ಅಮೃತಸರದ ಎಎಸ್‌ಐ ಮೇಲೆ ಗುಂಡಿನ ದಾಳಿ ಪ್ರಕರಣ
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ
ಪೊಲೀಸ್ ಹಾಗೂ ಆರೋಪಿ ನಡುವೆ ಗುಂಡಿನ ಚಕಮಕಿ
Punjab Encounter: ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಎಎಸ್‌ಐ ಮೇಲೆ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಕರಣಬೀರ್ ಸಿಂಗ್ ಅಲಿಯಾಸ್ ನಂದಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಶನಿವಾರ ಜಾಂಡರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗುಂಡಿನ ಚಕಮಕಿ ನಡೆದಿದೆ.
ಸೆಪ್ಟೆಂಬರ್ 11ರಂದು ಅಮೃತಸರದಲ್ಲಿ ಕರ್ತವ್ಯದಲ್ಲಿದ್ದ ASI ಜಸ್ವಂತ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು ಕರಣಬೀರ್ ಸಿಂಗ್ ಹಾಗೂ ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಪ್ರಮುಖ ಆರೋಪಿಗಳು ಎಂದು ಗುರುತಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿತ್ತು.
ಇನ್ನೂ, ಆಯುಧ ವಶಪಡಿಸಿಕೊಳ್ಳಲು ಕರಣಬೀರ್‌ನನ್ನು ಮಜಿಠಾ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ವೇಳೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಬಳಿಕ ಆತನಿಗಾಗಿ ವಿಶೇಷ ತಂಡಗಳು ಹುಡುಕಾಟ ನಡೆಸುತ್ತಿದ್ದವು.
ಜಾಂಡರ್ನಲ್ಲಿ ಕರಣಬೀರ್ ಇರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ವಾಹನ ತಪಾಸಣೆ ವೇಳೆ ಬೈಕ್‌ನಲ್ಲಿ ಬಂದಿದ್ದ ಆರೋಪಿಗೆ ಪೊಲೀಸರು ನಿಲ್ಲುವಂತೆ ಹೇಳಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೈಕ್ ಜಾರಿಬಿದ್ದಿದ್ದು, ಬಳಿಕ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಒಬ್ಬ ಪೊಲೀಸ್ ಸಿಬ್ಬಂದಿಯ ಎದೆಗೆ ಗುಂಡು ತಗುಲಿದ್ದು, ಬುಲೆಟ್‌ಪ್ರೂಫ್ ಜಾಕೆಟ್‌ನಿಂದ ಪ್ರಾಣ ಉಳಿದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಕರಣಬೀರ್‌ನ ಎದೆ ಮತ್ತು ಕಾಲಿಗೆ ಗುಂಡು ತಗುಲಿತ್ತು ಗಾಯಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ದದ ಬಳಿಕ ವೈದ್ಯರು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಇನ್ನು, ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ಮುಂದುವರಿದಿದೆ.
ಎನ್‌ಕೌಂಟರ್ ಸ್ಥಳದಿಂದ 9 ಎಂಎಂ ಗ್ಲಾಕ್ ಪಿಸ್ತೂಲ್, .30 ಬೋರ್ ಪಿಸ್ತೂಲ್, ಆರು ಗುಂಡುಗಳು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಣಬೀರ್ ವಿರುದ್ಧ ಈ ಹಿಂದೆಯೂ ಪ್ರಕರಣಗಳಿದ್ದವು. ವಿದೇಶದಲ್ಲಿರುವ ಕೆಲವರು ಹಣದ ಆಮಿಷವೊಡ್ಡಿ ಯುವಕರನ್ನು ಅಪರಾಧದತ್ತ ಸೆಳೆಯುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಿವಿಯ ಮೇಲಿನ ಈ ಪುಟ್ಟ ಆಭರಣ ಈಗ ಸಖತ್ ಟ್ರೆಂಡಿಂಗ್; ಬುಗಡಿ ಕಥೆ ಗೊತ್ತಾ? | Bugadi History
ಅಪರಾಧ ಮತ್ತು ಗ್ಯಾಂಗ್‌ಗಳ ಹಿಂದೆ ಹೋಗದಂತೆ ಯುವಕರಿಗೆ ಐಜಿ ಭುಲ್ಲರ್ ಎಚ್ಚರಿಕೆ ನೀಡಿದ್ದಾರೆ. ಅಪರಾಧದ ದಾರಿ ಜೈಲು ಅಥವಾ ಸಾವಿಗೆ ಕರೆದೊಯ್ಯಬಹುದು. ಇದರಿಂದ ಯುವಕರು ಮಾತ್ರವಲ್ಲ, ಅವರ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)