ಬೆಂಗಳೂರಲ್ಲಿ SIR ವಿರುದ್ಧ ಪ್ರೊಟೆಸ್ಟ್! ಪ್ರಕಾಶ್ ರಾಜ್, ಧ್ರುವ್ ರಾಠೀ ಗರಂ; ‘ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಿ’| Bengaluru SIR Protest

ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರುದ್ಧ ಭಾರೀ ಪ್ರತಿಭಟನೆ ನಡೆಯಿತು. ಪ್ರಕಾಶ್ ರಾಜ್, ಧ್ರುವ್ ರಾಠೀ ಹಾಗೂ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು.
Bengaluru SIR Protest
ಬೆಂಗಳೂರಿನ ಎಸ್‌ಐಆರ್ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್, ಧ್ರುವ್ ರಾಠೀ ಮತ್ತು ಅಭಿಜೀತ್ ದೀಪ್ಕೆ
Published on: 

Bengaluru SIR Protest: ಮತದಾರರ ಪಟ್ಟಿಯ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಭಾರೀ ಪ್ರತಿಭಟನೆ ನಡೆಯಿತು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಯೂಟ್ಯೂಬರ್ ಧ್ರುವ್ ರಾಠೀ ಹಾಗೂ ನಟ-ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಪ್ರತಿಭಟನೆಗೆ ನೇತೃತ್ವ ನೀಡಿದರು.

ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಘೋಷಣೆಗಳಿಂದ ಮೊಳಗಿದ ಫ್ರೀಡಂ ಪಾರ್ಕ್

ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಶಾಂತವಾಗಿದ್ದ ಪ್ರತಿಭಟನಾ ಸ್ಥಳದಲ್ಲಿ ಬಳಿಕ ಘೋಷಣೆಗಳು ಜೋರಾದವು. ಎಸ್‌ಐಆರ್ ಪ್ರಕ್ರಿಯೆ ನಿಲ್ಲಿಸಬೇಕು, ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ನಿರಂತರವಾಗಿ ಘೋಷಣೆ ಕೂಗಿದರು.

ಪ್ರತಿಭಟನಾ ಸ್ಥಳದಲ್ಲಿ ಹಲವು ವಿಭಿನ್ನ ಬರಹಗಳಿದ್ದ ಪೋಸ್ಟರ್‌ಗಳು ಗಮನ ಸೆಳೆದವು. ‘ಹೆಸರು ಪತ್ತೆಯಾಗಿಲ್ಲ – ದೋಷ 404’, ‘ಎಲ್ಲಾ ಮುಗೀತು, ರಾಜೀನಾಮೆ ಕೊಡಿ ಸರ್’, ‘ನಮ್ಮನ್ನು ಅಳಿಸಬೇಡಿ, ನಮ್ಮ ಮಾತು ಕೇಳಿ’ ಎಂಬ ಬರಹಗಳಿರುವ ಪೋಸ್ಟರ್‌ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಇದರ ಜತೆಗೆ ‘ಸರ್ವಾಧಿಕಾರವನ್ನು ಸಹಿಸಲ್ಲ’, ‘ಮತ ಕಳ್ಳತನ’, ‘ಗ್ಯಾನೇಶ್ ಕುಮಾರ್, ಕುರ್ಚಿ ಬಿಟ್ಟು ಕೆಳಗಿಳಿಯಿರಿ’ ಎಂಬ ಘೋಷಣೆಗಳೂ ಕೇಳಿಬಂದವು.

‘ಚಪ್ಪಲಿ ಪ್ರತಿಭಟನೆ’

ಕರ್ನಾಟಕದ ವಿವಿಧ ಭಾಗಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಈ ಪ್ರತಿಭಟನೆಯನ್ನು ‘ಜನತಾ ನ್ಯಾಯಮಂಡಳಿ’ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಇದಾದ ಬಳಿಕ ಮಹಿಳೆಯರಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ‘ಚಪ್ಪಲಿ ಪ್ರತಿಭಟನೆ’ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಚಿತ್ರಗಳಿರುವ ಪೋಸ್ಟರ್‌ಗಳೂ ಕಂಡುಬಂದವು. ಇದರ ಜತೆಗೆ ‘ಪ್ರಜಾಪ್ರಭುತ್ವದ ಮಹಾ ಕಳ್ಳತನ’ ಎಂಬ ಬರಹವಿದ್ದ ಪೋಸ್ಟರ್ ಕೂಡ ಗಮನ ಸೆಳೆಯಿತು.

ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಒಗ್ಗಟ್ಟಾಗಿ

ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಮುಜಿಬುರ್ ರೆಹಮಾನ್ ಮಾತನಾಡಿ, ಪ್ರತಿಭಟನೆ ನಡೆಸುವುದು ತಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದು ಹೇಳಿದರು. ತಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದರು. ತಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ ಮುಜಿಬುರ್, ತಮ್ಮ ಹೆಸರನ್ನು ತೆಗೆದುಹಾಕುವಂತೆ ನಮೂನೆ-7 ಅರ್ಜಿ ಸಲ್ಲಿಸಿದ್ದು ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 35 ವರ್ಷ ಪ್ರತ್ಯೇಕವಾಗಿದ್ದರೂ ಡಿವೋರ್ಸ್ ಆಗಿರಲಿಲ್ಲ; ನಾನಾ ಪಾಟೇಕರ್-ನೀಲಕಾಂತಿ ಯಾಕೆ ದೂರವಾದ್ರು? | Nana Patekar Wife

ಬಿಗಿ ಪೊಲೀಸ್ ಭದ್ರತೆ

ಪ್ರತಿಭಟನೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net