Greenland: ಗ್ರೀನ್‌ಲ್ಯಾಂಡ್‌ನಲ್ಲಿ ಕಾರುಗಳಿಗಿಂತ ದೋಣಿಗಳೇ ಹೆಚ್ಚು! ಶೇ.80ರಷ್ಟು ಮಂಜುಗಡ್ಡೆ ಇರುವ ಈ ದ್ವೀಪದ ವಿಶೇಷತೆಗಳೇನು?

ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ನ ಶೇ.80ರಷ್ಟು ಪ್ರದೇಶ ಮಂಜುಗಡ್ಡೆಯಿಂದ ಆವೃತವಾಗಿದೆ. ಸಂಪರ್ಕ ರಸ್ತೆಗಳಿಲ್ಲದ ಈ ದ್ವೀಪದ ಜನಸಂಖ್ಯೆ, ಸಾರಿಗೆ ಮತ್ತು ಪ್ರವಾಸಿ ಆಕರ್ಷಣೆಗಳ ಮಾಹಿತಿ ಇಲ್ಲಿದೆ.
Greenland is the largest island in the world
ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌
Published on: 

World's largest island: ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ತನ್ನ ಮಂಜುಗಡ್ಡೆ, ಕಡಿಮೆ ಜನಸಂಖ್ಯೆ ಮತ್ತು ವಿಭಿನ್ನ ಜೀವನಶೈಲಿಯಿಂದ ಗಮನ ಸೆಳೆಯುತ್ತದೆ. ಈ ದ್ವೀಪದ ಶೇ.80ರಷ್ಟು ಭಾಗ ಮಂಜುಗಡ್ಡೆಯಿಂದ ಆವೃತವಾಗಿದೆ. ಅಚ್ಚರಿಯ ಸಂಗತಿ ಅಂದ್ರೆ, ಇಲ್ಲಿನ ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣಕ್ಕೆ ಹೋಗಲು ಸಂಪರ್ಕ ರಸ್ತೆಗಳೇ ಇಲ್ಲ.

ಯುರೋಪ್‌ನ ಪಶ್ಚಿಮ ಭಾಗದಷ್ಟು ವಿಶಾಲವಾಗಿರುವ ಗ್ರೀನ್‌ಲ್ಯಾಂಡ್‌ನಲ್ಲಿ ಸುಮಾರು 56 ಸಾವಿರ ಜನರು ವಾಸಿಸುತ್ತಿದ್ದಾರೆ. ಪ್ರತಿ ಚದರ ಕಿಲೋಮೀಟರ್‌ಗೆ ಸರಾಸರಿ 0.03 ಜನರಷ್ಟೇ ಇದ್ದಾರೆ. ಕೆಲವು ಕಡೆ ಮಂಜುಗಡ್ಡೆಯ ಪದರ 3,500 ಮೀಟರ್‌ವರೆಗೂ ದಪ್ಪವಾಗಿದೆ.

ಸಂಪರ್ಕ ರಸ್ತೆಗಳೇ ಇಲ್ಲ

ಗ್ರೀನ್‌ಲ್ಯಾಂಡ್‌ನಲ್ಲಿ ಪಟ್ಟಣಗಳ ನಡುವೆ ರಸ್ತೆ ಸಂಪರ್ಕ ಇಲ್ಲದ ಕಾರಣ ಸಮುದ್ರವೇ ಪ್ರಮುಖ ಸಾರಿಗೆ ಮಾರ್ಗ. ಹೀಗಾಗಿ ಇಲ್ಲಿ ಕಾರುಗಳಿಗಿಂತ ದೋಣಿಗಳನ್ನು ಹೊಂದಿರುವವರೇ ಹೆಚ್ಚು. ದೇಶದ ಅತಿ ಉದ್ದದ ಪಕ್ಕಾ ರಸ್ತೆಯ ಉದ್ದ ಸುಮಾರು 35 ಕಿಲೋಮೀಟರ್. ಕಂಗರ್ಲುಸ್ಸುವಾಕ್‌ ಸಮೀಪದ ಮಂಜುಗಡ್ಡೆಯ ಪ್ರದೇಶದಲ್ಲಿ ವಾಹನಗಳ ಪರೀಕ್ಷೆ ನಡೆಸಲು ವೋಕ್ಸ್‌ವ್ಯಾಗನ್ ಈ ರಸ್ತೆಯನ್ನು ನಿರ್ಮಿಸಿತ್ತು ಎಂದು ವರದಿಯೊಂದು ತಿಳಿಸಿದೆ.

ಉತ್ತರ ಅಮೆರಿಕದಿಂದ ಗ್ರೀನ್‌ಲ್ಯಾಂಡ್‌ಗೆ ನೇರ ವಿಮಾನ ಸಂಪರ್ಕ ಇಲ್ಲ. ಅಲ್ಲಿಗೆ ಹೋಗುವವರು ಡೆನ್ಮಾರ್ಕ್‌ನ ಕೋಪನ್‌ಹೇಗನ್ ಅಥವಾ ಐಸ್‌ಲ್ಯಾಂಡ್‌ನ ರೇಕ್‌ಜಾವಿಕ್ ಮೂಲಕ ಪ್ರಯಾಣಿಸಬೇಕು.

ಮಂಜುಗಡ್ಡೆಯ ನಾಡಿಗೆ ಗ್ರೀನ್‌ಲ್ಯಾಂಡ್ ಹೆಸರು ಬಂದಿದ್ದು ಹೇಗೆ?

ಬಹುತೇಕ ಪ್ರದೇಶ ಮಂಜುಗಡ್ಡೆಯಿಂದ ಕೂಡಿದ್ದರೂ ಈ ದ್ವೀಪಕ್ಕೆ ಗ್ರೀನ್‌ಲ್ಯಾಂಡ್ ಎಂಬ ಹೆಸರು ಬಂದಿರುವುದು ವಿಶೇಷ. 10ನೇ ಶತಮಾನದ ಕೊನೆಯಲ್ಲಿ ವೈಕಿಂಗ್ ಎರಿಕ್ ದಿ ರೆಡ್ ಹೊಸ ಜನರನ್ನು ಇಲ್ಲಿ ನೆಲೆಸಲು ಆಕರ್ಷಿಸುವ ಉದ್ದೇಶದಿಂದ ಈ ಹೆಸರು ಇಟ್ಟಿದ್ದ ಎನ್ನಲಾಗಿದೆ. ಇಲ್ಲಿನ ಸ್ಥಳೀಯರು ತಮ್ಮ ನೆಲವನ್ನು ‘ಕಲಾಲ್ಲಿಟ್ ನುನಾತ್’ ಎಂದು ಕರೆಯುತ್ತಾರೆ.

ಗ್ರೀನ್‌ಲ್ಯಾಂಡ್‌ನಲ್ಲಿ ಆಧುನಿಕ ಜೀವನಶೈಲಿಯ ಜತೆಗೆ ಇನ್ಯೂಟ್ ಸಮುದಾಯದ ಸಂಪ್ರದಾಯಗಳೂ ಇಂದಿಗೂ ಉಳಿದಿವೆ. ಚಳಿಗಾಲದಲ್ಲಿ ಹಿಮದ ಮೇಲೆ ಪ್ರಯಾಣಿಸಲು ಸ್ಥಳೀಯರು ಸ್ಲೆಡ್ ನಾಯಿಗಳನ್ನು ಬಳಸುತ್ತಾರೆ. ಆರ್ಕ್ಟಿಕ್ ವೃತ್ತದ ಉತ್ತರ ಭಾಗದಲ್ಲಿ ಇತರ ತಳಿಯ ನಾಯಿಗಳನ್ನು ಕರೆತರುವುದಕ್ಕೂ ನಿರ್ಬಂಧವಿದೆ. ಕಯಾಕ್ ದೋಣಿಯ ಮೂಲವೂ ಇನ್ಯೂಟ್ ಜನರ ಸಂಪ್ರದಾಯಕ್ಕೆ ಸೇರಿದೆ.

ಸಾಹಸ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ

ಗ್ರೀನ್‌ಲ್ಯಾಂಡ್‌ಗೆ ಭೇಟಿ ನೀಡುವವರು ಬೃಹತ್ ಮಂಜುಗಡ್ಡೆಗಳನ್ನು ನೋಡಬಹುದು, ಪರ್ವತ ಪ್ರದೇಶಗಳಲ್ಲಿ ಚಾರಣ ಮಾಡಬಹುದು ಮತ್ತು ಉತ್ತರದ ಬೆಳಕಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಬೇಸಿಗೆಯಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನ ಬೆಳಕು ಕಾಣಸಿಗುತ್ತದೆ. ಈ ಸಮಯದಲ್ಲಿ ತಾಪಮಾನ 18ರಿಂದ 20 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಬಹುದು. ಚಳಿಗಾಲದಲ್ಲಿ ದೀರ್ಘಕಾಲ ಕತ್ತಲು ಆವರಿಸುವುದರಿಂದ ಉತ್ತರದ ಬೆಳಕನ್ನು ನೋಡುವ ಅವಕಾಶವೂ ಸಿಗುತ್ತದೆ.

ಇದನ್ನೂ ಓದಿ: ರಷ್ಯಾ ತೈಲ ಆಮದು ನಿಲ್ಲಿಸೋದು ಅಷ್ಟು ಸುಲಭವಲ್ಲ: ಭಾರತದ ಪರ ರೂಬಿಯೊ ಬ್ಯಾಟಿಂಗ್! | Russian oil imports

ವಿಶ್ವದ ಅತಿದೊಡ್ಡ ಸಂರಕ್ಷಿತ ವನ್ಯಪ್ರದೇಶವಾದ ಈಶಾನ್ಯ ಗ್ರೀನ್‌ಲ್ಯಾಂಡ್ ರಾಷ್ಟ್ರೀಯ ಉದ್ಯಾನವನ ಇಲ್ಲಿದೆ. ಜತೆಗೆ ಮೂರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಇವೆ. ಬಣ್ಣಬಣ್ಣದ ಮನೆಗಳು, ವನ್ಯಜೀವಿಗಳು ಮತ್ತು ಸ್ಥಳೀಯ ಆಹಾರ ಪದ್ಧತಿಗಳಿಂದ ಗ್ರೀನ್‌ಲ್ಯಾಂಡ್ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net