

ಜಮ್ಮು: ಪಾಕಿಸ್ಥಾನ ಮೂಲದ ಜೈಷ್ ಏ ಮೊಹಮ್ಮದ್ (ಜೆಇಎಂ)ಗೆ ಸೇರಿದ ಉಗ್ರ ನೆಲೆಯೊಂದನ್ನು ರಕ್ಷಣಾ ಪಡೆ ನಾಶಗೊಳಿಸಿದ್ದು, ಆರು ಉಗ್ರ ಸಹಚರರನ್ನು ಬಂಧಿಸಿದೆ. ಈ ಸಹಚರರು ಸಕ್ರಿಯ ಉಗ್ರರಿಗೆ ಹಣ, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಡ್ರಗ್ಸ್ ವ್ಯವಹಾರಗಳನ್ನು ಮಾಡುವವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರನ್ನು ಕ್ರಲ್ಪೋರಾದ ಮುದಾಸ್ಸಿರ್ ಫಯಾಜ್, ವತೂರಾದ ಶಬೀರ್ ಗನಿಯೆ, ಕುಪ್ವಾರಾದ ಸಗೀರ್ ಅಹಮದ್ ಪೊಸ್ವಾಲ್, ಶೋಪಿಯಾನ್ನ ಇಸಾಕ್ ಭಟ್, ಅರ್ಷಿದ್ ಥೋಕರ್ ಮತ್ತು ಚಾದೂರ ಪ್ರದೇಶದ ಬಾಲಕ ಎಂದು ಗುರುತಿಸಲಾಗಿದೆ.
ಬಂಧಿತರು ಪಾಕಿಸ್ಥಾನಿ ಮೂಲದವರ ಜತೆಗೆ ಸಂಪರ್ಕದಲ್ಲಿದ್ದು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದವರು. ಸಕ್ರಿಯ ಉಗ್ರರಿಗೆ ಎಲ್ಲ ರೀತಿಯ ನೆರವನ್ನೂ ಇವರು ಕೊಡುತ್ತಿದ್ದರು. ಬಂಧಿತರ ವಿಚಾರಣೆ ನಂತರದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶ್ವಾಸಾರ್ಹ ಮಾಹಿತಿ ಆಧರಿಸಿ ಪೊಲೀಸರು, ಸೇನೆ ಮತ್ತು ಸಿಆರ್ಪಿಎಫ್ನ ಜಂಟಿ ಕಾರ್ಯಪಡೆ ಈ ಕಾರ್ಯಾಚರಣೆಯನ್ನು ನಡೆಸಿತ್ತು. ಬದ್ಗಾಮ್ನ ಚಾದೂರಾ ಪ್ರದೇಶದಲ್ಲಿ ಈ ಉಗ್ರ ಸಹಚರರನ್ನು ಬಂಧಿಸಿದ್ದು ಅವರಿಂದ ಒಂದು ಚೀನಿ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್, ಒಂದು ಕಿಲೋ ಹೆರಾಯಿನ್ ವಶಪಡಿಸಿಕೊಂಡಿದೆ. (ಏಜೆನ್ಸೀಸ್)