RGUHS Menopause Care: ಮಹಿಳೆಯರ ಮೆನೋಪಾಸ್ ಹಾಗೂ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಆರ್‌ಜಿಯುಎಚ್‌ಎಸ್ ಇದೀಗ ವಿಶೇಷ ಗಮನ ಹರಿಸಲು ಮುಂದಾಗಿದೆ. ಮಹಿಳೆಯರಿಗೆ ಉತ್ತಮ ವೈದ್ಯಕೀಯ ಆರೈಕೆ, ಮೆನೋಪಾಸ್ ಕುರಿತು ಜಾಗೃತಿ, ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಒಳಗೊಂಡ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ.
ಆರ್‌ಜಿಯುಎಚ್‌ಎಸ್‌ನಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಹಿಳೆಯರಿಗೆ ಉತ್ತಮ ಮೆನೋಪಾಸ್ ಆರೈಕೆ ನೀಡುವ ಕುರಿತು ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಆರ್‌ಜಿಯುಎಚ್‌ಎಸ್ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಹಾಗೂ ಕರ್ನಾಟಕ ಸರ್ಕಾರದ ‘ಋತುತಾರೆ’ (Menopause Support) ಯೋಜನೆಯ ರಾಯಭಾರಿ, ನಟಿ ಮತ್ತು ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನಾ) ಭಾಗವಹಿಸಿದ್ದರು.
ಮಹಿಳೆಯರಿಗೆ ಮೆನೋಪಾಸ್ ಅವಧಿಯಲ್ಲಿ ಸುಲಭವಾಗಿ ಅಗತ್ಯ ಚಿಕಿತ್ಸೆ ಸಿಗುವಂತೆ ವಿಶೇಷ ಮೆನೋಪಾಸ್ ಕ್ಲಿನಿಕ್‌ಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೆನೋಪಾಸ್ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಹಾಗೂ ನರ್ಸಿಂಗ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವ ಯೋಜನೆಯೂ ಇದೆ.
ಮೆನೋಪಾಸ್ ಮತ್ತು ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯದ ಕುರಿತು ವೈದ್ಯಕೀಯ ಸಿಬ್ಬಂದಿಗೆ ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳು ಹಾಗೂ ಸಿಎಂಇ ಕಾರ್ಯಕ್ರಮ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ವೈದ್ಯಕೀಯ ಕಾಲೇಜುಗಳೊಂದಿಗೆ ಸಂಶೋಧನಾ ಸಹಯೋಗ ಬೆಳೆಸಿ, ಮೆನೋಪಾಸ್ ಆರೋಗ್ಯ ಕ್ಷೇತ್ರದ ಸಂಶೋಧನೆಗೆ ಉತ್ತೇಜನ ನೀಡುವ ಯೋಜನೆಯೂ ಇದೆ.
ಮೆನೋಪಾಸ್ ಮತ್ತು ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ವೃತ್ತಿಪರ ತರಬೇತಿಗಳನ್ನು ಅಭಿವೃದ್ಧಿಪಡಿಸಲು ಇಂಡಿಯನ್ ಮೆನೋಪಾಸ್ ಸೊಸೈಟಿ (IMS) ಜತೆ ಸಹಯೋಗದ ಸಾಧ್ಯತೆಯನ್ನೂ ಆರ್‌ಜಿಯುಎಚ್‌ಎಸ್ ಪರಿಶೀಲಿಸುತ್ತಿದೆ. ಇದರ ಮೂಲಕ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಮೆನೋಪಾಸ್ ಆರೈಕೆಯ ಬಗ್ಗೆ ಹೆಚ್ಚಿನ ವೃತ್ತಿಪರ ಜ್ಞಾನ ಮತ್ತು ತರಬೇತಿ ನೀಡಲು ಸಾಧ್ಯವಾಗಲಿದೆ.
ಕರ್ನಾಟಕ ಸರ್ಕಾರದ ‘ಋತುತಾರೆ’ ಮೆನೋಪಾಸ್ ಬೆಂಬಲ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸಭೆಯಲ್ಲಿ ಭಾಗವಹಿಸಿದ್ದರು. ಮೆನೋಪಾಸ್ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು, ಅಗತ್ಯ ಬೆಂಬಲ ನೀಡುವುದು ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ಸಿಗುವಂತೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೊದಲ ಹಂತದಲ್ಲಿ ಮೆನೋಪಾಸ್ ಕುರಿತು ಜಾಗೃತಿ, ವೈದ್ಯಕೀಯ ಸೇವೆಗಳು, ಆರೋಗ್ಯ ಸಿಬ್ಬಂದಿಗೆ ತರಬೇತಿ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಲು ಸಮಿತಿ ಶಿಫಾರಸು ಮಾಡಿದೆ. ಮುಂದಿನ ಹಂತದಲ್ಲಿ ಮೆನೋಪಾಸ್ ಮತ್ತು ಮಧ್ಯವಯಸ್ಸಿನ ಮಹಿಳೆಯರ ಆರೋಗ್ಯದ ಕುರಿತು ಆರ್‌ಜಿಯುಎಚ್‌ಎಸ್ ಫೆಲೋಶಿಪ್ ಕೋರ್ಸ್ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲಿದೆ.
ಮಹಿಳೆಯರಿಗೆ ಮೆನೋಪಾಸ್ ಬಗ್ಗೆ ಸರಿಯಾದ ಮಾಹಿತಿ, ಸುಲಭವಾಗಿ ಸಿಗುವ ಆರೋಗ್ಯ ಸೇವೆ ಹಾಗೂ ಅಗತ್ಯ ಆರೈಕೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.