1000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ ಪತ್ತೆ

ಅಂತಾರಾಷ್ಟ್ರೀಯ ಸೈಬರ್ ವಂಚಕರ ಸಂಪರ್ಕ, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರ ಬಂಧನ , 320 ಸಿಮ್, 10 ಡಿವೈಜ್‌ಗಳು ಪತ್ತೆ,
Cybere praud
Cybere praud
Published on: 

ಬೆಂಗಳೂರು: ದೇಶ ಹಾಗೂ ವಿದೇಶದಲ್ಲಿ ಅಮಾಯಕರಿಗೆ ಕರೆಮಾಡಿ ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ಹೆಸರಿನಲ್ಲಿ 1 ಸಾವಿರ ಕೋಟಿಗೂ ಹೆಚ್ಚು ವಂಚನೆ ಮಾಡಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚಕರ ಜಾಲವನ್ನು ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ನಗರದ ವೈಟ್‌ಫೀಲ್ಡ್ ವಿಭಾಗದ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿರುವ ಎರಡು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಡಿಜಿಟಲ್ ಅರೆಸ್ಟ್ ವಂಚನೆಗಾಗಿಯೇ ಕಾಲ್‌ಸೆಂಟರ್ ಮಾದರಿಯಲ್ಲಿ ನಕಲಿ ಸಿಮ್‌ಗಳ ಡಿವೈಜ್ (ಜಿಎಸ್‌ಎಂ ಗೇಟವೇ) ಸಾಧನ ಬಳಕೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ, ಮಹಾರಾಷ್ಟ್ರದ ತಿರೋಡಾ ಗೊಂಡಿಯಾ ಜಿಲ್ಲೆಯ ನಾಲ್ವರು ವಂಚಕರನ್ನು ಬಂಧಿಸಿದ್ದಾರೆ.

ಕಾಡುಗೋಡಿ ಅಪಾರ್ಟ್‌ಮೆಂಟ್‌ನಲ್ಲಿ 32 ಸಿಮ್ ಸ್ಲಾಟ್‌ಗಳಿರುವ 6 ಸಿಮ್ ಬಾಕ್ಸ್ ಸಾಧನ, 192 ಸಿಮ್ ಸ್ಲಾಟ್‌ಗಳಲ್ಲಿ ವಿವಿಧ ದೂರಸಂಪರ್ಕ ತಂತ್ರಜ್ಞಾನ, ಇ-ಸಿಮ್ ಆಧಾರಿತ ವಸ್ತುಗಳು ಪತ್ತೆಯಾಗಿವೆ.

ಪಟ್ಟಂದೂರು ಅಗ್ರಹಾರದ ಅಪಾರ್ಟ್‌ಮೆಂಟ್‌ನಲ್ಲಿ 32 ಸಿಮ್ ಸ್ಲಾಟ್‌ಗಳಿರುವ ನಾಲ್ಕು ಸಿಮ್ ಬಾಕ್ಸ್, 128 ಸಿಮ್ ಸೇರಿ ಒಟ್ಟು 10 ಕನ್ವಟರ್ ಬಾಕ್ಸ್ ಹಾಗೂ 320 ಸಿಮ್ ಕಾರ್ಡ್, ಸಿಸಿ ಕ್ಯಾಮರಾ, ಗಣಕಯಂತ್ರ ಸೇರಿ ಡಿಜಿಟಲ್ ಅರೆಸ್ಟ್‌ಗೆ ಬೇಕಾಗುವ ಇತರೆ ತಾಂತ್ರಿಕ ಸಾಧನಗಳು ಪತ್ತೆಯಾಗಿವೆ.

ಡಿಜಿಟಲ್ ಅರೆಸ್ಟ್ ಸೂತ್ರದಾರಿಗಳು:

ಈ ಜಾಲವು ದೇಶದ ವಿವಿಧೆಡೆ ನಡೆದಿರುವ ಡಿಜಿಟಲ್ ಅರೆಸ್ಟ್, ಸೆಕ್ಸ್‌ಟಾರ್ಷನ್ ಹಾಗೂ ಇತರ ಹಣಕಾಸು ಸೈಬರ್ ಅಪರಾಧಗಳಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತಪಡಿಸಿರುವ ತನಿಖಾಧಿರಿಗಳು, ಡಿಜಿಟಲ್ ಅರೆಸ್ಟ್ ಪ್ರಕರಗಳ ಸೂತ್ರಧಾರಿಗಳಾಗಿದ್ದಾರೆ ಎನ್ನಲಾಗಿದೆ. ಇವರು ನಡೆಸಿರುವ ವಂಚನೆಯ ವ್ಯಾಪ್ತಿ ಮತ್ತು ಸಂಭವನೀಯ ಆರ್ಥಿಕ ನಷ್ಟವು ಸಾವಿರಾರು ಕೋಟಿ ದಾಟಿರುವುದು ಇವರಗೆ ನಡೆಸಿರುವ ಪ್ರಾಥಮಿಕ ತನಿಖೆಯಿಂದ ಅಂದಾಜಿಸಲಾಗಿದೆ.

ವಂಚಕರ ಕಾರ್ಯವಿಧಾನ, ಪತ್ತೆ ಹೇಗೆ?

ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಬೆಂಗಳೂರು ವಿಭಾಗದ ನೋಡಲ್ ಅಧಿಕಾರಿ ಎಂ.ರಾಘವೇಂದ್ರ ಎಂಬುವರು ಆಗಸ್ಟ್ 26ರಂದು ವೈಟ್‌ಫಿಲ್ಡ್ ಸೈಬರ್ ಅಪರಾಧ ವಿಭಾಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ದೂರಸಂಪರ್ಕ ಇಲಾಖೆ ಕರ್ನಾಟಕದ ಸಹಕಾರದೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿದರು. ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿನ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಸಿಮ್ ಬಾಕ್ಸೃ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ದಾಳಿ ವೇಳೆ ಎರಡೂ ಕೇಂದ್ರಗಳನ್ನು ಒಬ್ಬನೇ ನಿರ್ವಹಣೆ ಮಾಡುತ್ತಿದ್ದನು. ಸಿಮ್ ಬಾಕ್ಸ್ (ಡಿವೈಜ್)ನಲ್ಲಿ ಒಂದೇ ಬಾರಿಗೆ ನೂರಾರು ಸಿಮ್ ಅಳವಡಿಸಿ, ಅವುಗಳ ಮೂಲಕ ದೂರವಾಣಿ ಸಂಪರ್ಕಗಳನ್ನು ನಿರ್ವಹಿಸಲು ಬಳಸುವ ವ್ಯವಸ್ಥೆ ಮಾಡಿಕೊಂಡಿದ್ದರು.

ವಿದೇಶದಿಂದ ತರಿಸಿಕೊಂಡಿದ್ದ ಡಿವೈಜ್ ಸಾಧನ ದೇಶದಲ್ಲಿ ಅಧಿಕೃತ ಹಾಗೂ ಕಾನೂನುಬದ್ಧವಾಗಿ ಬಳಕೆ ಅವಕಾಶವಿದೆ. ಆದರೆ, ಸೈಬರ್ ವಂಚಕರು ಅವುಗಳನ್ನು ನಿಯಮ ಬಾಹಿರವಾಗಿ ಹಾಗೂ ಅನಧಿಕೃತವಾಗಿ ಬಳಸಿದಾಗ ಕರೆಗಳ ಮೂಲ ಕಂಡು ಹಿಡಿಯುವುದು ಕಸ್ಟವಾಗುತ್ತಿತ್ತು. ವಂಚನೆ ಕೃತ್ಯಕ್ಕೆ ಬಳಸುವ ಈ ತಂತ್ರಜ್ಞಾನದಿಂದ ವ್ಯಕ್ತಿಗಳ ಜತೆ ಹಾಗೂ ಅಂತಾರಾಷ್ಟ್ರೀಯ ಕರೆ, ಸಂವಹನ ನಡೆಸಿದರು ಅದರ ಮೂಲ ಪತ್ತೆ ಹಚ್ಚಲು ಆಗುತ್ತಿರಲಿಲ್ಲ.

ಆದರೆ, ಏರ್‌ಟೆಲ್ ಸರ್ವರ್‌ನಲ್ಲಿ ಒಂದೆ ಬಾರಿಗೆ ನೂರಾರು ಸಿಮ್‌ಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಯಾಗಿದೆ. ಇದರ ಜಾಡು ಹಿಡಿದು ತನಿಖೆ ಕೈಗೊಂಡಾಗ ಸಿಮ್‌ಬಾಕ್ಸ್‌ಗಳು ವಂಚನಾತ್ಮಕ ಕರೆ, ಡಿಜಿಟಲ್ ಅರೆಸ್ಟ್‌ಗೆ ಬಳಕೆಯಾಗುತ್ತಿರುವುದು ಕಂಡು ಬಂದಿದೆ.

ಎಫ್ಎ​ಸ್‌ಎಲ್‌ಗೆ ರವಾನೆ:

ಸೈಬರ್ ಅಪರಾಧಗಳಿಗೆ ಬಳಕೆ ಮಾಡಿಕೊಂಡಿರುವ ಈ ಸಾಧನಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗಿತ್ತು? ಯಾವ ರೀತಿಯ ಕರೆಗಳು ಅಥವಾ ಸಂದೇಶಗಳನ್ನು ನಿರ್ವಹಿಸಲಾಗುತ್ತಿತ್ತು ಮತ್ತು ಅವುಗಳಿಂದ ಎಷ್ಟು ಜನರಿಗೆ ವಂಚನೆಯಾಗಿದೆ ಎಂಬುದನ್ನು ವಿಧಿವಿಜ್ಞಾನ ಹಾಗೂ ತಾಂತ್ರಿಕ ಪರಿಶೀಲನೆಯ ಮೂಲಕ ಖಚಿತಪಡಿಸಿಕೊಳ್ಳಲು ಸೈಬರ್ ಕಮಾಂಡ್ ಅಧಿಕಾರಿಗಳು ಮುಂದಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದುವರೆದ ತನಿಖೆ:

ಇಷ್ಟೊಂದು ಸಿಮ್ ಕಾರ್ಡ್‌ಗಳ ಖರೀದಿ ಮತ್ತು ಅವುಗಳನ್ನು ಇ-ಸಿಮ್ ಪ್ರೊಫೈಲ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡುತ್ತಿರುವ ಬಗ್ಗೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ತಿರೋಡಾ ಪ್ರದೇಶದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತ ನಾಲ್ವರ ಪಾತ್ರ, ಬೆಂಗಳೂರಿನಲ್ಲಿ ಈ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ವಂಕಚರಿಂದ ಯಾವ ರಾಜ್ಯದಲ್ಲಿ ಹೆಚ್ಚು ಜನ ವಂಚನೆಗೆ ಒಳಗಾಗಿದ್ದಾರೆ. ಹಣ ಕಳೆದುಕೊಂಡ ಸಂತ್ರಸ್ತರು ಯಾರು? ವಂಚನೆಯಿಂದ ಬಂದ ಹಣ ಯಾವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ? ಇದರ ಹಿಂದೆ ಸಂಘಟಿತ ಸೈಬರ್ ಅಪರಾಧ ಗುಂಪುಗಳಿವೆಯೇ? ಎಂಬ ವಿವಿಧ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

ಸೈಬರ್ ವಂಚನೆಯಲ್ಲಿ ತೋಡಗಿದ್ದ ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಲಾಗಿದೆ. 320 ಸಿಮ್ ಸಂಪರ್ಕಗಳನ್ನು ನಿರ್ವಹಿಸುವ ಸಾಮರ್ಥ್ಯದ ವ್ಯವಸ್ಥೆ ಪತ್ತೆಯಾಗಿದೆ. ನೂರಾರು ಕೋಟಿ ರೂಪಾಯಿಗಳ ವಂಚನೆಯಾಗಿದೆ. ಈ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ. ತನಿಖೆ ನಂತರ ಇನ್ನಷ್ಟು ವಿಷಯಗಳು ತಿಳಿಯಲಿವೆ.

_ಡಾ.ಪ್ರಣವ್ ಮೋಹಾಂತಿ,

ಸೈಬರ್ ಕಮಾಂಡ್ ಘಟಕದ ಪೊಲೀಸ್ ಮಹಾನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net