LLB ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್​: ಇನ್ಸ್​ಪೆಕ್ಟರ್​ ನಡೆದುಕೊಂಡ ರೀತಿಯೇ ಸಾವಿಗೆ ಕಾರಣ, ಎಫ್​ಐಆರ್​ ದಾಖಲು

Moufia
Published on

ಕೊಚ್ಚಿ: ಕೇರಳದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಸುಧೀರ್​ ಪಾತ್ರ ಇರುವುದು ಎಫ್​ಐಆರ್​ನಿಂದ ಖಚಿತವಾಗಿದೆ.​​ ಮೃತ ವಿದ್ಯಾರ್ಥಿನಿ ಜತೆ ಠಾಣೆಯಲ್ಲಿ ಇನ್​​ಪೆಕ್ಟರ್​ ನಡೆದುಕೊಂಡು ರೀತಿಯೇ ಆಕೆಯ ಆತ್ಮಹತ್ಯೆಗೆ ಪ್ರಚೋದನೆಯಾಗಿದೆ ಎಂದು ಹೇಳಲಾಗಿದೆ.

ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನೀಡಿದ ಕೌಟುಂಬಿಕ ದೌರ್ಜನ್ಯದ ದೂರನ್ನು ಆಲಿಸಲು ಮೃತ ಮೌಫಿಯಾ ಮತ್ತು ಆಕೆಯ ಪತಿ ಸುಹೇಲ್ ಅವರ ಎರಡೂ ಕುಟುಂಬಗಳನ್ನು ಅಲುವಾ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಸಂಧಾನ ಮಾತುಕತೆ ನಡೆಯುವಾಗ ಮೌಫಿಯಾ ತನ್ನ ಪತಿ ಸುಹೇಲ್​ ಕೆನ್ನಗೆ ಬಾರಿಸಿದ್ದಳು. ಇದರಿಂದ ಕೋಪಗೊಂಡ ಇನ್ಸ್​ಪೆಕ್ಟರ್​ ಸುಧೀರ್​, ಮೌಫಿಯಾರನ್ನು ನಿಂದಿಸಿ ಅವಮಾನಿಸಿದ್ದರು. ಇದಾದ ಬಳಿಕ ಮನೆ ಬಂದ ಮೌಫಿಯಾ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಠಾಣೆಯಲ್ಲಿ ನನಗೆ ನ್ಯಾಯ ಸಿಗಲಿಲ್ಲ ಎಂಬ ಮೌಫಿಯಾ ಭಾವುಕವಾಗಿ ಡೆತ್​ನೋಟ್​ನಲ್ಲಿ ಬರೆದಿದ್ದರು.

ಈ ಪ್ರಕರಣದಲ್ಲಿ ಸುಧೀರ್​ ದೋಷ ಎಸಗಿರುವುದು ಸ್ಪಷ್ಟವಾಗಿದೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿ​ಸಲಾಗಿದೆ. ಸದ್ಯ ಅವರನ್ನು ಅಮಾನತು ಮಾಡಲಾಗಿದ್ದು, ವಿಭಾಗೀಯ ತನಿಖೆಗೆ ಆದೇಶಿಸಲಾಗಿದೆ.

ಸುಧೀರ್​ ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲೇನಲ್ಲ. ಅನೇಕ ಬಾರಿ ದೂರು ನೀಡಲು ಬಂದವರ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೊಲ್ಲಂನ ಅಂಚಲ್​ ಮತ್ತು ಕಡಕ್ಕಲ್​ ಪೊಲೀಸ್​ ಠಾಣೆಯಲ್ಲಿದ್ದ ವೇಳೆ ಅನುಚಿತವಾಗಿ ವರ್ತನೆ ಸೇರಿದಂತೆ ಅನೇಕ ಆರೋಪಗಳು ಸುಧೀರ್​ ವಿರುದ್ಧ ಕೇಳಿಬಂದಿದೆ.

ಇನ್ನು ಕೇರಳ ರಾಜ್ಯವನ್ನೇ ಆತಂಕಕ್ಕೆ ದೂಡಿದ್ದ ಉತ್ತರಾ ಕೊಲೆ ಪ್ರಕರಣದಲ್ಲೂ ಸುಧೀರ್​ ಹೆಸರು ಕೇಳಿಬಂದಿತ್ತು. ಪ್ರಕರಣ ಸಂಬಂಧ ಸುಧೀರ್​ ನೀಡಿದ್ದ ವರದಿಯಲ್ಲಿ ಗಂಭೀರ ಲೋಪಗಳಿರುವುದು ಕಂಡುಬಂದಿತ್ತು. ಅಲ್ಲದೆ, ಸಾಕ್ಷ್ಯ ಸಂಗ್ರಹದಲ್ಲೂ ಲೋಪ ಎಸಗಿದ್ದರು. ಕೊಲೆ ನಡೆದ ನಡೆದ ಮಹತ್ವದ ಸಾಕ್ಷ್ಯಗಳ ಸಂಗ್ರಹವನ್ನು ಸುಧೀರ್​ ಮಾಡಿಲೇ ಇಲ್ಲ. ಆ ಬಳಿಕ ಇದೇ ಪ್ರಕರಣದಲ್ಲಿ ಅಪರಾಧ ದಳ ತನಿಖೆ ನಡೆಸಿದಾಗ ಸುಧೀರ್​ ಅಸಡ್ಡೆ ತೋರಿದ ಸಾಕ್ಷಿಗಳೇ ಪ್ರಕರಣಕ್ಕೆ ಪ್ರಮುಖ ತಿರುವು ನೀಡಿದವು. ಅಲ್ಲದೆ, ಉತ್ತರಾ ಸಾವಿಗೆ ನ್ಯಾಯವೂ ಸಿಕ್ಕಿತು.

ಒಮ್ಮೆ ಕೊಲ್ಲಂನಲ್ಲಿ ವಲಸೆ ಕಾರ್ಮಿಕರು ದೂರು ನೀಡಲು ಠಾಣೆಗೆ ಬಂದಾಗ ಅವರನ್ನು ಸುಧೀರ್​ ಅಗೌರವದಿಂದ ನಡೆಸಿಕೊಂಡಿದ್ದರು. ವಲಸೆ ಕಾರ್ಮಿಕರಿಂದ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ವಿಕೃತಿಯನ್ನು ಮೆರೆದಿದ್ದರು. ಆಗಲೂ ಸುಧೀರ್​ ಅವರಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಬುದ್ಧಿಯನ್ನು ಮಾತ್ರ ಸುಧೀರ್​ ಬಿಟ್ಟಿರಲಿಲ್ಲ.

ನ.22 ರಂದು ಮೌಫಿಯಾ ಪರ್ವೀನ್​ (23) ಎಂಬ ಎಲ್​ಎಲ್​ಬಿ ವಿದ್ಯಾರ್ಥಿನಿ ತನ್ನ ಗಂಡನ ಕಿರುಕುಳ ಸಹಿಸದೇ ಆತನ ವಿರುದ್ಧ ದೂರು ನೀಡಲು ಬಂದಾಗಲೂ ಇದೇ ಸುಧೀರ್​ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ದೂರು ನೀಡಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಗಂಡನ ಕುಟುಂಬದ ಜತೆ ಸಂಧಾನಕ್ಕಾಗಿ ನನ್ನನ್ನು ಕರೆಸಿದರು ಎಂದು ಮೌಫಿಯಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಗಂಡನ ಕಪಾಳಕ್ಕೆ ಬಾರಿಸಿದ್ದಳು. ಅದನ್ನು ನೋಡಿ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸುಧೀರ್​ ಆಕೆಯನ್ನು ಅವಮಾನಿಸಿದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ನ್ಯಾಯಾ ಸಿಗಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಎಲ್​ಎಲ್​ಬಿ ಓದುತ್ತಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಾಸ್ಸೆರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net