ರಾಜ್ಯದಲ್ಲಿ ಕೆಟ್ಟು ನಿಂತಿವೆ ಮಳೆ ಮಾಪನ ಕೇಂದ್ರಗಳು - Rain gauge stations

ರೈತರಿಗೆ ತೊಂದರೆ
ರಾಜ್ಯದಲ್ಲಿ ಕೆಟ್ಟು ನಿಂತಿವೆ ಮಳೆ ಮಾಪನ ಕೇಂದ್ರಗಳು
Published on: 

ಬೆಂಗಳೂರು: (Rain gauge stations) ಮಳೆಯ ನೈಜ ಪ್ರಮಾಣ ಮಾಹಿತಿ ಒದಗಿಸಿ ಬೆಳೆವಿಮೆ, ಬೆಳೆ ಹಾನಿ ನಷ್ಟ ಪರಿಹಾರ ವಿತರಣೆ, ಪ್ರವಾಹ ಮತ್ತು ಬರ ಪರಿಸ್ಥಿತಿ ನಿಭಾಯಿಸಲೆಂದೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ರಾಜ್ಯಾದ್ಯಂತ ಸ್ಥಾಪಿಸಿರುವ ಸಾವಿರಾರು ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿನ ಯಂತ್ರಗಳು ಸೂಕ್ತ ನಿರ್ವಹಣೆವಿಲ್ಲದೆ ಕೆಟ್ಟುನಿಂತಿವೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಟ್ಟು 6,605 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1,959 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ವಾರ್ಷಿಕ ನಿರ್ವಹಣೆ ಅವಧಿಯು 2022ರ ಮಾರ್ಚ್‌ಗೆ ಮುಕ್ತಾಯವಾಗಿದೆ. ಮಳೆ ಮಾಪನ ಕೇಂದ್ರಗಳ ನಿರ್ವಹಣೆಗಾಗಿ 2025ರ ಅಕ್ಟೋಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ, ಮೊದಲನೇ ಮತ್ತು 2ನೇ ಟೆಂಡರ್‌ನಲ್ಲಿ ಪ್ರಕ್ರಿಯೆಯಲ್ಲಿ ಬಿಡ್‌ದಾರರು ತಾಂತ್ರಿಕವಾಗಿ ಅರ್ಹತೆ ಪಡೆಯಲಿಲ್ಲ. 3ನೇ ಬಾರಿಗೆ ಟೆಂಡರ್ ಕರೆದಾಗ ಅರ್ಹ ಬಿಡ್‌ದಾರರಿಗೆ ಕಾರ್ಯಾದೇಶ ಪತ್ರ ನೀಡಲಾಗಿದೆ.

ಈವರೆಗೆ 1,959 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ 1,791 ಕೇಂದ್ರಗಳು ಸಿವಿಲ್ ಹಂತದ ಕಾಮಗಾರಿಗಳು ಮುಕ್ತಾಯವಾಗಿದ್ದು, ಬರೀ 359 ಕೇಂದ್ರಗಳಿಂದ ದತ್ತಾಂಶ ಸ್ವೀಕರಿಸಲಾಗುತ್ತಿದೆ. ಪ್ರಸ್ತುತ 4,646 ಮಳೆ ಮಾಪನ ಕೇಂದ್ರಗಳು ವಾರ್ಷಿಕ ನಿರ್ವಹಣೆಯಲ್ಲಿದ್ದು, ಇವುಗಳಲ್ಲಿ 1,044 ಮಳೆ ಮಾಪನ ಕೇಂದ್ರಗಳು ಕಳವುವಾಗಿದ್ದರೆ, ಇನ್ನೂ ಹಲವು ಹಾನಿಗೊಳಗಾಗಿವೆ. ಅಲ್ಲದೆ, ಗ್ರಾ.ಪಂ ಸೇರಿ ಇತರೆ ಸರ್ಕಾರಿ ಕಟ್ಟಡದ ಮೊದಲನೇ ಮಹಡಿ ಮೇಲೆ ಛಾವಣಿ ನಿರ್ಮಿಸಿದ ಕಾರಣ ಸಾಕಷ್ಟು ಮಳೆ ಮಾಪನ ಕೇಂದ್ರಗಳನ್ನು ಬೇರೆ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಳೆ/ಹವಾಮಾನ ಮಾಪನ ಕೇಂದ್ರಗಳು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಜಿಪಿಎಸ್ ಸಂಪರ್ಕ ಆಧಾರಿತವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ತಾತ್ಕಾಲಿಕವಾಗಿ ಕೆಲವೊಂದು ಸ್ಥಗಿತಗೊಂಡಿವೆ.

Also Read
26ಕ್ಕೆ ಸೈಕ್ಲೋನ್ ಸಂಭವ: 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ - Cyclone expected on the 26th
ರೈತರಿಗೆ ತೊಂದರೆ

ವಿಮಾ ಪರಿಹಾರಕ್ಕೆ ತೊಂದರೆ:

ರಾಜ್ಯದಲ್ಲಿ ಪ್ರತಿವರ್ಷ ಅತಿವೃಷ್ಟಿ, ಅನಾವೃಷ್ಟಿ ಜತೆಗೆ ವಿವಿಧ ಪ್ರಾಕೃತಿಕ ವಿಕೋಪಗಳು, ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಅಪಾರ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮೆ’ ಯೋಜನೆಯಡಿ ರೈತರಿಗೆ ಮಳೆಯ ಪ್ರಮಾಣ, ಆದ್ರತೆ ಹಾಗೂ ತಾಪಮಾನ ಅಂಶ ಪರಿಗಣಿಸಲಾಗುತ್ತದೆ. ಮಳೆ ಮಾಪನ ಕೇಂದ್ರಗಳು ಕೆಟ್ಟು ನಿಂತ ಸಂದರ್ಭದಲ್ಲಿ ಮಳೆ ಕೊರತೆ ಅಥವಾ ಅತಿವೃಷ್ಟಿಯಾದಾಗ ಮಾಪನ ಕೇಂದ್ರಗಳು ಸರಿಯಾದ ದತ್ತಾಂಶ ದಾಖಲಿಸದಿದ್ದರೆ, ವಿಮಾ ಕಂಪನಿಗಳು ರೈತರ ಪರಿಹಾರ ಅರ್ಜಿಗಳನ್ನು ತಿರಸ್ಕರಿಸಲಿವೆ. ಸರ್ಕಾರವಾಗಲಿ, ಬೆಳೆ ವಿಮೆ ಕಂಪನಿಗಳಾಗಲಿ ಮಳೆ ದತ್ತಾಂಶದ ಆಧಾರದ ಮೇಲೆಯೇ ರೈತರಿಗೆ ಪರಿಹಾರಗಳ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ತಾಲೂಕುಗಳನ್ನು ಬರಪೀಡಿತ ಅಥವಾ ಪ್ರವಾಹ ಪೀಡಿತ ಎಂದು ಘೋಷಿಸಲು ವೈಜ್ಞಾನಿಕ ದತ್ತಾಂಶದ ಅಗತ್ಯವಿರುತ್ತದೆ. ಮಾಪನ ಕೇಂದ್ರಗಳು ಕೈಕೊಟ್ಟಾಗ ಸರಿಯಾದ ನಷ್ಟದ ಅಂದಾಜು ಸಿಗದೆ ಸರ್ಕಾರಕ್ಕೂ ನಿರ್ಧಾರ ಕೈಗೊಳ್ಳಲು ತೊಡಕಾಗುತ್ತದೆ.

ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಣೆ ಹೇಗೆ?

ಎಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ ಎಂಬುದರ ಬಗ್ಗೆ ಮಳೆ ಮಾಪನ ಕೇಂದ್ರಗಳಿಂದ ತಿಳಿಯಬಹುದು. ಮೊದಲು ಪ್ರತಿ ಮಳೆ ಮಾಪನ ಕೇಂದ್ರಗಳಿಗೆ ಓರ್ವ ವ್ಯಕ್ತಿ ಇದ್ದು, ಪ್ರತಿ ದಿನ ಬೆಳಗ್ಗೆ ಮಳೆ ಮಾಪನ ಕೇಂದ್ರಕ್ಕೆ ತೆರಳಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಗೆ ಮಾಹಿತಿ ನೀಡುತ್ತಿದ್ದರು. ಆದರೆ, ಇದೀಗ ತಂತ್ರಜ್ಞಾನ ಮುಂದುವರೆದಂತೆ ಮಳೆ ಮಾಪನ ಕೇಂದ್ರದ ಯಂತ್ರಕ್ಕೆ ಒಂದು ಸಿಮ್ ಹಾಕಲಾಗುತ್ತದೆ. ಇದರ ಮೂಲಕ ಪ್ರತಿ ಗಂಟೆಗೂ ಮಳೆ ಮಾಹಿತಿ ಬೆಂಗಳೂರು ಹವಾಮಾನ ಇಲಾಖೆಗೆ ಲಭ್ಯವಾಗುತ್ತಿದೆ.

ಯಂತ್ರಗಳ ನಿಷ್ಕ್ರಿಯಕ್ಕೆ ಕಾರಣವೇನು?

* ಬ್ಯಾಟರಿ ಸಾಮರ್ಥ್ಯ ಕ್ಷೀಣಿ

* ಸೆನ್ಸಾರ್ ದೋಷ ನೆಟ್‌ವರ್ಕ್ ಸಮಸ್ಯೆ

* ನಿರ್ವಹಣೆ ಕೊರತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net