Salman Khan: ಸಲೀಂ ಖಾನ್ ಜತೆ 5 ವರ್ಷ ಮಾತು ಬಿಟ್ಟಿದ್ದ ಸಲ್ಮಾನ್ ತಾತ! ಮದುವೆಗೆ ವಿರೋಧಿಸಿದ್ದೇಕೆ?

ಸಲ್ಮಾನ್ ಖಾನ್ ತಂದೆ-ತಾಯಿಯ ಮದುವೆಗೆ ಅವರ ತಾತ ವಿರೋಧ ವ್ಯಕ್ತಪಡಿಸಿದ್ದರು. ಸಲೀಂ ಖಾನ್ ಜತೆ ಐದು ವರ್ಷ ಮಾತು ಬಿಟ್ಟಿದ್ದ ಘಟನೆಯನ್ನು ಸಲ್ಮಾನ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
Salman Khan
ಸಲ್ಮಾನ್ ಖಾನ್ ಜತೆ ಅವರ ತಾತ-ಅಜ್ಜಿ
Published on: 

Hindi Bigg Boss: ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಾಗ ತಮ್ಮ ಜೀವನದ ಹಲವು ಘಟನೆಗಳನ್ನು ಹಂಚಿಕೊಳ್ತಿರುತ್ತಾರೆ. ಇದೀಗ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ತಂದೆ ಸಲೀಂ ಖಾನ್ ಮತ್ತು ತಾಯಿ ಸಲ್ಮಾ ಖಾನ್ ಮದುವೆಯ ಬಗ್ಗೆ ಒಂದು ವಿಚಾರ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಅವರ ತಾತ ಈ ಮದುವೆಗೆ ಒಪ್ಪಿರಲಿಲ್ಲವಂತೆ. ಅಷ್ಟೇ ಅಲ್ಲ, ಸಲೀಂ ಖಾನ್ ಜತೆ ಬರೋಬ್ಬರಿ ಐದು ವರ್ಷ ಮಾತನ್ನೇ ಬಿಟ್ಟಿದ್ದರಂತೆ.

‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮಾಡುವ ತಪ್ಪುಗಳು ಮತ್ತು ನಂತರ ಪಶ್ಚಾತ್ತಾಪ ಪಡುವ ಬಗ್ಗೆ ಸಲ್ಮಾನ್ ಮಾತನಾಡುತ್ತಿದ್ದರು. ಈ ವೇಳೆ ತಮ್ಮ ಜೀವನದ ವಿಚಾರವನ್ನೂ ಹಂಚಿಕೊಂಡರು. ಇತ್ತೀಚೆಗೆ ತಂದೆ ಸಲೀಂ ಖಾನ್ ಬಳಿ ಕ್ಷಮೆ ಕೇಳಿದ್ದಾಗಿ ತಿಳಿಸಿದ ಅವರು, ತಮ್ಮಿಂದ ಯಾವತ್ತಾದರೂ ತಂದೆಯ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಬೇಕು ಎಂದು ಕೇಳಿಕೊಂಡಿದ್ದರಂತೆ.

ಸಲೀಂ ಖಾನ್ ಮದುವೆಗೆ ತಾತ ವಿರೋಧಿಸಿದ್ದೇಕೆ?

ಸಲೀಂ ಖಾನ್ ಚಿತ್ರರಂಗದಲ್ಲಿದ್ದ ಕಾರಣ, ಮಗಳು ಆ ವಾತಾವರಣದಲ್ಲಿ ಹೇಗೆ ಜೀವನ ನಡೆಸುತ್ತಾಳೆ ಎಂಬ ಆತಂಕ ಸಲ್ಮಾನ್ ತಾತನಿಗಿತ್ತು. ಆದರೆ ಇದು ಧರ್ಮದ ವಿಚಾರಕ್ಕೆ ಸಂಬಂಧಿಸಿದ್ದಲ್ಲ ಎಂದು ಸಲ್ಮಾನ್ ಸ್ಪಷ್ಟಪಡಿಸಿದ್ದಾರೆ. ಇನ್ನು, ಸಲ್ಮಾನ್ ತಾಯಿಯ ಸಹೋದರ-ಸಹೋದರಿಯರು ಸಲೀಂ ಖಾನ್ ಅವರನ್ನು ಇಷ್ಟಪಟ್ಟಿದ್ದರಿಂದ ಮದುವೆಗೆ ಒಪ್ಪಿಗೆ ನೀಡಿದ್ದರಂತೆ.

5 ವರ್ಷ ಸಲೀಂ ಖಾನ್ ಜತೆ ಮಾತು ಬಿಟ್ಟಿದ್ದ ತಾತ

ಸಲ್ಮಾನ್ ಹೇಳಿದ ಪ್ರಕಾರ, ಅವರ ತಾತ ಬರೋಬ್ಬರಿ ಐದು ವರ್ಷ ಸಲೀಂ ಖಾನ್ ಜತೆ ಮಾತನಾಡಿರಲಿಲ್ಲ. ಸೋಹೈಲ್ ಖಾನ್ ಹುಟ್ಟಿದಾಗ ಮಹಿಮ್‌ನಿಂದ ಬಾಂದ್ರಾಗೆ ಸಿಹಿತಿಂಡಿ ತೆಗೆದುಕೊಂಡು ಬಂದಿದ್ದರಂತೆ. ಮೊಮ್ಮಕ್ಕಳು ಬೆಳೆಯುವುದನ್ನು ನೋಡದೆ, ಸಲೀಂ ಖಾನ್ ಜತೆ ಮಾತನಾಡದೆ ಇಷ್ಟು ವರ್ಷ ಕಳೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರಂತೆ. ಈ ಪಶ್ಚಾತ್ತಾಪ ಕೊನೆಯ ಉಸಿರಿನವರೆಗೂ ಅವರನ್ನು ಕಾಡಿತ್ತು ಎಂದು ಸಲ್ಮಾನ್ ನೆನಪಿಸಿಕೊಂಡಿದ್ದಾರೆ.

ಇನ್ನು, ಒಮ್ಮೆ ಅಥವಾ ಎರಡು ಬಾರಿ ಸಲ್ಮಾನ್ ತಂದೆ-ತಾಯಿ ನಡುವೆ ಜಗಳವಾದಾಗ ತಾಯಿ ತವರು ಮನೆಗೆ ಹೋಗಿದ್ದರಂತೆ. ಆಗ ತಾತ ಅವರನ್ನು ಮನೆಯೊಳಗೆ ಸೇರಿಸದೆ, ಗಂಡನ ಮನೆಗೆ ವಾಪಸ್ ಹೋಗುವಂತೆ ಹೇಳಿದ್ದರಂತೆ.

ಇದನ್ನೂ ಓದಿ: Greenland: ಗ್ರೀನ್‌ಲ್ಯಾಂಡ್‌ನಲ್ಲಿ ಕಾರುಗಳಿಗಿಂತ ದೋಣಿಗಳೇ ಹೆಚ್ಚು! ಶೇ.80ರಷ್ಟು ಮಂಜುಗಡ್ಡೆ ಇರುವ ಈ ದ್ವೀಪದ ವಿಶೇಷತೆಗಳೇನು?

ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಪ್ರೇಮಕಥೆ

ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಎದುರು-ಎದುರಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. ಸಲ್ಮಾ ಅವರ ಮೊದಲ ಹೆಸರು ಸುಶೀಲಾ ಚರಕ್. ಇಬ್ಬರೂ 1964ರಲ್ಲಿ ಮದುವೆಯಾದರು. ಈ ದಂಪತಿಗೆ ಸಲ್ಮಾನ್, ಅರ್ಬಾಜ್, ಸೋಹೈಲ್ ಮತ್ತು ಅಲ್ವಿರಾ ಎಂಬ ನಾಲ್ವರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net