ಬೆಂಗಳೂರು: (Rain all day in the Silicon City) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ನಗರ ಹಲವೆಡೆ ಗುರುವಾರ ಇಡೀ ದಿನ ಬಿರುಗಾಳಿ ಸಹಿತ ಮಳೆಯಾಯಿತು. ಬೆಳಿಗ್ಗೆಯಿಂದ ಕೆಲವು ಭಾಗಗಳಲ್ಲಿ ಮಳೆಯಾದರೆ, ಮಧ್ಯಾಹ್ನವೂ ಹಲವು ಭಾಗಗಳಲ್ಲಿ ಬಿರುಸಾಗಿತ್ತು. ಸಂಜೆ ನಂತರ ಮತ್ತೆ ವರುಣಾರ್ಭಟ ಇತ್ತು.
ಮೈಸೂರು ರಸ್ತೆ, ಹಲಸೂರು, ಇಂದಿರಾನಗರ, ಎಂ.ಜಿ.ರಸ್ತೆ ಮತ್ತು ಸಂಪಂಗಿರಾಮನಗರ ಸಹಿತ ಹಲವು ಬಡಾವಣೆಗಳಲ್ಲಿ ಮಳೆ ಜೋರಾಗಿತ್ತು. ಕೆಲವು ಕಡೆಗಳಲ್ಲಿ ಗಾಳಿಯ ಅಬ್ಬರವೂ ಕಂಡುಬಂದಿತು.ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿತ್ತು. ಅದರಲ್ಲಿಯೇ ವಾಹನ ಸವಾರರು ಸಂಚರಿಸಿದರು. ಬಹಳಷ್ಟು ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ದಸರಾ ರಜೆ ಮುಗಿಸಿ ಕಚೇರಿಗೆ ಆಗಮಿಸಿ ಸಂಜೆ ವೇಳೆ ಮನೆಗೆ ತೆರಳುವಾಗ ಮಳೆಗೆ ಅಲ್ಲಲ್ಲಿ ಸಿಲುಕಿದ್ದರು.
ಜಯನಗರ, ಲಾಲ್‌ಬಾಗ್ ಸುತ್ತಮುತ್ತ ಧಾರಾಕಾರ ಮಳೆ ಇತ್ತು. ಕಾರ್ಪೊರೇಷನ್, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ವಿಧಾನಸೌಧ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿತ್ತು.
ರಸ್ತೆ ಬದಿ ಸಂಚರಿಸುತ್ತಿದ್ದ ಪಾದಚಾರಿಗಳು ಮತ್ತು ಸವಾರರು ರಕ್ಷಣೆಗೆ ಪರದಾಡುವಂತಾಯಿತು. ಮಳೆಯಿಂದ ಬಚಾವಾಗಲು ರಸ್ತೆಬದಿಯ ಹೋಟೆಲ್‌ಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಆಶ್ರಯ ಪಡೆದರು. ಕೊಡೆ ಹಿಡಿದು ಜನರು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 6 ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿ.ಸೆ.ಇರುವ ಸಾಧ್ಯತೆ ಇದೆ ಎಂದು ಹವಾವಾನ ಇಲಾಖೆ ಮಾಹಿತಿ ನೀಡಿದೆ.