• ರಷ್ಯಾ ತೈಲ ಆಮದು ನಿಲ್ಲಿಸುವುದು ಭಾರತಕ್ಕೆ ತಕ್ಷಣ ಸಾಧ್ಯವಿಲ್ಲ ಎಂದ ರೂಬಿಯೊ
• ನಿರ್ಬಂಧ, ಸುಂಕಗಳ ಪರಿಣಾಮ ಪರಿಶೀಲಿಸಲು ಟ್ರಂಪ್ಗೆ 60 ದಿನಗಳ ಕಾಲಾವಕಾಶ
• ಭಾರತದ ಇಂಧನ ಭದ್ರತೆ, ಅಮೆರಿಕದೊಂದಿಗಿನ ಸಂಬಂಧಕ್ಕೆ ಆದ್ಯತೆ
Russian Oil Embargo: ರಷ್ಯಾದಿಂದ ತೈಲ ಆಮದು ನಿಲ್ಲಿಸುವುದು ಭಾರತಕ್ಕೆ ತಕ್ಷಣ ಸಾಧ್ಯವಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ರಷ್ಯಾ ಮೇಲಿನ ನಿರ್ಬಂಧ ಮತ್ತು ಇತರ ದೇಶಗಳ ಮೇಲಿನ ಸುಂಕದ ಪರಿಣಾಮ ಪರಿಶೀಲಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60 ದಿನಗಳ ಕಾಲಾವಕಾಶ ಬಯಸಿದ್ದಾರೆ.
ಉಜ್ಬೇಕಿಸ್ತಾನ ಮತ್ತು ಭಾರತ ಪ್ರವಾಸಕ್ಕೂ ಮುನ್ನ ಮಾತನಾಡಿದ ರೂಬಿಯೊ, ಭಾರತ ಬೇರೆ ಬೇರೆ ಮೂಲಗಳಿಂದ ಇಂಧನ ಪಡೆಯುತ್ತಿದ್ದರೂ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ. ತೈಲ ಆಮದಿನ ಮೂಲವನ್ನು ಒಂದೇ ದಿನದಲ್ಲಿ ಬದಲಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ.
ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದ ಅಮೆರಿಕದ ಮಸೂದೆಯಡಿ ಟ್ರಂಪ್ಗೆ ನಿರ್ಬಂಧ ಹಾಗೂ ಸುಂಕ ವಿಧಿಸುವ ಅಧಿಕಾರವಿದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ಕಾರಣ ನೀಡಿ ಶುಕ್ರವಾರ ಅವರು ನಿರ್ಬಂಧ ಮತ್ತು ಸುಂಕಗಳಿಂದ ವಿನಾಯಿತಿ ಘೋಷಿಸಿದ್ದಾರೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲದ ಮೇಲೆ ನಿರ್ಬಂಧ ವಿಧಿಸಿದವು. ಇದರಿಂದ ರಷ್ಯಾ ರಿಯಾಯಿತಿ ದರದಲ್ಲಿ ಏಷ್ಯಾದ ದೇಶಗಳಿಗೆ ತೈಲ ಮಾರಾಟ ಮಾಡಲು ಆರಂಭಿಸಿತು. ಕಡಿಮೆ ಬೆಲೆಯ ತೈಲದಿಂದ ಲಾಭ ಪಡೆದ ಭಾರತದ ತೈಲ ಸಂಸ್ಕರಣಾಗಾರಗಳು ರಷ್ಯಾದಿಂದ ಆಮದನ್ನು ಹೆಚ್ಚಿಸಿಕೊಂಡವು. ಇತ್ತೀಚಿನ ವರದಿಯ ಪ್ರಕಾರ, ಕಳೆದ ತಿಂಗಳು ಭಾರತ ದಿನಕ್ಕೆ ಸುಮಾರು 19 ಲಕ್ಷ ಬ್ಯಾರೆಲ್ ರಷ್ಯಾದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದು, ಇದು ದೇಶದ ಒಟ್ಟು ತೈಲ ಆಮದಿನ ಸುಮಾರು ಶೇ.35ರಷ್ಟಿತ್ತು.
ಅಮೆರಿಕದ ನಿರ್ಬಂಧ ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 140 ಕೋಟಿ ಜನರ ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ತಿಳಿಸಿತ್ತು.
ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಮೂಲಗಳಿಂದ ಇಂಧನ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲಾಗುವುದು. ಭಾರತದ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಸ್ಪಷ್ಟಪಡಿಸಿತ್ತು.(ಏಜೆನ್ಸೀಸ್)