಿತಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿತು. ಎನ್‌ಸಿಬಿ ಬೆಂಗಳೂರು ವಲಯ ನಿರ್ದೇಶಕ ಸಚಿನ್ ಘೋರ್ಪಡೆ (ಐಪಿಎಸ್) ಹಾಗೂ ಬೆಂಗಳೂರು ನಗರ ಅಪರಾಧ ವಿಭಾಗ-2ರ ಡಿಸಿಪಿ ಪಿ.ರಾಜಾ ಇಮಾಮ್ ಕಾಸಿಮ್ ಸಮಿತಿಯ ಸದಸ್ಯರಾಗಿದ್ದರು.

2,086 ಕೆ.ಜಿ. ಮಾದಕ ವಸ್ತು ನಾಶ:

ಬೆಂಗಳೂರು ವಲಯ ಎನ್‌ಸಿಬಿ ಘಟಕವು ಪ್ರಸಕ್ತ ವರ್ಷದಲ್ಲಿ ಈವರೆಗೆ ಒಟ್ಟು 2,086 ಕೆ.ಜಿ. ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಿದೆ. ಇವುಗಳ ಅಂದಾಜು ಮಾರುಕಟ್ಟೆ ಮೌಲ್ಯ 300 ಕೋಟಿ ರೂ. ಆಗಿದೆ. ಇದೀಗ 117 ಕೋಟಿ ರೂ. ಮೌಲ್ಯದ ಹೆರಾಯಿನ್ ನಾಶಪಡಿಸಿರುವುದು ಮಾದಕ ವಸ್ತುಗಳ ವಿಲೇವಾರಿ ಕಾರ್ಯಾಚರಣೆಯಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ದೀರ್ಘಕಾಲ ಸಂಗ್ರಹಿಸಿಡುವುದರಿಂದ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸುವುದು ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.ಮಾದಕ ವಸ್ತುಗಳ ಕಳ್ಳಸಾಗಣೆ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಎನ್‌ಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.