ಮೊದಲ ಬಾರಿಗೆ ಅರ್ಜಿ ಕರೆಯದೇ ಪುರಸ್ಕೃತರ ಆಯ್ಕೆ: ಸಚಿವ ಶಿವರಾಜ್ ತಂಗಡಗಿ ಮಾಹಿತಿ

ಮೊದಲ ಬಾರಿಗೆ ಅರ್ಜಿ ಕರೆಯದೇ ಪುರಸ್ಕೃತರ ಆಯ್ಕೆ: ಸಚಿವ ಶಿವರಾಜ್ ತಂಗಡಗಿ ಮಾಹಿತಿ
Published on

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅರ್ಜಿ ಕರೆಯದೇ ಎಲೆಮರೆ ಕಾಯಿಯಂತಿದ್ದ 70 ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ನೀಡುವಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ ಅವರು, 2024ರಲ್ಲಿ ಸಲ್ಲಿಸಲಾಗಿದ್ದ ಮತ್ತು ಸಚಿವರು, ಶಾಸಕರು ಶಿಫಾರಸು ಮಾಡಿದ್ದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ತಜ್ಞರ ಸಮಿತಿ ಮುಂದೆ 2114 ಅರ್ಜಿಗಳು ಇದ್ದವು. ಸಮಿತಿ, ಸಿಎಂ, ಡಿಸಿಎಂ ಅವರೊಂದಿಗೆ ಸಭೆಗಳನ್ನು ನಡೆಸಿ ಅಂತಿಮವಾಗಿ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪೈಕಿ ಶೇ.80 ಸಾಧಕರನ್ನು ಯಾವುದೇ ಶಿಫಾರಸು ಮತ್ತು ಅರ್ಜಿ ಸ್ವೀಕರಿಸದೇ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯದ ಇಬ್ಬರನ್ನು ಗುರುತಿಸಲಾಗಿದೆ. 70 ಪ್ರಶಸ್ತಿಗಳಲ್ಲಿ 13 ಮಹಿಳಾ ಸಾಧಕರು ಇದ್ದಾರೆ. ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ ಎಂದು ತಿಳಿಸಿದರು.

ಕರ್ನಾಟಕ ರತ್ನ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೇ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡದೆ ಪ್ರತ್ಯೇಕ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸಿಎಂ ಅವರೊಂದಿಗೂ ಚರ್ಚಿಸಿದ್ದು, ದಿನಾಂಕ ನಿಗದಿ ಮಾಡಬೇಕಿದೆ ಎಂದು ತಂಗಡಗಿ ಹೇಳಿದರು. ವಿಧಾನಸೌಧ ಆವರಣದಲ್ಲಿರುವ ಭುವನೇಶ್ವರಿ ಪ್ರತಿಮೆ ಬಳಿ ಬರಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುವ ಬಗ್ಗೆಯೂ ಸಿಎಂ ಜತೆ ಚರ್ಚಿಸಲಾಗಿದೆ. ವಿಧಾನಸೌಧದ ಭದ್ರತೆ ಸಮಸ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಸದ್ಯದಲ್ಲಿಯೇ ಪ್ರವಾಸಿ ಸ್ಥಳವಾಗಿ ಪರಿವರ್ತನೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಮೈಸೂರಿಗೆ ಅತಿ ಹೆಚ್ಚು

ಬಾಗಲಕೋಟೆ ಜಿಲ್ಲೆಗೆ 2, ಬಳ್ಳಾರಿ-1, ಬೆಳಗಾವಿ-3, ಬೆಂ.ನಗರ-5, ಬೆಂ. ಗ್ರಾಮಾಂತರ- 3, ಬೀದರ್-1, ಚಾಮರಾಜನಗರ-1, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-1, ಚಿತ್ರದುರ್ಗ-1, ದಾವಣಗೆರೆ-1, ಧಾರವಾಡ-1, ದಕ್ಷಿಣ ಕನ್ನಡ-6, ಗದಗ-1, ಹಾಸನ-2, ಹಾವೇರಿ-1, ಕಲಬುರಗಿ- 1, ಕೋಲಾರ-1, ಕೊಪ್ಪಳ-3, ಕೊಡಗು-2, ಮಂಡ್ಯ-1, ಮೈಸೂರು-6, ರಾಯಚೂರು-2, ಬೆಂಗಳೂರು ದಕ್ಷಿಣ-2, ಶಿವಮೊಗ್ಗ-3, ತುಮಕೂರು-4, ಉತ್ತರ ಕನ್ನಡ-1, ಉಡುಪಿ-3, ವಿಜಯಪುರ-3, ಯಾದಗಿರಿ-2, ವಿಜಯನಗರ-2 ಮತ್ತು ಹೊರನಾಡು/ಹೊರದೇಶದ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.

ಕ್ರೀಡಾ ಸಾಧನೆಗಾಗಿ ಅರ್ಜುನ ಪ್ರಶಸ್ತಿಯ ಗೌರವ ಹೊಂದಿದ್ದರೂ, ರಾಜ್ಯದ ಪ್ರಶಸ್ತಿ ಇಲ್ಲ ಎಂಬ ಕೊರಗಿತ್ತು. ಆದರೆ ರಾಜ್ಯೋತ್ಸವ ಪ್ರಶಸ್ತಿ ಅದನ್ನು ನೀಗಿಸಿದೆ. ಸರ್ಕಾರ ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಕೃತಜ್ಞನಾಗಿದ್ದು, ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಇನ್ನೂ ಉತ್ತಮ ಸೇವೆ ನೀಡಲು ಇದು ಸ್ಪೂರ್ತಿ ತುಂಬಲಿದೆ. | ಆಶಿಶ್ ಕುಮಾರ್ ಬಲ್ಲಾಳ್, ಭಾರತ ಹಾಕಿ ತಂಡದ ಮಾಜಿ ಆಟಗಾರ ರಂಗಭೂಮಿ ಕಲೆಗೆ ಸೇವೆ ಸಲ್ಲಿಸಿದ್ದಕ್ಕೆ ಸಾರ್ಥಕ ಎನಿಸುತ್ತಿದೆ. ಎರಡು ವರ್ಷಗಳಲ್ಲಿ ಎರಡು ಮಹತ್ತರ ಪ್ರಶಸ್ತಿಗಳು ಲಭಿಸಿದ್ದು, ರಂಗ ಭೂಮಿ ಸೇವೆಗೆ ಉತ್ತೇಜನ ನೀಡಿದೆ. ನಿರ್ಲಕ್ಷ್ಯ್ಕೆ ಒಳಗಾಗುತ್ತಿರುವ ಉತ್ತರ ಕರ್ನಾಟಕದ ರಂಗ ಭೂಮಿ ಕಲೆಗೆ, ಕಲಾವಿದರಿಗೆ ಈ ಪ್ರಶಸ್ತಿ ಮತ್ತಷ್ಟು ಹುಮ್ಮಸ್ಸು ತಂದಿದೆ. | ಎಲ್.ಬಿ. ಶೇಖ (ಮಾಸ್ತರ್) ರಂಗತಜ್ಞ ಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಖುಷಿ ಯಾಗಿದೆ. 46 ವರ್ಷ ಕ್ರೀಡಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ. | ಎಂ. ಯೋಗೇಂದ್ರ ಮಾಸ್ಟರ್ ಅಥ್ಲೆಟಿಕ್ಸ್ ಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net